ರಷ್ಯಾ, ಬೆಂಗಳೂರಲ್ಲಿ ಗಗನಯಾನಿಗಳಿಗೆ ತರಬೇತಿ

KannadaprabhaNewsNetwork |  
Published : Feb 28, 2024, 02:33 AM ISTUpdated : Feb 28, 2024, 08:51 AM IST
ಪ್ರಧಾನಿ ಮೋದಿ ಶುಭ ಹಾರೈಕೆ | Kannada Prabha

ಸಾರಾಂಶ

2025ರಲ್ಲಿ ನಡೆಯಲಿರುವ ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಗೆ ಆಯ್ಕೆಯಾದ ನಾಲ್ವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣ ಮಾಡಿದ್ದಾರೆ.

ನವದೆಹಲಿ: 2025ರಲ್ಲಿ ನಡೆಯಲಿರುವ ಭಾರತದ ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆಗೆ ಆಯ್ಕೆಯಾದ ನಾಲ್ವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅನಾವರಣ ಮಾಡಿದ್ದಾರೆ. ಆದರೆ ಇವರ ಆಯ್ಕೆಯಾಗಿ ಹೆಚ್ಚು ಕಡಿಮೆ 4 ವರ್ಷಗಳೇ ಆಗಿದೆ. 

ಹೆಸರು ಮಾತ್ರ ಈಗ ಬಹಿರಂಗವಾಗಿದೆ. ಅತ್ಯಂತ ಕಠಿಣ ಮತ್ತು ಸಾಹಸಮಯವಾದ ಈ ಯೋಜನೆ ನಾಲ್ವರನ್ನು ಆಯ್ಕೆ ಮಾಡಲು ಸಾಕಷ್ಟು ಸುದೀರ್ಘ ಪ್ರಕ್ರಿಯೆಯನ್ನೇ ನಡೆಸಲಾಗಿತ್ತು.

ಗಗನಯಾನ ಯೋಜನೆ ಕೈಗೊಳ್ಳುವುದು ಇಸ್ರೋ ಆದರೂ, ಇಸ್ರೋ ಬಳಿ ಗಗನಯಾನಿಗಳಿಲ್ಲ. ಹೀಗಾಗಿ ಅದು ಭಾರತೀಯ ವಾಯುಪಡೆಯ ಸಹಯೋಗದಲ್ಲಿ ಕುಶಲ ಟೆಸ್ಟ್‌ ಪೈಲಟ್‌ಗಳ ಪಟ್ಟಿಯೊಂದನ್ನು ಸಿದ್ಧಪಡಿಸಿತು. 

ಬಳಿಕ ಇವರನ್ನೆಲ್ಲಾ ಬಾಹ್ಯಾಕಾಶ ಯಾನದ ವೇಳೆ ಎದುರಾಗಬಹುದಾದ ದೈಹಿಕ ಮತ್ತು ಮಾನಸಿಕ ವ್ಯತ್ಯಯಗಳನ್ನು, ಅದನ್ನು ಎದುರಿಸುವ ಸಾಮರ್ಥ್ಯ ಪರೀಕ್ಷೆಗಾಗಿ ವಿವಿಧ ದೈಹಿಕ ಮತ್ತು ಮಾನಸಿಕ ಪರೀಕ್ಷೆಗೆ ಒಳಪಡಿಸಲಾಯಿತು.

ಅಂತಿಮವಾಗಿ ಈ ಪೈಕಿ ನಾಲ್ವರ ಹೆಸರನ್ನು ನ್ಯಾಷನಲ್‌ ಕ್ರೂ ಸೆಲೆಕ್ಷನ್‌ ಬೋರ್ಡ್‌ ಅಂತಿಮಗೊಳಿಸಿತು. ಹೀಗೆ ಆಯ್ಕೆಯಾದವರೇ ಪ್ರಶಾಂತ್‌ ನಾಯರ್‌, ಅಂಗದ್‌ ಪ್ರತಾಪ್‌, ಅಜಿತ್‌ ಕೃಷ್ಣನ್‌ ಮತ್ತು ಸುಭಾನ್ಷು ಶುಕ್ಲಾ.

ತರಬೇತಿ ಎಲ್ಲಿ? ಹೇಗೆ?
ಹೀಗೆ ಆಯ್ಕೆಯಾದ ನಾಲ್ವರ ಹೆಸರನ್ನೂ ಆರಂಭದಿಂದಲೂ ರಹಸ್ಯವಾಗಿಯೇ ಇಡಲಾಗಿತ್ತು. ಮೊದಲಿಗೆ ಈ ನಾಲ್ವರಿಗೂ ಬಾಹ್ಯಾಕಾಶ ಉಡ್ಡಯನದ ಕುರಿತ ಆರಂಭದಿಂದ ಅಂತ್ಯದವರೆಗಿನ ವಿವಿಧ ಹಂತಗಳ ಕುರಿತು ರಷ್ಯಾದ ಗಗಾರಿನ್‌ ಕಾಸ್ಮೋನಾಟ್‌ ತರಬೇತಿ ಕೇಂದ್ರದಲ್ಲಿ 13 ತಿಂಗಳ ಕಾಲ ಸುದೀರ್ಘ ತರಬೇತಿ ನೀಡಲಾಯಿತು. 

ಬಳಿಕ ಅವರಿಗೆ ಬೆಂಗಳೂರಿನ ಗಗನಯಾನ ತರಬೇತಿ ಕೇಂದ್ರದಲ್ಲೂ ವಿವಿಧ ರೀತಿಯ ತರಬೇತಿ ನೀಡುವ ಮೂಲಕ ಉಡ್ಡಯನಕ್ಕೆ ಸಿದ್ಧಗೊಳಿಸಲಾಗಿದೆ.

ನಾಲ್ವರ ಪೈಕಿ ಮೂವರಿಗೆ ಮಾತ್ರ ಅವಕಾಶ: ಹಾಲಿ ನಾಲ್ವರನ್ನು ಇಸ್ರೋ ಆಯ್ಕೆ ಮಾಡಿದ್ದರೂ, ಇಸ್ರೋದ ಗಗನಯಾನ ಯೋಜನೆಯಲ್ಲಿ ಉದ್ದೇಶಿಸಿರುವುದು ಮೂವರು ಗಗನಯಾತ್ರಿಗಳನ್ನು ಮಾತ್ರ. ಆದರೆ ಒಂದು ವೇಳೆ ಯಾವುದೋ ಕಾರಣದಿಂದ ಓರ್ವ ಗಗನಯಾತ್ರಿ ಉಡ್ಡಯನಕ್ಕೆ ಲಭ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ ಇರಲಿ ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಓರ್ವ ಟೆಸ್ಟ್‌ ಪೈಲಟ್‌ ಅನ್ನು ಯೋಜನೆಗೆ ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ.

ಗಗನಯಾತ್ರಿಗಳ ಪಯಣ ಎಲ್ಲಿಗೆ?
ಇಸ್ರೋ ಸದ್ಯ ಯೋಜಿಸಿರುವ ಗಗನಯಾನ, ತಮ್ಮ ಮೂವರು ಯಾತ್ರಿಗಳನ್ನು ಭೂಮಿಯ ಕೆಳಕಕ್ಷೆಗೆ ಕಳುಹಿಸಿ ಅಲ್ಲಿಂದ ಮರಳಿ ಭೂಮಿಗೆ ಸುರಕ್ಷಿತವಾಗಿ ಮರಳುವುದಾಗಿದೆ. ಕೆಳ ಹಂತದ ಕಕ್ಷೆ ಎಂದರೆ ಭೂಮಿಯಿಂದ 2000 ಕಿ.ಮೀ ದೂರದ ಆಸುಪಾಸಿನ ಪ್ರದೇಶ. 

ಈ ಪೈಕಿ 400 ಕಿ.ಮೀ ಎತ್ತರಪ್ರದೇಶಕ್ಕೆ ಗಗನಯಾತ್ರಿಗಳನ್ನು ಕೊಂಡೊಯ್ಯಲು ಇಸ್ರೋ ಉದ್ದೇಶಿಸಿದೆ. ಒಟ್ಟಾರೆ ಮೂರು ದಿನಗಳ ಯಾತ್ರೆ ಇದಾಗಿರಲಿದೆ. ಬಳಿಕ ಅವರನ್ನು ಕರೆತರುವ ನೌಕೆ ಸಮುದ್ರದಲ್ಲಿ ಇಳಿಯಲಿದೆ. 2040ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ.

ಮಹಿಳೆಯರಿಗೆ ಏಕಿಲ್ಲ ಉಡ್ಡಯನ ಅವಕಾಶ?
ಅಮೆರಿಕ ಗಗನಯಾನಕ್ಕೆ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಕಲ್ಪನಾ ಚಾವ್ಲಾ ಆಯ್ಕೆ ಆಗಿದ್ದರ. ಆದರೆ ಭಾರತದ ಗಗನಯಾನಕ್ಕೆ ಒಬ್ಬ ಮಹಿಳೆ ಕೂಡ ಆಯ್ಕೆ ಆಗಿಲ್ಲ. ಇದಕ್ಕೆ ಕಾರಣವಿದೆ. 

ಗಗನಯಾನ ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಬಯಸುತ್ತದೆ. ಜೊತೆಗೆ ವಿಮಾನ ಉಡ್ಡಯನದಲ್ಲಿ ಸಾಕಷ್ಟು ಅನುಭವದ ಅಗತ್ಯವೂ ಇರುತ್ತದೆ. 

ಆದರೆ ತಕ್ಷಣಕ್ಕೆ ಭಾರತೀಯ ಸೇನೆಯಲ್ಲಿ ಅಂಥ ಸಾಮರ್ಥ್ಯ ಹೊಂದಿರುವ ಮಹಿಳಾ ಟೆಸ್ಟ್‌ ಪೈಲಟ್‌ಗಳು ಇಲ್ಲದ ಕಾರಣ ಯಾರನ್ನೂ ಈ ಯೋಜನೆಗೆ ಆಯ್ಕೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಂದಿನಿಂದ ಪ್ರಧಾನಿ ಕಚೇರಿಗೆ ಹೊಸ ವಿ‍ಳಾಸ
ಹಸೀನಾ ಸರ್ಕಾರ ಉರುಳಿಸಿದ ಜೆನ್‌ಝೀಗಳಿಗೆ ಹೀನಾಯ ಸೋಲು