ನವದೆಹಲಿ : ಜುಲೈ ತಿಂಗಳಲ್ಲಿ, ಜಿಎಸ್ಟಿ ಇತಿಹಾಸದಲ್ಲೇ 2ನೇ ಗರಿಷ್ಠವಾದ ಭರ್ಜರಿ 2.11 ಲಕ್ಷ ಕೋಟಿ ರು. ಒಟ್ಟು ಸರಕು-ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.15.4ರಷ್ಟು ಹೆಚ್ಚಳವಾಗಿದೆ. ಈ ಏರಿಕೆಗೆ, ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಹಾಗೂ ಖರೀದಿ ಕಾರಣವಾಗಿದೆ. 2026ರ ಏಪ್ರಿಲ್‌ನಲ್ಲಿ 2.43 ಲಕ್ಷ ಕೋಟಿ ರು. ಸಂಗ್ರಹ ಈವರೆಗಿನ ಅತ್ಯಧಿಕ.
2025ರ ಜುಲೈನಲ್ಲಿ ಸಂಗ್ರಹವಾದ ಜಿಎಸ್‌ಟಿ ಮೊತ್ತ 1.83 ಲಕ್ಷ ಕೋಟಿ ರು. ಆಗಿತ್ತು. 2026ರ ಜೂನ್‌ನಲ್ಲಿ 1.95 ಲಕ್ಷ ಕೋಟಿ ರು. ದೇಶದ ಬೊಕ್ಕಸ ಸೇರಿತ್ತು.
ಭಾರತದೊಳಗೆ ಸರಕು ಮತ್ತು ಸೇವೆಗಳ ಮಾರಾಟ ಹಾಗೂ ಖರೀದಿಯಿಂದಾಗಿ 1.44 ಲಕ್ಷ ಕೋಟಿ ರು.(ಶೇ.10.1) ತೆರಿಗೆ ಸಂಗ್ರಹವಾಗಿದೆ. ಅತ್ತ ಆಮದಾದ ವಸ್ತುಗಳ ಮೇಲಿನ ಸುಂಕದಿಂದ 66,511 ಕೋಟಿ ರು.(ಶೇ.29) ಬಂದಿದೆ. ಜುಲೈನಲ್ಲಿ ಒಟ್ಟು ಕೇಂದ್ರ ಸರಕು ಮತ್ತು ಸೇವಾ ತೆರಿಗೆಯಿಂದ 39,835 ಕೋಟಿ ರು., ರಾಜ್ಯ ಜಿಎಸ್‌ಟಿಯಿಂದ 47,881 ಕೋಟಿ ರು., ಸಮಗ್ರ ಜಿಎಸ್‌ಟಿಯಿಂದ 1.23 ಲಕ್ಷ ಕೋಟಿ ರು. ಸಂಗ್ರಹ ಆಗಿದೆ.
ಜುಲೈ 2026 ರಲ್ಲಿ ರಾಜ್ಯವಾರು ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು ₹32,210 ಕೋಟಿ ಸಂಗ್ರಹಸಿದೆ. 2ನೇ ಸ್ಥಾನದಲ್ಲಿರುವ ಕರ್ನಾಟಕ ₹13,854 ಕೋಟಿ ಹಾಗೂ 3ನೇ ಸ್ಥಾನದಲ್ಲಿರುವ ಗುಜರಾತ್ - ₹12,923 ಕೋಟಿ ಸಂಗ್ರಹಿಸಿವೆ.