ಇಂದಿನಿಂದ ದೇಶದಲ್ಲಿ ಲೋಕಸಭಾ ಚುನಾವಣೆ ಮತದಾನ ಹಬ್ಬ

KannadaprabhaNewsNetwork | Updated : Apr 19 2024, 05:46 AM IST

ಸಾರಾಂಶ

21 ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಲಿದ್ದು, ಏಳು ಹಂತಗಳ ಲೋಕಸಭೆ ಚುನಾವಣೆಯ ನಿರ್ಣಾಯಕ ಘಟ್ಟಕ್ಕೆ ಚಾಲನೆ ದೊರೆಯಲಿದೆ. ಮೊದಲ ಹಂತದಲ್ಲಿ ಗಡ್ಕರಿ ಸೇರಿದಂತೆ 9 ಕೇಂದ್ರ ಮಂತ್ರಿಗಳ ಸತ್ವಪರೀಕ್ಷೆ ನಡೆಯಲಿದೆ.

 ನವದೆಹಲಿ :  7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು, ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.

 35.67 ಲಕ್ಷ ಮಂದಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. 3.51 ಕೋಟಿ ಮತದಾರರು 20ರಿಂದ 29ರ ಪ್ರಾಯದೊಳಗಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ 18 ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದೆ.9 ಕೇಂದ್ರ ಮಂತ್ರಿಗಳು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಓರ್ವ ಮಾಜಿ ರಾಜ್ಯಪಾಲೆ ಕಣದಲ್ಲಿದ್ದಾರೆ. 

ಡಿಎಂಕೆಯ ಕನಿಮೋಳಿ, ಬಿಜೆಪಿಯ ಕೆ. ಅಣ್ಣಾಮಲೈ ಅವರು ಮೊದಲ ಹಂತದಲ್ಲಿ ಕಣದಲ್ಲಿರುವ ಪ್ರಮುಖರು.ಇದೇ ವೇಳೆ, ಅರುಣಾಚಲಪ್ರದೇಶ ವಿಧಾನಸಭೆಯ ಎಲ್ಲ 60 ಹಾಗೂ ಸಿಕ್ಕಿಂ ವಿಧಾನಸಭೆಯ ಎಲ್ಲ 32 ಸ್ಥಾನಗಳಿಗೂ ಶುಕ್ರವಾರವೇ ಚುನಾವಣೆ ನಡೆಯಲಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಲಿಷ್ಠ ಬಹುಮತವನ್ನು ನಿರೀಕ್ಷಿಸುತ್ತಿದೆ. 

ಇಂಡಿಯಾ ಹೆಸರಲ್ಲಿ ಒಗ್ಗೂಡಿರುವ ಪ್ರತಿಪಕ್ಷಗಳು 2014, 2019ರ ಲೋಕಸಭೆ ಚುನಾವಣೆ ಸೋಲಿನ ಆಘಾತದಿಂದ ಪುಟಿದೇಳಲು ಯತ್ನಿಸುತ್ತಿವೆ.ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಿಪ್ಲಬ್‌ ಕುಮಾರ್‌ ದೇಬ್‌ (ತ್ರಿಪುರ), ನಬಂ ಟುಕಿ (ಅರುಣಾಚಲಪ್ರದೇಶ) ಕಣದಲ್ಲಿದ್ದಾರೆ. ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳಿಸಾಯ್‌ ಸೌಂದರರಾಜನ್‌ ಅವರೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.2019ರಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆದ್ದಿತ್ತು?ಶುಕ್ರವಾರ ಮತದಾನ ನಡೆಯಲಿರುವ 102 ಕ್ಷೇತ್ರಗಳ ಪೈಕಿ 2019ರಲ್ಲಿ ಯುಪಿಎ 45, ಎನ್‌ಡಿಎ 41 ಸ್ಥಾನ ಗೆದ್ದಿತ್ತು.

ಕಣದಲ್ಲಿರುವ ಪ್ರಮುಖರುನಿತಿನ್‌ ಗಡ್ಕರಿ, ಸರ್ಬಾನಂದ ಸೋನೋವಾಲ್‌, ಭೂಪೇಂದ್ರ ಯಾದವ್‌, ಕಿರಣ್‌ ರಿಜಿಜು, ಅರ್ಜುನ್‌ ರಾಮ್‌ ಮೇಘ್ವಾಲ್‌, ಕನಿಮೋಳಿ, ಅಣ್ಣಾಮಲೈ, ಗೌರವ್‌ ಗೊಗೊಯ್‌, ತಮಿಳಿಸಾಯ್‌ ಸೌಂದರರಾಜನ್‌.

ಎಲ್ಲೆಲ್ಲಿ ಚುನಾವಣೆ?

ಅರುಣಾಚಲ ಪ್ರದೇಶ, ಅಸ್ಸಾಂ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ, ಬಿಹಾರ, ಛತ್ತೀಸ್‌ಗಢ, ಮೇಘಾಲಯ, ಮಹಾರಾಷ್ಟ್ರ, ಮಧ್ಯಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ , ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ , ತಮಿಳುನಾಡು, ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ.

Share this article