ಮಾಜಿ ಸಿಇಸಿ ಖುರೇಶಿ ಬಾಂಗ್ಲನ್ನರಿಗೆ ವೋಟರ್‌ ಐಡಿ ನೀಡಿದ್ರು : ನಿಶಿಕಾಂತ್‌ ದುಬೆ ಕಿಡಿ

Published : Apr 21, 2025, 06:55 AM IST
Nishikant Dubey

ಸಾರಾಂಶ

 ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಇದೀಗ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಖುರೇಶಿ ಅ‍ವರು ಎಲೆಕ್ಷನ್ ಕಮಿಷನರ್‌ ಆಗಿರಲಿಲ್ಲ, ಮುಸ್ಲಿಂ ಕಮಿಷನರ್‌ ಆಗಿದ್ದರು’ ಎಂದು ಆರೋಪಿಸಿದ್ದಾರೆ.

 ನವದೆಹಲಿ: ಸುಪ್ರೀಂ ಕೋರ್ಟ್‌ ತೀರ್ಪುಗಳ ಬಗ್ಗೆ ಕಿಡಿಕಾರಿ ಸುದ್ದಿಯಲ್ಲಿರುವ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಇದೀಗ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಖುರೇಶಿ ಅ‍ವರು ಎಲೆಕ್ಷನ್ ಕಮಿಷನರ್‌ ಆಗಿರಲಿಲ್ಲ, ಮುಸ್ಲಿಂ ಕಮಿಷನರ್‌ ಆಗಿದ್ದರು’ ಎಂದು ಆರೋಪಿಸಿದ್ದಾರೆ.

ತಾವು ಪ್ರತಿನಿಧಿಸುವ ಗೊಡ್ಡಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಾರ್ಖಂಡ್‌ನ ಸಂಥಾಲ್‌ ಪರಗಣದಲ್ಲಿ ಬಾಂಗ್ಲಾದೇಶಿಯರಿಗೆ ಅತಿ ಹೆಚ್ಚು ವೋಟರ್‌ ಐಡಿ ನೀಡಿದ್ದೇ ಖುರೇಶಿ ಕಾಲದಲ್ಲಿ ಎಂದು ದುಬೆ ಆರೋಪಿಸಿದ್ದಾರೆ.

ಖುರೇಶಿ ವಿರುದ್ಧ ಯಾಕೆ ಕಿಡಿ?:

ವಿವಾದಿತ ವಕ್ಫ್‌ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಮುಸ್ಲಿಮರ ಜಾಗ ಅತಿಕ್ರಮಿಸಲು ಉದ್ದೇಶಿಸಿದೆ. ಕೇಂದ್ರ ಸರ್ಕಾರದ ಈ ದುಷ್ಟಯೋಜನೆಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡುವ ವಿಶ್ವಾಸವಿದೆ ಎಂದು ಖುರೇಶಿ ಹೇಳಿದ್ದರು.

ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಶಿಕಾಂತ್‌ ದುಬೆ ತೀವ್ರ ಕಿಡಿಕಾರಿದ್ದು, ‘ನೀವು ಚುನಾವಣಾ ಆಯುಕ್ತರಲ್ಲ, ನೀವು ಮುಸ್ಲಿಂ ಕಮಿಷನರ್‌ ಆಗಿದ್ದೀರಿ. ನಿಮ್ಮ ಕಾಲಾವಧಿಯಲ್ಲಿ ಜಾರ್ಖಂಡ್‌ನ ಸಂಥಾಲ್‌ ಪರಗಣದಲ್ಲಿ ಅತಿಹೆಚ್ಚು ಬಾಂಗ್ಲಾದೇಶಿ ನುಸುಳುಕೋರರಿಗೆ ವೋಟರ್‌ ಕಾರ್ಡ್‌ ನೀಡಲಾಗಿತ್ತು’ ಎಂದು ಆರೋಪಿಸಿದ್ದಾರೆ.

‘ಇಸ್ಲಾಂ ಭಾರತಕ್ಕೆ ಕಾಲಿಟ್ಟದ್ದು ಕ್ರಿಸ್ತಶಕ 712ರಲ್ಲಿ. ಅದಕ್ಕೂ ಮೊದಲೇ ಈ ಭೂಮಿ ಹಿಂದೂಗಳಿಗೆ ಅಥವಾ ಗುಡ್ಡಗಾಡು ಜನರು, ಜೈನರು, ಬೌದ್ಧರಿಗೆ ಸೇರಿದ್ದಾಗಿತ್ತು. ನಮ್ಮ ಗ್ರಾಮ ವಿಕ್ರಮಶಿಲವನ್ನು ಬಕ್ತಿಯಾರ್‌ ಖಿಲ್ಜಿ 1189ರಲ್ಲಿ ಸುಟ್ಟುಹಾಕಿದ್ದ. ಅತಿಶ ದೀಪಾಂಕರ್‌ ರೂಪದಲ್ಲಿ ವಿಶ್ವಕ್ಕೆ ಮೊದಲ ಕುಲಪತಿ ನೀಡಿದ ಕೀರ್ತಿ ವಿಕ್ರಮಶಿಲಕ್ಕಿದೆ. ನೀವು ದೇಶವನ್ನು ಒಗ್ಗೂಡಿಸಿ, ಇತಿಹಾಸ ಓದಿರಿ. ವಿಭಜನೆಯಿಂದ ಪಾಕಿಸ್ತಾನದ ಸೃಷ್ಟಿಯಾಯಿತು, ಇನ್ನು ಮುಂದೆ ಯಾವುದೇ ವಿಭಜನೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.

  ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಯತ್ನ

ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡುವಂತೆ ಕೋರಿ ಅಟಾರ್ನಿ ಜನರ್‌ ಆರ್‌.ವೆಂಕಟರಮಣಿ ಅವರಿಗೆ ವಕೀಲರೊಬ್ಬರು ಪತ್ರ ಬರೆದಿದ್ದಾರೆ.

ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಕೀಲ ಅನಾಸ್‌ ತನ್ವೀರ್‌ ಅವರು ಈ ಪತ್ರ ಬರೆದಿದ್ದಾರೆ. ದುಬೆ ಅವರ ಹೇಳಿಕೆಯನ್ನು ತೀವ್ರ ಮಾನಹಾನಕಾರಿ ಮತ್ತು ತೀವ್ರ ಪ್ರಚೋದನಕಾರಿ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಸಂಸದರ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ 1971ರ 15(ಬಿ) ನಿಯಮದ ಪ್ರಕಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸಾಲಿಸಿಟರ್‌ ಜನರಲ್‌ ಅಥವಾ ಅಟಾರ್ನಿ ಜನರಲ್‌ ಅನುಮತಿ ಕಡ್ಡಾಯವಾಗಿದೆ.

ಪತ್ರದಲ್ಲೇನಿದೆ?: ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್‌ 15(1)(ಬಿ) ಪ್ರಕಾರ, 1975ರ ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ನಿಂದನೆ ಕಾಯ್ದೆ 1975ರ ಪ್ರಕ್ರಿಯೆಯ ನಿಮಯ 3(ಸಿ)ದಂತೆ, ನಿಶಿಕಾಂತ್‌ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ಕೋರುತ್ತಿದ್ದೇನೆ. ದುಬೆ ಅವರು ಸಾರ್ವಜನಿಕವಾಗಿ ಮಾಡಿದ ಹೇಳಿಕೆಯು ವಿವಾದಾತ್ಮಕವಾಗಿದೆ, ಆತಂಕ ಮೂಡಿಸುವಂತಿದೆ, ತಪ್ಪುದಾರಿಗೆಳೆಯುವಂತಿದೆ ಮತ್ತು ಸುಪ್ರೀಂ ಕೋರ್ಟ್‌ನ ಘನತೆ, ಅಧಿಕಾರಕ್ಕೆ ಕುಂದುಂಟು ಮಾಡುವಂತಿದೆ ಎಂದಿದ್ದಾರೆ.

ದುಬೆ ಅವರು ಸಿಜೆಐ ಸಂಜೀವ್‌ ಖನ್ನಾ ಅವರು ದೇಶದಲ್ಲಿ ಅಂತರ್‌ಯುದ್ಧಕ್ಕೆ ಕಾರಣವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಜತೆಗೆ, ದುಬೆ ವಕ್ಫ್‌ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶ ಹಿನ್ನೆಲೆಯಲ್ಲಿ ಕೋಮುದ್ವೇಷದ ಹೇಳಿಕೆಯನ್ನೂ ನೀಡಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ ಮತ್ತು ಮುಖ್ಯ ನ್ಯಾಯಮೂರ್ತಿ ಅವರು ದೇಶದಲ್ಲಿನ ಅಂತರ್ಯುದ್ಧಕ್ಕೆ ಕಾರಣ ಎಂದು ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದರು. ಜತೆಗೆ, ಸುಪ್ರೀಂ ಕೋರ್ಟ್‌ ಕಾನೂನು ರೂಪಿಸುವುದಾದರೆ ವಿಧಾನಸಭೆ ಮತ್ತು ಸಂಸತ್ತು ಯಾಕೆ ಬೇಕು ಎಂದೂ ಕಿಡಿಕಾರಿದ್ದರು. ಈ ಕುರಿತು ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದರೆ, ಬಿಜೆಪಿ ಮಾತ್ರ ಈ ಹೇಳಿಕೆಗೂ ತನಗೂ ಸಂಬಂಧ ಇಲ್ಲ ಎಂದು ಅಂತರ ಕಾಯ್ದುಕೊಂಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ