ಕರ್ನಾಟಕದ 2 ಸೇರಿ 15 ಗ್ರಾಮೀಣ ಬ್ಯಾಂಕ್‌ ಶೀಘ್ರ ವಿಲೀನ?

KannadaprabhaNewsNetwork | Updated : Apr 07 2025, 05:37 AM IST

ಸಾರಾಂಶ

ಗ್ರಾಮೀಣ ಬ್ಯಾಂಕ್‌ಗಳ ವಿಲೀನದ ಮೂಲಕ ಅವುಗಳನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಇದೀಗ ಕರ್ನಾಟಕ 2 ಸೇರಿದಂತೆ ವಿವಿಧ ರಾಜ್ಯಗಳ 15 ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನ ಮಾಡುವ ಪ್ರಸ್ತಾಪ ಸಿದ್ಧಪಡಿಸಿದೆ.

ನವದೆಹಲಿ: ಗ್ರಾಮೀಣ ಬ್ಯಾಂಕ್‌ಗಳ ವಿಲೀನದ ಮೂಲಕ ಅವುಗಳನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ಇದೀಗ ಕರ್ನಾಟಕ 2 ಸೇರಿದಂತೆ ವಿವಿಧ ರಾಜ್ಯಗಳ 15 ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನ ಮಾಡುವ ಪ್ರಸ್ತಾಪ ಸಿದ್ಧಪಡಿಸಿದೆ.

ಈ ಪ್ರಸ್ತಾಪ ಜಾರಿಗೆ ಬಂದರೆ ದೇಶವ್ಯಾಪಿ ಇರುವ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 48ರಿಂದ 23ಕ್ಕೆ ಇಳಿಯಲಿದೆ. ನಿರ್ವಹಣಾ ಸಾಮರ್ಥ್ಯ ಹೆಚ್ಚಳ ಮತ್ತು ವೆಚ್ಚ ಸ್ಥಿರೀಕರಣದ ಉದ್ದೇಶಕ್ಕಾಗಿ ಸರ್ಕಾರ ಈ ಪ್ರಸ್ತಾಪ ಮಾಡಿದೆ. ಗ್ರಾಮೀಣ ಬ್ಯಾಂಕ್‌ಗಳ ವಿಲೀನದ 4ನೇ ಪ್ರಕ್ರಿಯೆ ಇದಾಗಿರಲಿದೆ.

ಎಲ್ಲಿ? ಎಷ್ಟು?:

ಆಂಧ್ರಪ್ರದೇಶದ 4, ಉತ್ತರಪ್ರದೇಶ, ಪಶ್ಚಿಮ ಬಂಗಾಳದ ತಲಾ 3, ಕರ್ನಾಟಕ, ಬಿಹಾರ, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದ ತಲಾ 2 ಬ್ಯಾಂಕ್‌ಗಳು (ಒಟ್ಟು 26) ಸಂಭಾವ್ಯ ವಿಲೀನ ವ್ಯಾಪ್ತಿಯ ಪಟ್ಟಿಯಲ್ಲಿವೆ. ಇದು ಶಾರ್ಟ್‌ಲಿಸ್ಟ್‌ ಆಗಿದ್ದು, ಸಾಧಕ-ಬಾಧಕ ಪರಿಶೀಲಿಸಿ 15 ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತದೆ.

ಕರ್ನಾಟಕದಲ್ಲಿರುವ ಗ್ರಾಮೀಣ ಬ್ಯಾಂಕ್‌ಗಳು ಎಂದರೆ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್.

196ರಿಂದ 43ಕ್ಕೆ:

2004-05ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಆರಂಭಿಸಿತ್ತು. ಹೀಗೆ 3 ಹಂತಗಳಲ್ಲಿ ನಡೆಸಿದ ಪ್ರಕ್ರಿಯೆ ಬಳಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 196ರಿಂದ 43ಕ್ಕೆ ಇಳಿದಿದೆ.

ಯಾವುದೀ ಗ್ರಾಮೀಣ ಬ್ಯಾಂಕ್‌ಗಳು?:

ಗ್ರಾಮೀಣ ಬ್ಯಾಂಕ್‌ಗಳನ್ನು 1976ರ ಆರ್‌ಆರ್‌ಬಿ ಕಾಯ್ದೆ ಅನ್ವಯ ಸ್ಥಾಪಿಸಲಾಗಿತ್ತು. ಸಣ್ನ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಭಾಗದ ಕಲಾವಿದರಿಗೆ ಸುಲಭವಾಗಿ ಸಾಲ ನೀಡುವ ಉದ್ದೇಶವನ್ನು ಈ ಬ್ಯಾಂಕ್‌ಗಳು ಹೊಂದಿವೆ. ಇಂಥ ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರ ಶೇ.50, ಲೀಡ್‌ ಬ್ಯಾಂಕ್‌ಗಳು ಶೇ.35, ರಾಜ್ಯ ಸರ್ಕಾರಗಳು ಶೇ.15ರಷ್ಟು ಬಂಡವಾಳದ ಪಾಲು ಹೊಂದಿವೆ. ಯಾವುದೇ ಹಂತದಲ್ಲಿ ಈ ಮೂರೂ ವಲಯಗಳ ಷೇರು ಪಾಲು ಕಡಿತವಾದರೂ, ಬ್ಯಾಂಕ್‌ನಲ್ಲಿ ಅವುಗಳ ಒಟ್ಟಾರೆ ಪಾಲು ಶೇ.51ಕ್ಕಿಂತ ಕೆಳಗೆ ಇಳಿಯಬಾರದು ಎಂಬ ನಿಯಮ ಇದೆ.

Share this article