ಇಸ್ರೇಲ್‌ ಯುದ್ಧಕ್ಕೆ 100 ದಿನ: ಈವರೆಗೆ 10000 ಮಕ್ಕಳ ಬಲಿ?

KannadaprabhaNewsNetwork | Updated : Jan 14 2024, 12:09 PM IST

ಸಾರಾಂಶ

ಜ.14ರ ಭಾನುವಾರದಂದು ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧ ಪ್ರಾರಂಭವಾಗಿ 100 ದಿನಗಳು ಕಳೆದಿವೆ. ಈ 100 ದಿನಗಳಲ್ಲಿ ಗಾಜಾದಲ್ಲಿ ಒಟ್ಟು 10,000 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಭಯಾನಕ ಮಾಹಿತಿಯನ್ನು ಸೇವ್‌ ದಿ ಚಿಲ್ಡ್ರನ್‌ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಲಂಡನ್‌: ಪ್ಯಾಲೆಸ್ತೀನ್‌ ಮತ್ತು ಇಸ್ರೇಲ್‌ ನಡುವೆ ಭೀಕರ ಯುದ್ಧ ಪ್ರಾರಂಭವಾಗಿ ಜ.14ರ ಭಾನುವಾರದಂದು 100 ದಿನಗಳು ಕಳೆಯಲಿವೆ. ಇದೇ 100 ದಿನಗಳ ಅವಧಿಯಲ್ಲಿ ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ವಿವಿಧ ದಾಳಿಗಳಲ್ಲಿ ಈವರೆಗೆ ಒಟ್ಟು 10,000 ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದಾರೆ.

ಅಂದರೆ ಯುದ್ಧ ಆರಂಭವಾದಾಗಿನಿಂದ ಈವರೆಗೆ ಪ್ರತಿ ದಿನ 100 ಮಕ್ಕಳು ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಲಂಡನ್‌ನ ‘ಸೇವ್‌ ದಿ ಚಿಲ್ಡ್ರನ್‌’ ಎಂಬ ಸಂಸ್ಥೆಯು ತನ್ನ ವರದಿಯಲ್ಲಿ ಪ್ರಕಟಿಸಿದೆ.

ವಿಶ್ವಾದ್ಯಂತ ಮಕ್ಕಳ ಜೀವನ ಮಟ್ಟ ಸುಧಾರಿಸುವ ಗುರಿಯೊಂದಿಗೆ ಸೇವ್‌ ದಿ ಚಿಲ್ಡ್ರನ್‌ ಎಂಬ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯನ್ನು 1919ರಲ್ಲಿ ಬ್ರಿಟನ್‌ನಲ್ಲಿ ಸ್ಥಾಪಿಸಲಾಗಿದೆ. ಇದು ಗಾಜಾದ ಮೇಲಿನ ಇಸ್ರೇಲ್‌ ದಾಳಿ ಅಲ್ಲಿನ ಮಕ್ಕಳ ಮೇಲೆ ಎಷ್ಟು ಭೀಕರ ಪರಿಣಾಮ ಬೀರಿದೆ ಎಂಬುದರ ಕುರಿತು ವರದಿಯೊಂದನ್ನು ಪ್ರಕಟಿಸಿದೆ.

 ಗಾಜಾದಲ್ಲಿ ಯುದ್ಧದಲ್ಲಿ ಈವರೆಗಿನ ಮೃತರ ಪೈಕಿ ಶೇ.40ಕ್ಕೂ ಹೆಚ್ಚು ಮೃತರು ಮಕ್ಕಳೇ ಆಗಿದ್ದಾರೆ. ಗಾಜಾದಲ್ಲಿರುವ ಶೇಕಡಾವಾರು ಮಕ್ಕಳ ಪ್ರಮಾಣದಲ್ಲಿ ಶೇ.1ರಷ್ಟು ಮಕ್ಕಳು ಹತ್ಯೆಯಾಗಿದ್ದಾರೆ. 

ಅಲ್ಲದೇ ಯುನಿಸೆಫ್‌ ಪ್ರಕಾರ 1,000ಕ್ಕೂ ಹೆಚ್ಚು ಮಕ್ಕಳು ಕನಿಷ್ಠ ತಮ್ಮ ಒಂದು ಕಾಲು ಅಥವಾ ಎರಡೂ ಕಾಲುಗಳನ್ನು ಕಳೆದುಕೊಂಡು ಅಂಗವಿಕಲರಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿ ಆಧರಿಸಿ ಸೇವ್‌ ದಿ ಚಿಲ್ಡ್ರನ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಅಲ್ಲದೇ ಗಾಜಾದಲ್ಲಿ ಒಟ್ಟು 370 ಶಾಲೆಗಳು ಮತ್ತು 94ಕ್ಕೂ ಅಧಿಕ ಅಸ್ಪತ್ರೆಗಳು ಹಾನಿಗೊಳಗಾಗಿವೆ ಎಂದು ತಿಳಿಸಲಾಗಿದೆ. ಬದುಕುಳಿದ ಮಕ್ಕಳಿಗೂ ನರಕ:ಇನ್ನು ಯುದ್ಧದಲ್ಲಿ ಬದುಕುಳಿದ ಮಕ್ಕಳ ಪೈಕಿ ಬಹುತೇಕರು ಗಾಯಾಳುಗಳಾಗಿದ್ದಾರೆ ಮತ್ತು ಅಂಗವಿಕಲರಾಗಿದ್ದಾರೆ. 

ಅಲ್ಲದೇ ಎಷ್ಟೋ ಮಕ್ಕಳು ತಮ್ಮ ತಂದೆ, ತಾಯಿ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಉಳಿದುಕೊಳ್ಳಲು ಮಕ್ಕಳಿಗೆ ಸುರಕ್ಷಿತ ಸ್ಥಳವೂ ಇಲ್ಲದಂತಾಗಿದೆ. ಅದಾಗ್ಯೂ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. 

ಎಷ್ಟೋ ಮಕ್ಕಳು ಯುದ್ಧದಿಂದಾಗಿ ರೋಗ ಮತ್ತು ಇತರ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅವರಿಗೆ ಶಾಲೆ, ಆಸ್ಪತ್ರೆ ಸೇರಿದಂತೆ ಪ್ರಮುಖ ಮೂಲಸೌಕರ್ಯವೂ ಇಲ್ಲ. ಇದೆಲ್ಲದರಿಂದ ಮಕ್ಕಳು ಮಾನಸಿಕವಾಗಿಯೂ ದೈಹಿಕವಾಗಿಯೂ ನೋವು ಅನುಭವಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

Share this article