ಮೋದಿ ಸರ್ಕಾರ ಹಿಂದೆಗಿಂತ 3 ಪಟ್ಟು ವೇಗದಲ್ಲಿ ಕೆಲಸ : ರಾಷ್ಟ್ರಪತಿ ದ್ರೌಪದಿ ಮುರ್ಮು

KannadaprabhaNewsNetwork |  
Published : Feb 01, 2025, 12:01 AM ISTUpdated : Feb 01, 2025, 05:20 AM IST
ಮುರ್ಮು | Kannada Prabha

ಸಾರಾಂಶ

  ಪ್ರಧಾನಿ ಮೋದಿ ಸರ್ಕಾರದ ಮೂರನೇ ಅವಧಿಯು ಈ ಹಿಂದಿನ ಆಡಳಿತಕ್ಕಿಂತ ವೇಗವಾಗಿ ಕೆಲಸ ಮಾಡುತ್ತಿದ್ದು, ತ್ವರಿತಗತಿಯಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ನವದೆಹಲಿ: ಸುಧಾರಣೆ, ಸಾಧನೆ, ಬದಲಾವಣೆಯು ಭಾರತದ ಆಡಳಿತ ಮಾದರಿಯ ಬಲಿಷ್ಠ ಸ್ತಂಭಗಳಾಗಿವೆ. ಇದು ಇಡೀ ವಿಶ್ವಕ್ಕೇ ಮಾದರಿಯಾಗಿ ಹೊರಹೊಮ್ಮಿದೆ. ಪ್ರಧಾನಿ ಮೋದಿ ಸರ್ಕಾರದ ಮೂರನೇ ಅವಧಿಯು ಈ ಹಿಂದಿನ ಆಡಳಿತಕ್ಕಿಂತ ವೇಗವಾಗಿ ಕೆಲಸ ಮಾಡುತ್ತಿದ್ದು, ತ್ವರಿತಗತಿಯಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಶುಕ್ರವಾರ ಆರಂಭವಾದ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ನೀತಿ ನಿಷ್ಕ್ರಿಯತೆಗೆ ಅಂತ್ಯ ಹಾಡಲು ಕ್ರಮಕೈಗೊಂಡಿದೆ ಎಂದ ರಾಷ್ಟ್ರಪತಿ, ಯುವಕರು, ರೈತರು, ಮಹಿಳೆಯರು, ಉದ್ಯೋಗಸೃಷ್ಟಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾರಿಮಾಡುತ್ತಿರುವ ಕ್ರಮಗಳ ಪಟ್ಟಿಮಾಡಿದರು.

ಮೋದಿ ಸರ್ಕಾರದ ಮೂರನೇ ಅವಧಿಯು ಈ ಹಿಂದಿನ ಆಡಳಿತಕ್ಕಿಂತ ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ. ವಕ್ಫ್‌ ಬೋರ್ಡ್‌, ಒಂದು ದೇಶ ಒಂದು ಚುನಾವಣೆಯಂಥ ದೊಡ್ಡ ನಿರ್ಧಾರಗಳನ್ನು ಸರ್ಕಾರ ಶೀಘ್ರವಾಗಿ ತೆಗೆದುಕೊಂಡಿದೆ. ಸಮಾಜದ ಪ್ರತಿವರ್ಗಕ್ಕೂ ಗುಣಮಟ್ಟದ ಮತ್ತು ಅಗ್ಗದ ಆರೋಗ್ಯ ಸೇವೆಗೆ ಸರ್ಕಾರ ಇಂಬು ನೀಡುತ್ತಿದೆ. ಎಲ್ಲಾ ನಾಗರಿಕರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 1.75 ಲಕ್ಷ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್‌ಪೀಡಿತರ ರೋಗಿಗಳ ಹಿನ್ನೆಲೆಯಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಹಲವು ಔಷಧಗಳ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲಾಗಿದೆ.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಸರ್ಕಾರವು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ 6 ಲಕ್ಷ ಕೋಟಿ ಮಂದಿಗೆ ಆರೋಗ್ಯ ಇನ್ಶೂರೆನ್ಸ್‌ ಒದಗಿಸಲು ನಿರ್ಧರಿಸಿದೆ. ಯುವಕರ ಶಿಕ್ಷಣ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ದೇಶದಲ್ಲಿ 25 ಕೋಟಿ ಜನರನ್ನು ತೀವ್ರ ಬಡತನದಿಂದ ಮೋದಿ ಸರ್ಕಾರ ಮೇಲೆತ್ತಿದೆ. ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆ ಮೂಲಕ ಹೆಚ್ಚುವರಿಯಾಗಿ 3 ಕೋಟಿ ಕುಟುಂಬಗಳಿಗೆ ಮನೆ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ