ಮುಂಬೈ: ನಟ ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿನ ನಿವಾಸದ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆಸಿ ಪರಾರಿ ಆಗಿದ್ದ ಇಬ್ಬರು ಶೂಟರ್‌ಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಬಿಹಾರದ ಮೂಲದ ಶೂಟರ್‌ಗಳಾದ ವಿಕ್ಕಿ ಗುಪ್ತಾ (24) ಹಾಗೂ ಸಾಗರ್ ಪಾಲ್ (21) ಎಂದು ಗುರುತಿಸಲಾಗಿದೆ. ಇಬ್ಬರೂ ದುಷ್ಕರ್ಮಿಗಳು ತಾವೇ ಗುಂಡು ಹಾರಿಸಿದ್ದು ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ದುಷ್ಕರ್ಮಿಗಳು ದಾಳಿ ಬಳಿಕ ರಸ್ತೆ ಮಾರ್ಗವಾಗಿ ಕಾರು ಹಾಗೂ ಬಸ್ಸುಗಳಲ್ಲಿ ಗುಜರಾತ್‌ನ ಕಛ್ ಜಿಲ್ಲೆಯ ಮಾಧ್ ಗ್ರಾಮದ ಮಾತಾ ನೋ ಮಾಧ್ ದೇಗುಲದಲ್ಲಿ ಅಡಗಿಕೊಂಡಿದ್ದರು. ಮಾಹಿತಿದಾರರು ಹಾಗೂ ತಾಂತ್ರಿಕ ಕೌಶಲ್ಯ ಬಳಸಿಕೊಂಡು ಮುಂಬೈನಿಂದ 12 ಪೊಲೀಸ್ ತಂಡಗಳು ಗುಜರಾತ್‌ಗೆ ಹೋಗಿದ್ದವು. ಮಂಗಳವಾರ ಮಾಧ್ ಜಿಲ್ಲೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಕಳೆದ ತಿಂಗಳೇ ಬಿಷ್ಣೋಯಿ ಕಳಿಸಿದ್ದ:
ಬಿಹಾರದ ಚಂಪಾರಣ್ಯ ಮೂಲದವರಾದ ಈ ದುಷ್ಕರ್ಮಿಗಳನ್ನು ವಿದೇಶದಲ್ಲಿರುವ ಡಾನ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ದಾಳಿಗೆ ನಿಯೋಜಿಸಿತ್ತು. ಮಾರ್ಚ್‌ನಲ್ಲೇ ಮುಂಬೈಗೆ ಬಂದಿದ್ದ ಇವರು ನಟನ ನಿವಾಸದಿಂದ 10 ಕಿ.ಮೀ. ದೂರದಲ್ಲಿ ಮನೆಯೊಂದನ್ನು 10 ಸಾವಿರ ರು.ಗೆ ಬಾಡಿಗೆ ಪಡೆದಿದ್ದರು. ಅಲ್ಲದೆ ಹತ್ಯೆಗೆಂದೇ ಬಳಸಲು 24 ಸಾವಿರ ರು. ನೀಡಿ ಏಪ್ರಿಲ್ 2ರಂದು ಬೈಕ್ ಒಂದನ್ನು ಖರೀದಿಸಿದ್ದರು. ನಟನ ಮನೆಯ ಸಮೀಕ್ಷೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಹತ್ಯೆಯೇ ಮುಖ್ಯ ಉದ್ದೇಶ:
ಅಲ್ಲದೆ, ಸಲ್ಮಾನ್ ಹತ್ಯೆಗೆಂದೇ ಇವರು ಸಂಚು ರೂಪಿಸಿದ್ದರು. ಒಂದು ರಂಜಾನ್ ವೇಳೆ ಅವರು ಮನೆಯೊಂದ ಹೊರಬಂದು ಅಭಿಮಾನಿಗಳತ್ತ ಕೈಬೀಸುವಾಗ ಹತ್ಯೆ ಮಾಡಬೇಕು ಎಂದುಕೊಂಡಿದ್ದರು. ಇಲ್ಲದಿದ್ದರೆ ಅವರು ಮನೆಯಲ್ಲಿ ಇದ್ದಾಗ ಹೊರಗಿನಿಂದಲೇ ಗುಂಡು ಹಾರಿಸುವ ಯೋಜನೆ ರೂಪಿಸಿದ್ದರು. ಅಂತೆಯೇ ಭಾನುವಾರ ಮನೆಯ ಬಳಿ ಬಂದು ದಾಳಿ ಮಾಡಿದ್ದಾರೆ. ವಿಕ್ಕಿ ಬೈಕ್ ಚಲಾಯಿಸುತ್ತಿದ್ದರೆ, ಸಾಗರ್ ಪಾಲ್ 5 ಸುತ್ತು ಗುಂಡು ಹಾರಿಸಿದ್ದಾನೆ. ಆದರೆ ಅದೃಷ್ಟವಶಾತ್ ಗುಂಡುಗಳು ಕೇವಲ ಕಾಂಪೌಂಡ್‌ಗೆ ತಾಗಿದ್ದರಿಂದ ಮನೆಯ ಒಳಗಿದ್ದವರಿಗೆ ಏನೂ ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಹೀಗಾಗಿ ಹತ್ಯೆಯ ಹಿಂದಿನ ಉದ್ದೇಶ ತಿಳಿಯಬೇಕು. ಇದರ ಹಿಂದಿನ ಸಂಚುಕೋರ ಬಿಷ್ಣೋಯಿ ಎನ್ನಲಾಗಿದ್ದರೂ, ಇನ್ನೂ ಯಾರಾರು ಇದ್ದಾರೆ ಎಂಬ ಎಲ್ಲ ವಿವರ ಗೊತ್ತಾಗಬೇಕು. ಹೀಗಾಗಿ ದಾಳಿಕೋರರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಎಲ್ಲ ವಿವರಗಳನ್ನು ತಮ್ಮ ರಿಮಾಂಡ್ ರಿಪೋರ್ಟ್‌ನಲ್ಲಿ ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಸಲ್ಮಾನ್ ಭೇಟಿ ಮಾಡಿ ಧೈರ್ಯ ಹೇಳಿದ ಸಿಎಂ ಶಿಂಧೆಮುಂಬೈ: ನಟ ಸಲ್ಮಾನ್ ಖಾನ್ ಅವರನ್ನು, ಅವರ ಮನೆಯ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಂಗಳವಾರ ಸಂಜೆ ಭೇಟಿ ಮಾಡಿದರು ಹಾಗೂ ನಟನ ರಕ್ಷಣೆಗೆ ಎಲ್ಲ ಕ್ರಮ ಜರುಗಿಸುವ ಭರವಸೆ ನೀಡಿದರು. ಅಲ್ಲದೆ, ಹಂತಕರ ಹೆಡೆಮುರಿ ಕಟ್ಟಿ, ಸಂಪೂರ್ಣ ಸಂಚು ಬಯಲಿಗೆಳೆಯಲಾಗುವುದು ಎಂದರು.
ಸಲ್ಮಾನ್ ಹತ್ಯೆಗೇಕೆ ಬಿಷ್ಣೋಯಿ ಸಂಚು?ನಟ ಸಲ್ಮಾನ್ ಖಾನ್‌ಗೆ ಮೊದಲಿನಿಂದಲೂ ಜೀವ ಬೆದರಿಕೆ ಇದೆ. 2023ರಲ್ಲಿ ಡಾನ್ ಲಾರೆನ್ಸ್ ಬಿಷ್ಣೋಯಿ ಮತ್ತು ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಸಹಚರರು ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳುಹಿಸಿದ್ದರು. 2022ರಲ್ಲೂ ಸಲ್ಮಾನ್‌ಗೆ ಅಪರಿಚಿತನಿಂದ ಜೀವಬೆದರಿಕೆ ಸಂದೇಶ ಬಂದಿತ್ತು. ಬಿಷ್ಣೋಯಿ ಸಮುದಾಯ ರಾಜಸ್ಥಾನದ್ದಾಗಿದ್ದು, ಕೃಷ್ಣಮೃಗದ ಆರಾಧಕರಾಗಿದ್ದಾರೆ. ಆದರೆ ಸಲ್ಮಾನ್ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿದ ಆರೋಪ ಹೊತ್ತಿದ್ದಾರೆ. ಹೀಗಾಗಿ ಸಲ್ಮಾನ್ ಮೇಲೆ ಸೇಡಿ ತೀರಿಸಿಕೊಳ್ಳಲು ಡಾನ್ ಬಿಷ್ಣೋಯಿ ಯತ್ನಿಸುತ್ತಿದ್ದಾನೆ.