ತೆರಿಗೆ ದರ ಇಳಿದರೂ ಅಕ್ಟೋಬರಲ್ಲಿ ಜಿಎಸ್ಟಿ ಸಾರ್ವಕಾಲಿಕ ದಾಖಲೆ

KannadaprabhaNewsNetwork |  
Published : Nov 02, 2025, 02:45 AM ISTUpdated : Nov 02, 2025, 04:49 AM IST
GST Rate

ಸಾರಾಂಶ

ಜಿಎಸ್‌ಟಿ ಸ್ತರ ಹಾಗೂ ದರ ಕಡಿತದ ಹೊರತಾಗಿಯೂ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ನಡೆದಿರುವ ಭರ್ಜರಿ ಖರೀದಿ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ 1.96 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ಆಗಿರುವ ದಾಖಲೆಯ ಸಂಗ್ರಹವಾಗಿದೆ.

 ನವದೆಹಲಿ :  ಜಿಎಸ್‌ಟಿ ಸ್ತರ ಹಾಗೂ ದರ ಕಡಿತದ ಹೊರತಾಗಿಯೂ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ನಡೆದಿರುವ ಭರ್ಜರಿ ಖರೀದಿ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ 1.96 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ಆಗಿರುವ ದಾಖಲೆಯ ಸಂಗ್ರಹವಾಗಿದೆ.

ಎಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ ಸೇರಿ ಸುಮಾರು 375 ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ಸೆ.22ರಂದು ಜಾರಿಗೆ ಬರುವಂತೆ ಕಡಿತಗೊಳಿಸಲಾಗಿತ್ತು. ಇಷ್ಟಾದರೂ ಅಕ್ಟೋಬರ್‌ ತಿಂಗಳಲ್ಲಿ 1,95,936 ಜಿಎಸ್ಟಿ ಸಂಗ್ರಹವಾಗಿದೆ. ಈ ಮೂಲಕ ಕಳೆದ ವರ್ಷದ ಅಕ್ಟೋಬರ್‌ಗಿಂತ ಶೇ.4.6ರಷ್ಟು ಏರಿಕೆ ದಾಖಲಾಗಿದೆ. ಅಲ್ಲದೆ, ಈ 2017ರಲ್ಲಿ ಜಿಎಸ್ಟಿ ವ್ಯವಸ್ಥೆ ಆರಂಭವಾದಾಗಿನಿಂದ ಸಂಗ್ರಹ ಆಗಿರುವ ಅಕ್ಟೋಬರಿನ ಅತಿ ಗರಿಷ್ಠ ಜಿಎಸ್ಟಿ ಸಂಗ್ರಹವಾಗಿದೆ.

ಅರ್ಥಾತ್‌ ಹಬ್ಬದ ವೇಳೆ ಜನರು, ಜಿಎಸ್ಟಿ ಕಡಿತದ ಕಾರಣ ಭಾರಿ ಪ್ರಮಾಣದ ಖರೀದಿ ಮಾಡಿದ್ದು, ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ಇದೇ ಅಕ್ಟೋಬರ್‌ನಲ್ಲಿ 1.87 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹಿಸಲಾಗಿತ್ತು. ಇನ್ನು ಇದೇ ವರ್ಷ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಕ್ರಮವಾಗಿ 1.86 ಲಕ್ಷ ಕೋಟಿ ಮತ್ತು 1.89 ಲಕ್ಷ ಕೋಟಿ ರು. ಆಗಿತ್ತು. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಈ ಬಾರಿ ಶೇ.4.6ರಷ್ಟು ಹೆಚ್ಚಾಗಿದೆ.

ಇದೇ ವೇಳೆ ಆಮದಿಂದ ಸಂಗ್ರಹಿಸಿದ ತೆರಿಗೆಯು ಶೇ.13ರಷ್ಟು ಹೆಚ್ಚಾಗಿದ್ದು, ಅಕ್ಟೋಬರ್‌ ತಿಂಗಳಲ್ಲಿ 50,884 ಕೋಟಿ ರು. ಅನ್ನು ಆಮದು ತೆರಿಗೆ ಮೂಲಕ ಸಂಗ್ರಹಿಸಲಾಗಿದೆ.

ಈ ನಡುವೆ, ಜಿಎಸ್ಟಿ ರಿಫಂಡ್‌ಗಳು ಕೂಡ ವರ್ಷದಿಂದ ವರ್ಷಕ್ಕೆ ಶೇ.39.6ರಷ್ಟು ಹೆಚ್ಚಾಗಿದೆ. ಈ ಅಕ್ಟೋಬರ್‌ನಲ್ಲಿ 26,934 ಕೋಟಿ ರು. ರಿಫಂಡ್‌ ಮಾಡಲಾಗಿದೆ.

ಅಕ್ಟೋಬರ್‌ನಲ್ಲಿ ಜಿಎಸ್ಟಿ ಸಂಗ್ರಹ

ವರ್ಷ ಜಿಎಸ್ಟಿ ಸಂಗ್ರಹ (₹ಕೋಟಿ)2025 ₹1,95,936

2024 ₹1,87,346 - 2023 ₹1,72,003

2022 ₹1,51,718 - 2021 ₹1,30,127

2020 ₹1,05,155 - 2019 ₹95,380

2018 ₹1,00,710 – 2017 ₹83,346

3 ದಿನದಲ್ಲೇ ಇನ್ನು ಜಿಎಸ್ಟಿ ನೋಂದಣಿ ಸಾಧ್ಯ 

ನವದೆಹಲಿ: ಸಣ್ಣ ಮತ್ತು ಕಡಿಮೆ ಅಪಾಯದ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರಳೀಕೃತ ಜಿಎಸ್‌ಟಿ ನೋಂದಣಿ ವ್ಯವಸ್ಥೆ ದೇಶಾದ್ಯಂತ ಶನಿವಾರದಿಂದಲೇ ಜಾರಿಗೆ ಬಂದಿದೆ. ಜಿಎಸ್ಟಿ 2.0 ಸುಧಾರಣೆಯ ಭಾಗವಾಗಿ ಜಾರಿಗೆ ತಂದಿರುವ ಯೋಜನೆಯಡಿ ಇನ್ನು 3 ದಿನಗಳ ಕೆಲಸದ ಅವಧಿಯಲ್ಲಿ ಜಿಎಸ್‌ಟಿ ರಿಜಿಸ್ಟ್ರೇಷನ್‌ ಪೂರ್ಣಗೊಳ್ಳಲಿದೆ.ಸಣ್ಣ ಮತ್ತು ಕಡಿಮೆ ಅಪಾಯಕಾರಿ ಬ್ಯುಸಿನೆಸ್‌ ಅರ್ಜಿದಾರರು ಅಂದರೆ ಯಾರ ಔಟ್‌ಪುಟ್‌ ತೆರಿಗೆ ಹೊಣೆಗಾರಿಕೆ ಪ್ರತಿ ತಿಂಗಳು 2.5 ಲಕ್ಷ ರು. ಮೀರುವುದಿಲ್ಲವೋ (ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ/ಯುಟಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಸೇರಿ)ಅವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಸೆ.3ರಂದು ಕೇಂದ್ರ ಮತ್ತು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಈ ಸರಳೀಕೃತ ನೋಂದಣಿ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಈ ಯೋಜನೆಯನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಿಕೊಳ್ಳುವ ಹಾಗೂ ಸ್ವಯಂಚಾಲಿತವಾಗಿ ಹೊರಬರುವ ಅವಕಾಶವನ್ನೂ ನೀಡಲಾಗಿದೆ. ಈ ಸರಳೀಕೃತ ಜಿಎಸ್‌ಟಿ ನೋಂದಣಿಯು ಶೇ.96ರಷ್ಟು ಹೊಸ ಅರ್ಜಿದಾರರಿಗೆ ಅನುಕೂಲ ಮಾಡಿಕೊಡಲಿದೆ.

ದಸರಾ, ದೀಪಾವಳಿ ವೇಳೆ 5 ಲಕ್ಷ ಕಾರು ಸೇಲ್‌! 

 ನವದೆಹಲಿ : ದೇಶದಲ್ಲಿ ಜಿಎಸ್ಟಿ ಸ್ತರ ಪರಿಷ್ಕರಣೆ, ನವರಾತ್ರಿ ಮತ್ತು ದೀಪಾವಳಿಯು ಕಾರು ಮಾರಾಟಗಾರರಿಗೆ ಭರ್ಜರಿ ವರವಾಗಿ ಪರಿಣಮಿಸಿದೆ. ಅಕ್ಟೋಬರ್‌ ಒಂದೇ ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

ದೇಶದ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿರುವ ಮಾರುತಿ ಸುಜುಕಿ ಒಂದೇ ತಿಂಗಳಲ್ಲಿ 2,42,096 ಕಾರುಗಳನ್ನು ಮಾರಾಟ ಮಾಡಿದ್ದು, ಇದು ಶೇ.20ರಷ್ಟು ಏರಿಕೆಯಾಗಿದೆ. ಜೊತೆಗೆ ಇಲ್ಲಿವರೆಗಿನ ಅಕ್ಟೋಬರ್‌ ಮಾರಾಟದಲ್ಲಿಯೇ ಅತ್ಯಧಿಕವಾಗಿದೆ. ಮಹೀಂದ್ರ ಕಂಪನಿಯಲ್ಲಿ 71,624 ಕಾರುಗಳು ಮಾರಾಟವಾಗಿದ್ದು, ಇದು ಶೇ.31ರಷ್ಟು ಬೆಳವಣಿಗೆಯಾಗಿದೆ. ಇನ್ನು ಟಾಟಾ ಮೋಟರ್ಸ್‌ನಲ್ಲಿ 61,295 ಕಾರುಗಳು ಸೇಲ್ ಆಗಿದ್ದು, ಶೇ.26ರಷ್ಟು ಬೇಡಿಕೆ ಹೆಚ್ಚಳವಾಗಿದೆ. ಕಿಯಾ ಮೋಟರ್ಸ್‌ನಲ್ಲಿ 29,556, ಟೊಯೋಟಾ ಕೊರ್ಲೋಸ್ಕರ್‌ನಲ್ಲಿ 42,892, ಸ್ಕೋಡಾದಲ್ಲಿ 8252, ನಿಸ್ಸಾನ್‌ನಲ್ಲಿ 2402 ಕಾರುಗಳು ಮಾರಾಟವಾಗಿವೆ. ಈ ಎಲ್ಲ ಕಂಪನಿಗಳ ಮಾರಾಟದಲ್ಲಿ ಏರಿಕೆ ಕಂಡಿದೆ.ಆದರೆ ಹ್ಯುಂಡೈ ಮೋಟರ್ಸ್‌ನಲ್ಲಿ ಮಾತ್ರ ಸೆಪ್ಟೆಂಬರ್‌ಗೆ ಹೋಲಿಸಿದರೆ, ಅಕ್ಟೋಬರ್‌ ಮಾರಾಟವು ಶೇ.3.2ರಷ್ಟು ಕುಸಿತ ಕಂಡಿದೆ. ಸೆಪ್ಟೆಂಬರ್‌ನಲ್ಲಿ 55,568 ಕಾರುಗಳನ್ನು ಮಾರಿದ್ದ ಕಂಪನಿ, ಅಕ್ಟೋಬರ್‌ನಲ್ಲಿ ಕೇವಲ 53,792 ಮಾರಿದೆ. ಮಾರಾಟ ಕುಸಿದಿದೆ.

PREV
Read more Articles on

Recommended Stories

ಇಸ್ರೋ ಮತ್ತೊಂದು ವಿಕ್ರಮ
ಜಗನ್‌ ವಿರುದ್ಧ ಮಾಜಿ ಸಿಜೆಐ ರಮಣ ವಾಗ್ದಾಳಿ