ಮುಂಬೈ: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬೆದರಿಸುವ ಪ್ರಯತ್ನ ಮಾಡಿದ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ.
ದಾಳಿ ಮಾಡಿದ್ದೇ ನಾವು ಎಂದು ಡಾನ್ ಲಾರೆನ್ಸ್ ಬಿಷ್ಣೋಯಿ ಸೋದರ ಹಾಗೂ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಅನುಮೋಲ್ ಬಿಷ್ಣೋಯಿ ಹೇಳಿಕೆ ನೀಡಿದ್ದು, ‘ಇದು ಟ್ರೇಲರ್’ ಮಾತ್ರ ಎಂದು ಹೇಳಿದ್ದಾನೆ. ಈ ಮೂಲಕ ಮತ್ತಷ್ಟು ದಾಳಿಯ ಸುಳಿವು ನೀಡಿದ್ದಾನೆ.
ಇದರ ಬೆನ್ನಲ್ಲೇ ಇಬ್ಬರು ದಾಳಿಕೋರರ ಗುರುತನ್ನು ಸಿಸಿಟೀವಿ ಮೂಲಕ ಪತ್ತೆ ಹಚ್ಚಲಾಗಿದೆ. ಅವರಿಗಾಗಿ ತಲಾಶೆ ನಡೆದಿದೆ. ಸಲ್ಮಾನ್ ಮನೆ ಸುತ್ತ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ದಾಳಿ ನಡೆದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಕೂಡ ಪ್ರತಿಕ್ರಿಯಿಸಿ ಸಲ್ಮಾನ್ ಖಾನ್ ಜತೆ ಮಾತನಾಡಿದ್ದು, ‘ಪಾರದರ್ಶಕ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟುತ್ತೇವೆ’ ಎಂದು ತಿಳಿಸಿದ್ದಾರೆ.
ನಡೆದದ್ದೇನು?:
ಭಾನುವಾರ ಮುಂಜಾನೆ 5ರ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ತಂಡ ಸಲ್ಮಾನ್ ವಾಸವಿರುವ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ 4 ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಅಪಾರ್ಟ್‌ಮೆಂಟ್ ಕಾಂಪೌಂಡ್‌ಗೆ ಗುಂಡು ತಾಗಿವೆ.ಮುಂಬೈ ಪೊಲೀಸರು ವಿಧಿವಿಜ್ಞಾನ ತಜ್ಞರ ಜೊತೆ ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ. ಆದರೆ ಘಟನೆ ನಡೆದ ವೇಳೆ ನಟ ಸಲ್ಮಾನ್ ಖಾನ್ ಇದ್ದರೇ ಎಂಬುದು ಇನ್ನೂ ಖಚಿತವಾಗಿಲ್ಲ. ಸಲ್ಮಾನ್ ನಿಕಟವರ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಲ್ಮಾನ್ ಮೇಲೇಕೆ ಬಿಷ್ಣೋಯಿ ಸಿಟ್ಟು?
ನಟ ಸಲ್ಮಾನ್ ಖಾನ್‌ಗೆ ಮೊದಲಿನಿಂದಲೂ ಜೀವ ಬೆದರಿಕೆ ಇದೆ. 2023ರಲ್ಲಿ ಲಾರೆನ್ಸ್ ಬಿಷ್ಣೋಯಿ ಮತ್ತು ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಸಹಚರರು ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳುಹಿಸಿದ್ದರು. 2022ರಲ್ಲೂ ಸಲ್ಮಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಜೀವಬೆದರಿಕೆ ಸಂದೇಶ ಬಂದಿತ್ತು. ಬಿಷ್ಣೋಯಿ ಸಮುದಾಯ ರಾಜಸ್ಥಾನದ್ದಾಗಿದೆ. ಬಿಷ್ಣೋಯಿಗಳ ಪಾಲಿಗೆ ಕೃಷ್ಣಮೃಗ ಪವಿತ್ರ. ಆದರೆ ಸಲ್ಮಾನ್ ಮೇಲೆ ಕೃಷ್ಣಮೃಗ ಹತ್ಯೆ ಮಾಡಿದ ಪ್ರಕರಣವಿದೆ. ಹೀಗಾಗಿ ಬಿಷ್ಣೋಯಿ ಗ್ಯಾಂಗ್ ಸಲ್ಮಾನ್‌ಗೆ ಬೆದರಿಕೆ ಹಾಕುತ್ತಿದೆ.