ದೂರದರ್ಶನದ ಪ್ರಸಿದ್ಧ ವಾರ್ತಾವಾಚಕಿ ಸರಳಾ ಮಹೇಶ್ವರಿ ನಿಧನ

KannadaprabhaNewsNetwork |  
Published : Feb 13, 2026, 02:00 AM IST
ಸರಳಾ | Kannada Prabha

ಸಾರಾಂಶ

ಒಂದು ಕಾಲದಲ್ಲಿ ಜನರು ಕೇವಲ ದೂರದರ್ಶನದ (ಡಿಡಿ) ಸುದ್ದಿಯ ಜನರು ಮೇಲೆ ಅವಲಂಬಿತರಾಗಿದ್ದ ವೇಳೆ ಸುದ್ದಿವಾಚನ ಮಾಡುತ್ತ ಮನೆಮಾತಾಗಿದ್ದ ಸುದ್ದಿ ವಾಚಕಿ ಸರಳಾ ಮಹೇಶ್ವರಿ (71) ಗುರುವಾರ ದೆಹಲಿಯಲ್ಲಿ ನಿಧನರಾದರು

ಪಿಟಿಐ ನವದೆಹಲಿ

ಒಂದು ಕಾಲದಲ್ಲಿ ಜನರು ಕೇವಲ ದೂರದರ್ಶನದ (ಡಿಡಿ) ಸುದ್ದಿಯ ಜನರು ಮೇಲೆ ಅವಲಂಬಿತರಾಗಿದ್ದ ವೇಳೆ ಸುದ್ದಿವಾಚನ ಮಾಡುತ್ತ ಮನೆಮಾತಾಗಿದ್ದ ಸುದ್ದಿ ವಾಚಕಿ ಸರಳಾ ಮಹೇಶ್ವರಿ (71) ಗುರುವಾರ ದೆಹಲಿಯಲ್ಲಿ ನಿಧನರಾದರು

1980 ಮತ್ತು 1990ರ ದಶಕಗಳಲ್ಲಿ ಟೀವಿ ಸುದ್ದಿಗಳಿಂದ ಗುರುತಿಸಲ್ಪಟ್ಟ ಕೆಲವೇ ಕೆಲವು ಮುಖಗಳಲ್ಲಿ ಸರಳಾ ಕೂಡ ಒಬ್ಬರಾಗಿದ್ದರು. ಅವರ ನಿಧನದ ವಿಷಯವನ್ನು ಸ್ನೇಹಿತ ಹಾಗೂ ನಿವೃತ್ತ ಡಿಡಿ ಸುದ್ದಿವಾಚಕ ಶಮ್ಮಿ ನಾರಂಗ್‌ ಪ್ರಕಟಿಸಿದ್ದಾರೆ.

ಸಂಜೆ 4 ಗಂಟೆಗೆ ನಿಗಮ್ ಬೋಧ್ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು. ಅವರ ನಿಧನಕ್ಕೆ ರಾಜಕಾರಣಿಗಳು, ಪತ್ರಕರ್ತರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅತೀವ ಆಘಾತ ವ್ಯಕ್ತಪಡಿಸಿದ್ದಾರೆ.

==

ಭಾರತಕ್ಕೆ ಬರದಿದ್ರೆ ಅರ್ಜಿ ವಿಚಾರಣೆ ಇಲ್ಲ: ದೇಶಭ್ರಷ್ಟ ಮಲ್ಯಗೆ ಕೋರ್ಟ್‌ ಚಾಟಿ

ಮುಂಬೈ: ದೇಶಭ್ರಷ್ಟರಾಗಿರುವ ಮದ್ಯದೊರೆ ವಿಜಯ್‌ ಮಲ್ಯ ಅವರಿಗೆ ಭಾರತಕ್ಕೆ ಮರಳುವಂತೆ ಮತ್ತೆ ಸೂಚಿಸಿರುವ ಬಾಂಬೆ ಹೈಕೋರ್ಟ್‌, ‘ನೀವು ಬರುವ ವರೆಗೆ ನಿಮ್ಮ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದೆ.ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕೆಲ ಆರ್ಥಿಕ ಅಪರಾಧಗಳನ್ನೆಸಗಿರುವ ಮಲ್ಯ, 2016ರಿಂದ ಬ್ರಿಟನ್‌ನಲ್ಲಿ ವಾಸವಿದ್ದಾರೆ. ಅಲ್ಲಿದ್ದುಕೊಂಡೇ ತಮ್ಮನ್ನು ಆರ್ಥಿಕ ಅಪರಾಧಿ ಹಾಗೂ ದೇಶಭ್ರಷ್ಟ ಎಂದು ಘೋಷಿಸಲು ಅನುವು ಮಾಡುವ 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.ಕೊನೆಯ ಬಾರಿ ಮಲ್ಯರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು 2025ರ ಡಿಸೆಂಬರ್‌ನಲ್ಲಿ ನಡೆಸಿದ್ದ ಕೋರ್ಟ್‌, ಅವರು ಮರಳಿದ ಬಳಿಕವಷ್ಟೇ ವಿಚಾರಣೆ ನಡೆಸುವುದಾಗಿ ಹೇಳಿತ್ತು.

ಈಗ ಮತ್ತದೇ ನಿಲುವನ್ನು ಪುನರುಚ್ಚರಿಸಿದ್ದು, ‘ನೀವು ಭಾರತಕ್ಕೆ ಬರದಿದ್ದರೆ ನಿಮ್ಮ ಅರ್ಜಿಯ ವಿಚಾರಣೆ ನಡೆಯುವುದಿಲ್ಲ. ಮರಳುತ್ತೀರೋ ಇಲ್ಲವೋ ಸ್ಪಷ್ಟಪಡಿಸಿ’ ಎಂದಿದೆ.

==

ಜೈಲಧಿಕಾರಿಗಳ ನಿರ್ಲಕ್ಷ್ಯ: ಇಮ್ರಾನ್‌ ಖಾನ್‌ ದೃಷ್ಟಿ 85% ನಷ್ಟ

ವಿನಂತಿಸಿದರೂ ವೈದ್ಯಕೀಯ ಸೇವೆ ಕೊಡದೆ ದುಃಸ್ಥಿತಿ

ನವದೆಹಲಿ: ಜೈಲುಶಿಕ್ಷೆ ಅನುಭವಿಸುತ್ತಿರುವ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರ ಕಣ್ಣುಗಳು ಶೇ.85ರಷ್ಟು ದೃಷ್ಟಿಹೀನವಾಗಿದ್ದು, ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ತಿಳಿಸಿದ್ದಾರೆ.ಜೈಲಿನಲ್ಲಿ ಇಮ್ರಾನ್‌ ಅವರನ್ನು ಅತ್ಯಂತ ಹೀನಾಯವಾಗಿ ನೋಡಿಕೊಳ್ಳಲಾಗುತ್ತಿದೆ. ಅಗತ್ಯ ವೈದ್ಯಕೀಯ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಕುಟುಂಬಸ್ಥರ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಇದೀಗ ಸುಪ್ರೀಂ ವಕೀಲ ಸಲ್ಮಾನ್‌ ಸಫ್ದಾರ್‌ ವರದಿ ಇದನ್ನು ಬಹಿರಂಗಪಡಿಸಿದೆ.

‘3-4 ತಿಂಗಳ ಹಿಂದೆ ಅವರ ಎರಡೂ ಕಣ್ಣುಗಳಲ್ಲಿ ಸಾಮಾನ್ಯ 6 x 6 ದೃಷ್ಟಿ ಇತ್ತು. ನಂತರ ದೃಷ್ಟಿ ಮಸುಕಾಗತೊಡಗಿತು. ಇದನ್ನು ತಿಳಿಸಿದರೂ ಜೈಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತರುವಾಯ ಅವರು ತಮ್ಮ ಬಲಗಣ್ಣಿನ ಸಂಪೂರ್ಣ ದೃಷ್ಟಿ ಕಳೆದುಕೊಂಡರು. ಈಗ ಶೇ.85ರಷ್ಟು ದೃಷ್ಟಿ ಹೋಗಿದೆ’ ಎಂದು ತಿಳಿಸಿದ್ದಾರೆ.

==

ವಿಜಯ್ ರ್‍ಯಾಲಿಗೆ ಕ್ಯುಆರ್‌ ಕೋಡ್‌ ಪಾಸ್ ಕಡ್ಡಾಯ: 4998 ಮಿತಿ

ಚೆನ್ನೈ: ಕರೂರು ಕಾಲ್ತುಳಿತ ಬಳಿಕ ಎಚ್ಚೆತ್ತಿರುವ ತಮಿಳುನಾಡು ಪೊಲೀಸರು, ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ ಅವರು ಸೇಲಂನಲ್ಲಿ ಫೆ.13ರಂದು ನಡೆಸಲಿರುವ ರ್‍ಯಾಲಿಗೆ ಕ್ಯುಆರ್‌ ಕೋಡ್‌ ಪಾಸ್ ಕಡ್ಡಾಯಗೊಳಿಸಿದ್ದಾರೆ ಹಾಗೂ 4998 ಮಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಿದ್ದಾರೆ.ಇದಲ್ಲದೆ, ಪಾಸ್‌ ಇಲ್ಲದ ಕಾರ್ಯಕರ್ತರು, ಸಾರ್ವಜನಿಕರು ರ್‍ಯಾಲಿಗೆ ಬರುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಜತೆಗೆ ಭದ್ರತಾ ಕಾರಣಗಳಿಂದ ಗರ್ಭಿಣಿಯರು ಮತ್ತು ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ತಪ್ಪಿಸಿ ಎಂದು ಪೊಲೀಸರು ಮತ್ತು ಸಂಘಟಕರು ವಿನಂತಿಸಿದ್ದಾರೆ.

ಕರೂರು ಕಾಲ್ತುಳಿತದ ಬಳಿಕ ಪುದುಚೇರಿಯಲ್ಲಿ ಪೊಲೀಸರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಟಿವಿಕೆ ರ್‍ಯಾಲಿಗೆ ಇದೇ ರೀತಿ ಕ್ಯೂಆರ್ ಕೋಡ್‌ ಪಾಸ್‌ ಕಡ್ಡಾಯಗೊಳಿಸಿ 5000 ಮಿತಿ ಹೇರಿದ್ದರು.

==

ಹೊಸ ಮಾನದಂಡದ ಅಡಿ ಗ್ರಾಹಕ ಬೆಲೆ ಸೂಚ್ಯಂಕ: ಜನವರಿಯಲ್ಲಿ 2.75% ಹಣದುಬ್ಬರ

ನವದೆಹಲಿ: 2024ಅನ್ನು ಮೂಲ ವರ್ಷವಾಗಿಟ್ಟುಕೊಂಡು ಸಿದ್ಧಪಡಿಸಲಾದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ವರದಿ ಗುರುವಾರ ಬಿಡುಗಡೆಯಾಗಿದ್ದು, ಅದರ ಪ್ರಕಾರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.2.75ರಷ್ಟು ದಾಖಲಾಗಿದೆ.ಆಹಾರ ಹಣದುಬ್ಬರ ಶೇ.2.13ರಷ್ಟಿದ್ದರೆ, ವಸತಿ ಹಣದುಬ್ಬರ ಶೇ.2.05ರಷ್ಟು ವರದಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಮಗ್ರ ಹಣದುಬ್ಬರ ಶೇ.2.73ರಷ್ಟಿದ್ದರೆ ನಗರಪ್ರದೇಶದಲ್ಲಿ ಇದು ಶೇ.2.77ರಷ್ಟಿದೆ.

ರಾಜ್ಯವಾರು ನೋಡುವುದಾದರೆ, ತೆಲಂಗಾಣದಲ್ಲಿ ಅತಿಹೆಚ್ಚು, ಶೇ.4.92ರಷ್ಟು ಹಣದುಬ್ಬರವಿದ್ದರೆ, ನಂತರದ ಸ್ಥಾನಗಳಲ್ಲಿ ಕೇರಳ, ತಮಿಳುನಾಡು ಇವೆ.

ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ, ತೊಗರಿ ಬೇಳೆ ಮತ್ತು ಬಟಾಣಿ ಕಡಿಮೆ ಹಣದುಬ್ಬರ ಕಂಡರೆ, ಬೆಳ್ಳಿ ಆಭರಣ, ಟೊಮೆಟೊ, ತೆಂಗಿನಕಾಯಿ-ಕೊಬ್ಬರಿ, ಚಿನ್ನ, ವಜ್ರ, ಪ್ಲಾಟಿನಂ ಆಭರಣ ಮತ್ತು ತೆಂಗಿನ ಎಣ್ಣೆ ಹೆಚ್ಚು ಹಣದುಬ್ಬರ ಕಂಡಿವೆ.ರಾಷ್ಟ್ರೀಯ ಅಂಕಿಅಂಶ ಕಚೇರಿ(ಎನ್‌ಎಸ್‌ಒ) ಈ ಬಾರಿ 259ರ ಬದಲು 308 ವಸ್ತುಗಳನ್ನು ಮತ್ತು 40ರ ಬದಲು 50 ಸೇವೆಗಳನ್ನು ಪರಿಗಣಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಡಿಜಿಟಲ್‌ ಅರೆಸ್ಟ್‌ಗಾಗಿ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್‌ ಠಾಣೆ!
ಏರಿಂಡಿಯಾ ದುರಂತಕ್ಕೆ ಪೈಲಟ್‌ಕಾರಣ ಎಂದ ಇಟಲಿ ಮಾಧ್ಯಮವರದಿ ಸುಳ್ಳು: ಭಾರತ ಸ್ಪಷ್ಟನೆ