ಡ್ರಗ್ಸ್‌ ಕಿಂಗ್‌ಪಿನ್‌ ತಮಿಳು ಚಿತ್ರ ನಿರ್ಮಾಪಕ ಜಾಫರ್‌ ಸಾದಿಕ್‌ ಸೆರೆ

KannadaprabhaNewsNetwork | Updated : Mar 10 2024, 01:40 PM IST

ಸಾರಾಂಶ

ಇತ್ತೀಚೆಗೆ ಬೆಳಕಿಗೆ ಬಂದಿದ್ದ 2 ಸಾವಿರ ಕೋಟಿ ರು. ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌, ತಮಿಳು ಚಿತ್ರ ನಿರ್ಮಾಪಕ ಹಾಗೂ ಉಚ್ಚಾಟಿತ ಡಿಎಂಕೆ ಮುಖಂಡ ಜಾಫರ್‌ ಸಾದಿಕ್‌ನನ್ನು ಬಂಧಿಸುವಲ್ಲಿ ಮಾದಕ ದ್ರವ್ಯ ನಿಯಂತ್ರಣಾ ಆಯೋಗ(ಎನ್‌ಸಿಬಿ) ಯಶಸ್ವಿಯಾಗಿದೆ.

ನವದೆಹಲಿ: ಇತ್ತೀಚೆಗೆ ಬೆಳಕಿಗೆ ಬಂದಿದ್ದ 2 ಸಾವಿರ ಕೋಟಿ ರು. ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌, ತಮಿಳು ಚಿತ್ರ ನಿರ್ಮಾಪಕ ಹಾಗೂ ಉಚ್ಚಾಟಿತ ಡಿಎಂಕೆ ಮುಖಂಡ ಜಾಫರ್‌ ಸಾದಿಕ್‌ನನ್ನು ಬಂಧಿಸುವಲ್ಲಿ ಮಾದಕ ದ್ರವ್ಯ ನಿಯಂತ್ರಣಾ ಆಯೋಗ(ಎನ್‌ಸಿಬಿ) ಯಶಸ್ವಿಯಾಗಿದೆ.

ಭಾರತದಿಂದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಶ್ರೀಲಂಕಾ ಸೇರಿದಂತೆ ಪ್ರಪಂಚದ ಹಲವು ದೇಶಗಳಿಗೆ 2 ಸಾವಿರ ಕೋಟಿ ರು.ಗೂ ಅಧಿಕ ಮೌಲ್ಯದ ಡ್ರಗ್ಸ್‌ಗಳನ್ನು ಕಳ್ಳಸಾಗಣೆ ಮಾಡಿರುವ ಜಾಲದ ರೂವಾರಿ ಈತ ಎನ್ನಲಾಗಿದೆ. ಈತನ ಪತ್ತೆಗಾಗಿ ಕಳೆದ 4 ತಿಂಗಳಿಂದಲೂ ಶೋಧ ನಡೆಯುತ್ತಿತ್ತು.

ಎನ್‌ಸಿಬಿ ಅಧಿಕಾರಿಗಳು ಕಳೆದ ವಾರವಷ್ಟೇ ಈತನ ಸಹಚರರು ರೈಲು ಪ್ರಯಾಣದ ಸೋಗಿನಲ್ಲಿ ಶ್ರೀಲಂಕಾಗೆ ಅಕ್ರಮವಾಗಿ ಸಾಗಿಸುತ್ತಿದ್ದ 180 ಕೋಟಿ ರು. ಮೌಲ್ಯದ 36 ಕೆಜಿ ನಿಷೇಧಿತ ಮೆಥಾಂಫೆಟಾಮೈನ್‌ ಎಂಬ ಮಾದಕ ದ್ರವ್ಯವನ್ನು ಮದುರೈ ಬಳಿ ವಶಪಡಿಸಿಕೊಂಡಿದ್ದರು. 

ಅಲ್ಲದೆ ಕಳೆದ ಫೆ.29ರಂದು ಚೆನ್ನೈನಲ್ಲಿರುವ ಕೊಡಂಗೈಯ್ಯೂರು ಉಗ್ರಾಣದಲ್ಲಿ 6 ಕೆಜಿ ನಿಷೇಧಿತ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಅವರು ನೀಡಿದ ಸುಳಿವಿನ ಆಧಾರದಲ್ಲಿ ಸಾದಿಕ್‌ನನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ಸಾದಿಕ್‌ ಜಾಫರ್‌?
ಸಾದಿಕ್‌ ಜಾಫರ್‌ ಡಿಎಂಕೆ ಪಕ್ಷದಲ್ಲಿ ತಮಿಳುನಾಡು ಪಶ್ಚಿಮ ವಲಯದ ಸಾಗರೋತ್ತರ ಭಾರತೀಯರ ಮೋರ್ಚಾದ ಸಹಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈತನ ಹೆಸರು ಡ್ರಗ್ಸ್‌ ದಂಧೆಯಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಫೆ.25ರಂದು ಪಕ್ಷ ಈತನನ್ನು ಉಚ್ಚಾಟಿಸಿತ್ತು. 

ಈ ನಡುವೆ ಜಾಫರ್‌ ತಮಿಳು ಚಿತ್ರರಂಗದಲ್ಲಿ ಮಂಗೈ ಎಂಬ ಚಿತ್ರವನ್ನೂ ನಿರ್ಮಾಣ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿರುವ ಇಂದ್ರ ಚಿತ್ರವೂ ಸೇರಿದಂತೆ ಪ್ರಸ್ತುತ ಮೂರು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. 

ಹೇಗೆ ಡ್ರಗ್ಸ್‌ ಕಾರ್ಯಾಚರಣೆ?
ಈತ ವಿಮಾನಗಳಲ್ಲಿ ಆಹಾರ ಪದಾರ್ಥಗಳ ಚೀಲಗಳಲ್ಲಿ ಗುಟ್ಟಾಗಿ ಮಾದಕ ದ್ರವ್ಯಗಳನ್ನು ಬೆರೆಸಿ ವಿಶ್ವದ ಹಲವು ದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ. 

ಇದುವರೆಗೂ ಆತ ವಿಶ್ವಾದ್ಯಂತ ಬರೋಬ್ಬರು 3,500 ಕೆಜಿಗೂ ಅಧಿಕ ಸ್ಯೂಡೋಫೆಡ್ರೈನ್‌ ಮಾದಕ ದ್ರವ್ಯವನ್ನು 45 ಕ್ಕೂ ಹೆಚ್ಚು ಬಾರಿ ಕಳ್ಳಸಾಗಾಣೆ ಮಾಡಿದ್ದಾನೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಅಣ್ಣಾಮಲೈ ವಾಗ್ದಾಳಿ: ಸಾದಿಕ್‌ ಬಂಧನ ಬೆನ್ನಲ್ಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್‌ ಮಾಡಿ, ‘ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಆಡಳಿತಾರೂಢ ಡಿಎಂಕೆ ಕಾರ್ಯಕರ್ತ ಸಾದಿಕ್‌ನನ್ನು ಬಂಧಿಸಲಾಗಿದೆ. 

ಈ ಮೂಲಕ ಡಿಎಂಕೆ ತಮಿಳುನಾಡನ್ನು ಮಾದಕ ದ್ರವ್ಯಗಳ ರಾಜಧಾನಿ ಮಾಡಲು ಹೊರಟಿರುವುದು ಸಾಬೀತಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Share this article