ನವದೆಹಲಿ : ಡಿ.6ರಂದು 25 ಮಂದಿಯ ಸಾವಿಗೆ ಕಾರಣವಾಗಿದ್ದ ಗೋವಾದ ಬಿರ್ಚ್ ನೈಟ್‌ಕ್ಲಬ್‌ನ ಮಾಲೀಕರಾ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾರನ್ನು ಥಾಯ್ಲೆಂಡ್‌ನಿಂದ ಗಡೀಪಾರು ಮಾಡಲಾಗಿದ್ದು, ದಿಲ್ಲಿಗೆ ಬಂದಿಳಿದ ಕೂಡಲೇ ಇಬ್ಬರನ್ನೂ ಬಂಧಿಸಲಾಗಿದೆ.
ಮೊದಲು ದಿಲ್ಲಿ ಹಾಗೂ ಗೋವಾ ಪೊಲೀಸರು ಜಂಟಿಯಾಗಿ ಇವರನ್ನು ಬಂಧಿಸಿದರು. ನಂತರ ಕೋರ್ಟು ಇವರನ್ನು 2 ದಿನ ಗೋವಾ ಪೊಲೀಸರ ವಶಕ್ಕೆ ಒಪ್ಪಿಸಿದೆ. ಇಬ್ಬರ ವಿರುದ್ಧ ಉದ್ದೇಶಪೂರ್ವಕವಲ್ಲದ ನರಮೇಧ ಹಾಗೂ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ. ತಮ್ಮ ನೈಟ್‌ಕ್ಲಬ್‌ನಲ್ಲಿ ಬೆಂಕಿ ದುರಂತ ಸಂಭವಿಸಿದ ಮಾಹಿತಿ ಸಿಗುತ್ತಿದ್ದಂತೆ ಗೌರವ್ ಹಾಗೂ ಸೌರಭ್ ಥಾಯ್ಲೆಂಡ್‌ಗೆ ಪರಾರಿಯಾಗಿದ್ದರು. ಅದಕ್ಕೆ ವೈದ್ಯಕೀಯ ಚಿಕಿತ್ಸೆ ಮತ್ತು ವ್ಯವಹಾರದ ಕಾರಣವನ್ನೂ ನೀಡಿದ್ದರು. ಆದರೆ ಭಾರತ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ಇದನ್ನು ಆಧರಿಸಿ ಥಾಯ್ಲೆಂಡ್ ಅಧಿಕಾರಿಗಳು ಇಬ್ಬರನ್ನು ಡಿ.11ರಂದು ಫುಕೆಟ್‌ನಲ್ಲಿ ಬಂಧಿಸಿದ್ದರು. ಇತ್ತ ದೆಹಲಿ ಕೋರ್ಟ್, ಆರೋಪಿಗಳು ಸಲ್ಲಿದಿದ್ದ ಜಾಮೀನು ಅರ್ಜಿಯನ್ನೂ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಬ್ಬರನ್ನೂ ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ಬಿರ್ಚ್ ದುರ್ಘಟನೆಯಿಂದ ಎಚ್ಚೆತ್ತಿರುವ ಗೋವಾ ಅಧಿಕಾರಿಗಳು, ಅಗ್ನಿ ಸುರಕ್ಷತೆ ಸೇರಿದಂತೆ ಹಲವು ಅಗತ್ಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ಗೋವಾದಲ್ಲಿರುವ ‘ದ ಕೇಪ್ ಗೋವಾ’ ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ. ಸಣ್ಣ ಗುಡುಸಲಿನಂತಹ ರಚನೆಗಷ್ಟೇ ಅನುಮತಿ ಪಡೆದು, ಅದರ ಜಾಗದಲ್ಲಿ ದೊಡ್ಡ ರೆಸ್ಟೋರೆಂಟ್ ಕಟ್ಟದ್ದರು ಎಂಬುದೂ ತಿಳಿದುಬಂದಿದೆ.