ಸ್ಪರ್ಧಿಸಿದ್ದ 30ರ ಪೈಕಿ 6ರಲ್ಲಷ್ಟೇ ಜಯ । ಯುವಕರೇ ಕೈಬಿಟ್ಟ ಕಾರಣ ಎನ್‌ಸಿಪಿ ಪತನ
ಢಾಕಾ: 2024ರಲ್ಲಿ ದೇಶವ್ಯಾಪಿ ದಂಗೆ, ನರಮೇಧದ ಮೂಲಕ ಕಂಡುಕೇಳರಿಯದ ಹಿಂಸಾಚಾರದ ಮೂಲಕ 2024ರಲ್ಲಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪದಚ್ಯುತಿಗೆ ಕಾರಣವಾಗಿದ್ದ ಜೆನ್‌ಝೀಗಳನ್ನು ಬಾಂಗ್ಲಾದೇಶದ ಮತದಾರರು ಸಾರಸಾಗಟಾಗಿ ತಿರಸ್ಕರಿಸಿದ್ದಾರೆ.
ಹಿಂಸಾಚಾರ, ನಿರೀಕ್ಷೆ ಮೀರಿ ಫಲ ಕೊಟ್ಟ ಹಿನ್ನೆಲೆಯಲ್ಲಿ ಚುನಾವಣೆಯಲ್ಲೂ ಮತದಾರರು ತಮ್ಮ ಕೈಹಿಡಿಯಲಿದ್ದಾರೆ ಎಂದು ಜೆನ್‌ಝೀ ನಾಯಕರು ನ್ಯಾಷನಲ್ ಸಿಟಿಜನ್ ಪಕ್ಷ (ಎನ್‌ಸಿಪಿ) ಸ್ಥಾಪಿಸಿ ಮೊದಲ ಬಾರಿ ಸಾರ್ವತ್ರಿಕ ಚುನಾವಣೆ ಕಣಕ್ಕೆ ಇಳಿದಿದ್ದರು. ಆದರೆ ಎನ್‌ಸಿಪಿ ಸ್ಪರ್ಧಿಸಿದ್ದ 30 ಕ್ಷೇತ್ರಗಳ ಪೈಕಿ 6ರಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ. ಅದು ಕೂಡಾ ಜಮಾತ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿದ ಪರಿಣಾಮ ಇಷ್ಟು ಸ್ಥಾನ ಒಲಿದುಬಂದಿದೆ ಎನ್ನಲಾಗಿದೆ.==
ಸೋಲಿಗೇನು ಕಾರಣ?ಬಾಂಗ್ಲಾದೇಶದ ಮೊದಲ ವಿದ್ಯಾರ್ಥಿ ನೇತೃತ್ವದ ರಾಜಕೀಯ ಪಕ್ಷವಾಗಿರುವ ಎನ್‌ಸಿಪಿ ಹಸೀನಾರನ್ನು ಅಧಿಕಾರದಿಂದ ಇಳಿಸಲು ಒಟ್ಟಿಗೆ ಹೋರಾಡಿ ಯಶಸ್ವಿಯಾದರೂ, ಬಳಿಕ ಈ ಒಗ್ಗಟ್ಟು ಉಳಿಯಲಿಲ್ಲ. ಜತೆಗೆ, ಹಲವು ವರ್ಷಗಳಿಂದ ಬೇರೂರಿರುವ ಬಿಎನ್‌ಪಿಯಂತಹ ದೈತ್ಯ ಪಕ್ಷಗಳೆದುರು ನಿಲ್ಲಲು ಈ ಪಕ್ಷ ಶಕ್ತವಾಗಿರಲಿಲ್ಲ. ಸಾಲದ್ದಕ್ಕೆ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಎನ್‌ಪಿಯ ಕಡೆ ಒಲವು ತೋರಿದ್ದು, ಯುವಕರೇ ಕಟ್ಟಿದ ಪಕ್ಷಕ್ಕೆ ಪೆಟ್ಟು ಕೊಟ್ಟಿತು.
==ಹಿಂದೂ ಸಂಖ್ಯೆ ಹೆಚ್ಚಿರುವ ಬಂಗಾಳ ಗಡಿಪ್ರದೇಶಗಳು ಇಸ್ಲಾಮಿಕ್ ಜಮಾತ್ ತೆಕ್ಕೆಗೆ
ಢಾಕಾ: ಬಾಂಗ್ಲಾದೇಶದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಪಕ್ಷ ಜಮಾತ್-ಎ-ಇಸ್ಲಾಮಿ ಗೆಲುವು ಸಾಧಿಸಿದೆ. ಈ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜನಾಂಗೀಯ ಹಿಂಸೆ ತೀವ್ರವಾಗುವ ಆತಂಕ ಸೃಷ್ಟಿಸಿದೆ.
ಪ. ಬಂಗಾಳದ ಗಡಿಯಲ್ಲಿರುವ ಸತ್ಖಿರಾ, ಕುಶ್ತಿಯಾ, ಖುಲ್ನಾ ಪಟ್ಟಿಯ ಕೆಲವು ಭಾಗಗಳು ಮತ್ತು ರಂಗ್‌ಪುರ ಪ್ರದೇಶಗಳನ್ನು ಜಮಾತ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈಗಾಗಲೇ ಇಲ್ಲಿ ಮಸೀದಿ ಮತ್ತು ಮದರಸಾಗಳು ತಮ್ಮ ಜಾಲವನ್ನು ವಿಸ್ತರಿಸಿವೆ. ಜಮಾತ್ ಪ್ರಭಾವ ಹೆಚ್ಚುತ್ತಿದ್ದಂತೆ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಭೂವಿವಾದ, ಬೆದರಿಕೆಯಂತಹ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.==
ಬಾಂಗ್ಲನ್ನರಿಂದ ಡಬಲ್ ಮತದಾನ!ಸಂಸತ್, ಜನಮತಗಣನೆಗೆಗಾಗಿ ಪ್ರತ್ಯೇಕ ಮತ ಚಲಾವಣೆ
ಢಾಕಾ: ಗುರುವಾರ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಮತದಾರರು ಎರಡೆರಡು ಬಾರಿ ಮತದಾನ ಚಲಾಯಿಸಿದ್ದಾರೆ. ಈ ರೀತಿ ಆಗಿರುವುದು ಇದೇ ಮೊದಲ ಬಾರಿ. ಮೊದಲನೆಯ ಮತವು ಪ್ರಧಾನಿ ಅಭ್ಯರ್ಥಿ ಆಯ್ಕೆಗಾದರೆ, ಎರಡನೆಯದು ರಾಷ್ಟ್ರದ ಆಡಳಿತ ರಚನೆಯನ್ನು ಬದಲಿಸುವ ಜುಲೈ ಚಾರ್ಟರ್ ಬಗ್ಗೆ ಜನಾಭ್ರಿಪ್ರಾಯ ಸಂಗ್ರಹಕ್ಕೆ.
ಏನಿದು ಚಾರ್ಟರ್?:ದೇಶ ಮತ್ತೆ ನಿರಂಕುಶವಾದದತ್ತ ಮರಳದಂತೆ ತಡೆದು ಪ್ರಜಾಪ್ರಭುತ್ವ ದೇಶವಾಗಿ ಮುಂದುವರೆಯುವ ಸಲುವಾಗಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಮತ್ತು 25 ಪಕ್ಷಗಳು ಒಪ್ಪಿರುವ ರಾಜಕೀಯ ಒಪ್ಪಂದವನ್ನು ‘ಜುಲೈ ಚಾರ್ಟರ್’ ಎಂದು ಕರೆಯಲಾಗುತ್ತದೆ. ಇದರಡಿಯಲ್ಲಿ ಕೆಲ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡುವ ಮೂಲಕ ಆಡಳಿತ ವ್ಯವಸ್ಥೆಯನ್ನು ಬದಲಿಸಲಾಗುತ್ತದೆ.2 ಬಾರಿ ಪ್ರಧಾನಿಯಾದವರು ಮತ್ತೆ ಆ ಹುದ್ದೆಗೇರುವಂತಿಲ್ಲ, ಪ್ರಧಾನಿ ಸರ್ಕಾರದ ಮುಖ್ಯಸ್ಥರಾಗಿದ್ದುಕೊಂಡು ಅವರ ಪಕ್ಷಕ್ಕೂ ಮುಖ್ಯಸ್ಥರಾಗಿರಕೂಡದು, ವಿಪಕ್ಷಗಳು ಮತ್ತು ಸಂಸತ್ತಿನ ಒಪ್ಪಿಗೆಯಿಲ್ಲದೆ ಪ್ರಧಾನಿ ದೇಶದಲ್ಲಿ ತುರ್ತುಸ್ಥಿತಿ ಹೇರಬಾರದು ಎಂಬಿತ್ಯಾದಿ ನಿಯಮಗಳನ್ನೊಳಗೊಂಡಿದೆ. ಜತೆಗೆ ದ್ವಿಸದನ ವ್ಯವಸ್ಥೆ ಜಾರಿ, ಮುಖ್ಯ ವಿರೋಧ ಪಕ್ಷದವರನ್ನೇ ಸಂಸತ್ತಿನ ಉಪಸಭಾಪತಿಯನ್ನಾಗಿ ನೇಮಿಸುವುದು, ಲೋಕಸಭೆಯ 400ರ ಪೈಕಿ 100 ಸ್ಥಾನಗಳು ಮಹಿಳೆಯರಿಗೆ ಮೀಸಲಿಡುವುದು, ಚುನಾವಣೆಗೆ ಇವಿಎಂ ಬಳಕೆ ನಿಷೇಧ, ದೇಶವಾಸಿಗಳನ್ನು ಬೆಂಗಾಲಿಗಳ ಬದಲಿಗೆ ಬಾಂಗ್ಲನ್ನರು ಎಂದು ಗುರುತಿಸುವಿಕೆ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗುವುದು.ಈ ಚಾರ್ಟರ್‌ಗೆ ಜನರಿಂದ ಶೇ.65.3ರಷ್ಟು ಮತ ದೊರಕಿದ್ದು, ಇದಕ್ಕನುಗುಣವಾದ ಬದಲಾವಣೆಗಳು 180 ದಿನಗಳಲ್ಲಿ ಆಗಲಿವೆ.
==ಹಸೀನಾ ಗಡೀಪಾರು ಮಾಡಿ: ಭಾರತಕ್ಕೆ ಬಿಎನ್‌ಪಿ ಆಗ್ರಹ
ಢಾಕಾ: ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಎನ್‌ಪಿ, ತನ್ನ ಕಡುವೈರಿ ಶೇಖ್ ಹಸೀನಾರನ್ನು ಗಡೀಪಾರು ಮಾಡುವಂತೆ ಭಾರತಕ್ಕೆ ಆಗ್ರಹಿಸಿದೆ. ‘ಬಾಂಗ್ಲಾದೇಶದಲ್ಲಿ ವಿಚಾರಣೆ ಎದುರಿಸಲು, ಕಾನೂನಿನ ಪ್ರಕಾರ ಹಸೀನಾರನ್ನು ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ.
ಇದು ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವಿನ ವಿಷಯ’ ಎಂದು ಬಿಎನ್‌ಪಿ ನಾಯಕ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ. ಜತೆಗೆ, ‘ನಾವು ಪರಸ್ಪರ ಗೌರವಯುತವಾದ ಸ್ನೇಹಪರ ಸಂಬಂಧವನ್ನು ಬಯಸುತ್ತೇವೆ’ ಎಂದರು. ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿ ದಂಗೆಯ ಪರಿಣಾಮ, ಪ್ರಧಾನಿಯಾಗಿದ್ದ ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅವರ ವಿರುದ್ಧ ನರಮೇಧ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಜೀವಾವಧಿ ಶಿಕ್ಷೆಯನ್ನೂ ಬಾಂಗ್ಲಾ ವಿಧಿಸಿದೆ.==
ಓರ್ವ ಹಿಂದೂಗೆ ಜಯ, ಇನ್ನೋರ್ವಗೆ ಸೋಲುಢಾಕಾ: ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹತ್ಯೆಗಳು ವಿಪರೀತವಾಗಿರುವ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷದಿಂದ ಕಣಕ್ಕಿಳಿದಿದ್ದ ಹಿಂದೂ ಅಭ್ಯರ್ಥಿ ಗಾಯೆಶ್ವರ್ ಚಂದ್ರ ರಾಯ್ ಜಯ ಗಳಿಸಿದ್ದಾರೆ. ಢಾಕಾ-3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು 99,163 ಮತಗಳನ್ನು ಪಡೆಯುವ ಮೂಲಕ ಜಮಾತ್-ಎ-ಹಿಂದ್ ಪಕ್ಷದ ಅಭ್ಯರ್ಥಿಯನ್ನು ಹಿಂದಿಕ್ಕಿದ್ದಾರೆ. ಅತ್ತ ಜಮಾತ್‌ನ ಏಕೈಕ ಹಿಂದೂ ಅಭ್ಯರ್ಥಿ ಕೃಷ್ಣ ನಂದಿ ಸೋಲುಂಡಿದ್ದಾರೆ. ಚುನಾವಣೆಯಲ್ಲಿ ಒಟ್ಟು 80 ಹಿಂದೂಗಳು ಸ್ಪರ್ಧಿಸಿದ್ದರು. ಇದರಲ್ಲಿ 10 ಮಹಿಳೆಯರಿದ್ದರು.==
7 ಮಹಿಳೆಯರು ವಿಜಯಿಢಾಕಾ: ಗುರುವಾರ ನಡೆದ ಚುನಾವಣೆಯಲ್ಲಿ 7 ಮಹಿಳಾ ಅಭ್ಯರ್ಥಿಗಳು ವಿಜಯಿಗಳಾಗಿದ್ದು, ಇವರಲ್ಲಿ 6 ಜನ ಬಿಎನ್‌ಪಿಗೆ ಸೇರಿದವರು. ಇನ್ನೊಬ್ಬರು ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. 300 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಎನ್‌ಪಿ ಮಹಿಳೆಯರನ್ನು ಕಣಕ್ಕಿಳಿಸಿತ್ತು. ಎಲ್ಲಾ ಪಕ್ಷಗಳಿಂದ ಒಟ್ಟು 83 ಸ್ತ್ರೀಯರು ಸ್ಪರ್ಧಿಸಿದ್ದರು.