ನವದೆಹಲಿ: ದಸರೆಗೂ ಪ್ರಧಾನಿ ನರೇಂದ್ರ ಮೋದಿಗೂ ಅವಿನಾಭಾವ ಸಂಬಂಧ. ಮೋದಿ ಅವರು ದಸರಾ ವೇಳೆ 9 ದಿನ ಉಪವಾಸ ಮಾಡುವುದುಂಟು. ಹಾಗೆಯೇ ಗುಜರಾತ್‌ನಲ್ಲಿ ದಸರಾ ಆಚರಣೆ ವೇಳೆ ‘ಗರ್ಬಾ’ ಎಂಬ ವಿಶಿಷ್ಟ ಜಾನಪದ ಶೈಲಿಯ ಗೀತೆಗಳನ್ನು ಹಾಡುತ್ತ ನೃತ್ಯ ಮಾಡುತ್ತಾರೆ. ಮೋದಿ ಬಹಳ ಹಿಂದೆಯೇ ಬರೆದ ಗರ್ಬಾ ನೃತ್ಯದ ಹಾಡೊಂದು ಈಗ ಬಿಡುಗಡೆ ಆಗಿದ್ದು, ಅವರ ಇನ್ನೊಂದು ಹೊಸ ಗೀತೆ ನವರಾತ್ರಿ ವೇಳೆ ಬಿಡುಗಡೆ ಆಗಲಿದೆ. ದೇಶಾದ್ಯಂತ ಭಾನುವಾರ ನವರಾತ್ರಿ (ದಸರಾ) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ಬಹಳ ಹಿಂದೆಯೇ ಬರೆದಿದ್ದ ಗುಜರಾತಿ ಶೈಲಿಯ ಗರ್ಬಾ ಜಾನಪದ ಗೀತೆಯೊಂದರ ವಿಡಿಯೋವೊಂದನ್ನು ಜಸ್ಟ್ ಮ್ಯೂಸಿಕ್ ಸಂಸ್ಥೆ ಶನಿವಾರ ಬಿಡುಗಡೆ ಮಾಡಿದೆ. ಇದರ ನಡುವೆ, ಶನಿವಾರ ಟ್ವೀಟ್ ಮಾಡಿ ಜಸ್ಟ್ ಮ್ಯೂಸಿಕ್‌ಗೆ ಕೃತಜ್ಞತೆ ಸಲ್ಲಿಸಿರುವ ಮೋದಿ, ‘ಬಹಳ ಹಿಂದೆಯೇ ಬರೆದಿದ್ದ ಹಾಡಿನ ಗೀತೆಯ ವಿಡಿಯೋ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದ. ಅದಾದ ನಂತರ ಅನೇಕ ವರ್ಷಗಳ ಕಾಲ ನಾನು ಗೀತೆ ಬರೆದಿರಲಿಲ್ಲ. ಆದರೆ ಈಗಷ್ಟೇ ನಾನು ಮತ್ತೊಂದು ಗರ್ಬಾ ಹಾಡನ್ನು ಬರೆದಿದ್ದು ಅದನ್ನು ದಸರೆ ವೇಳೆ ಬಿಡುಗಡೆ ಮಾಡುವೆ’ ಎಂದಿದ್ದಾರೆ. ಹಾಡು ಸೂಪರ್ ಹಿಟ್: ಈ ನಡುವೆ, ಶನಿವಾರ ಜಸ್ಟ್ ಮ್ಯೂಸಿಕ್ ಬಿಡುಗಡೆ ಮಾಡಿರುವ 190 ಸೆಕೆಂಡುಗಳ ‘ಗರ್ಬೋ’ ಎಂಬ ಶೀರ್ಷಿಕೆಯುಳ್ಳ ಹಾಡು ಬಿಡುಗಡೆಯಾದ 5 ಗಂಟೆಗಳಲ್ಲೇ ಯೂಟ್ಯೂಬ್‌ನಲ್ಲಿ ಬರೋಬ್ಬರಿ 5 ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಸುಮಾರು 3 ನಿಮಿಷ ಇರುವ ಈ ಹಾಡನ್ನು ಭಾನುಶಾಲಿ ಹಾಡಿದ್ದಾರೆ ಹಾಗೂ ತನಿಷ್ಕ್ ಬಗಚಿ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿ,‘ನಾನು ಧನ್ಯ’ ಎಂದಿದ್ದಾರೆ.