ಶ್ರೀಹರಿಕೋಟ (ಆಂಧ್ರ) : ಭಾರತೀಯ ನೆಲದಿಂದ ಉಡಾವಣೆ ಆಗುತ್ತಿರುವ ಅತಿ ತೂಕದ ಉಪಗ್ರಹ ಎಂನ್ನಿಸಿಕೊಂಡಿರುವ ಇಸ್ರೋ ನಿರ್ಮಿತ ‘ಸಿಎಂಎಸ್-03 ಸಂವಹನ ಉಪಗ್ರಹ’ದ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿವೆ. ಇದು, ಭಾನುವಾರ ಆಂಧ್ರದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಭಾನುವಾರ ಸಂಜೆ 5.26ಕ್ಕೆ ನಭಕ್ಕೆ ನೆಗೆಯಲಿದೆ.
4,410 ಕೆ.ಜಿ. ತೂಕದ ಉಪಗ್ರಹ ಇದಾಗಿದೆ. ಭಾರೀ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದಿಂದಾಗಿ ‘ಬಾಹುಬಲಿ’ ಎಂದೇ ಕರೆಯಲ್ಪಡುವ ಎಲ್‌ವಿಎಂ3-ಎಂ5 ರಾಕೆಟ್ ಈ ಸಂವಹನ ಉಪಗ್ರಹವನ್ನು ಹೊತ್ತೊಯ್ಯಲಿದ್ದು, ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ (ಜಿಟಿಒ-ಭೂಸ್ಥಿರ ವರ್ಗಾವಣೆ ಕಕ್ಷೆ) ಕೂರಿಸುವ ಕೆಲಸ ಮಾಡಲಿದೆ.
ರಾಕೆಟ್‌ನ ಅಸೆಂಬ್ಲಿ ಕಾರ್ಯ ಪೂರ್ಣಗೊಂಡಿದ್ದು, ಶ್ರೀಹರಿಕೋಟಾದ ಎರಡನೇ ಲಾಂಚ್ ಪ್ಯಾಡ್‌ಗೆ ಕಳುಹಿಸಿಕೊಡಲಾಗಿದೆ. ಉಡ್ಡಯನ ಪೂರ್ವ ಕಾರ್ಯಾಚರಣೆಗಳು ಬಹುತೇಕ ಪೂರ್ಣಗೊಂಡಿದೆ ಎಂದು ಭಾರತೀಯ ಬಾಗ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ.
ಸುಮಾರು 43.5 ಮೀಟರ್ ಎತ್ತರದ ಎಲ್‌ವಿಎಂ3 ರಾಕೆಟ್ 4 ಸಾವಿರ ಕೇಜಿಗೂ ಹೆಚ್ಚು ತೂಕದದ ಉಪಗ್ರಹಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ.
ಈ ಹಿಂದೆ ಡಿ.5, 2018ರಂದು ಇಸ್ರೋ ತನ್ನ ಅತೀ ತೂಕದ ಅಂದರೆ 5,854 ಕೆ.ಜಿ. ತೂಕದ ಉಪಗ್ರಹ ಜಿಎಸ್‌ಎಟಿ-11 ಅನ್ನು ಹಾರಿಬಿಟ್ಟಿತ್ತು. ಆದರೆ ಅದನ್ನು ಫ್ರೆಂಚ್ ಗಯಾನಾದಿಂದ ಉಡ್ಡಯನ ಮಾಡಿತ್ತು. ಇದು ಇಸ್ರೋದ ಈವರೆಗಿನ ಅತೀ ಭಾರದ ಉಪಗ್ರಹವಾಗಿದೆ. ಆದರೆ ಭಾರತದಲ್ಲಿ 4000 ಕೇಜಿಗಿಂತ ಅಧಿಕ ತೂಕದ ಉಪಗ್ರಹ ಉಡಾವಣೆ ಇದೇ ಮೊದಲು.
ಇನ್ನು ಇದೀಗ ಸಿಎಂಎಸ್-03 ಉಪಗ್ರಹವನ್ನು ಹೊತ್ತೊಯ್ಯುತ್ತಿರುವ ಎಲ್‌ವಿಎಂ3-ಎಂ5 ರಾಕೆಟ್‌ಗೆ ಇದು ಐದನೇ ಕಾರ್ಯಾಚರಣೆಯಾಗಿದೆ. ಚಂದ್ರಯಾನ-3 ಯೋಜನೆಯಲ್ಲೂ ಎಂವಿಎಂ-3 ರಾಕೆಟ್ ಅನ್ನೇ ಬಳಸಲಾಗಿತ್ತು.
ಸಿಎಂಎಸ್-03 ಉಪಗ್ರಹವು ಸಾಗರ ಪ್ರದೇಶಗಳಿಗೆ ಈ ಹಿಂದಿನ ಉಪಗ್ರಹಗಳಿಗಿಂತ ನಿಖರ ಸಂವಹನ ಸೇವೆಗಳನ್ನು ಒದಗಿಸುತ್ತದೆ. ಯುದ್ಧನೌಕೆಗಳು, ಸಬ್ ಮರೀನ್‌ಗಳು, ಸಮರನೌಕೆಗಳಿಂದ ಹಾರುವ ಯುದ್ಧ ವಿಮಾನಗಳು ಮತ್ತು ಸಮುದ್ರ ಕಿನಾರೆಯ ನಿಯಂತ್ರಣ ಕೇಂದ್ರಗಳ ಜತೆ ಸಂಪರ್ಕ ಸಾಧಿಸುತ್ತಿದೆ. ವಿಶೇಷವಾಗಿ ನೌಕಾಪಡೆಗಾಗಿ ಇದನ್ನು ನಿರ್ಮಿಸಲಾಗಿದೆ.