ಆತ್ಮಾಹುತಿ ದಾಳಿಗೆ ರೆಡಿಯಾಗಿದ್ದ 4 ಐಸಿಸ್‌ ಉಗ್ರರ ಬಂಧನ

KannadaprabhaNewsNetwork | Updated : May 21 2024, 06:24 AM IST

ಸಾರಾಂಶ

ದೇಶದಲ್ಲಿ ಭಾರೀ ದುಷ್ಕೃತ್ಯಕ್ಕೆ ಸಜ್ಜಾಗಿದ್ದ, ಅಗತ್ಯಬಿದ್ದರೆ ಆತ್ಮಾಹುತಿ ದಾಳಿಗೂ ಸಜ್ಜಾಗಿದ್ದ ಉಗ್ರ ಜಾಲವೊಂದನ್ನು ಬೇಧಿಸಿರುವ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಐಸಿಸ್‌ಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಸೋಮವಾರ ಬಂಧಿಸಿದೆ.

ಅಹಮದಾಬಾದ್‌: ದೇಶದಲ್ಲಿ ಭಾರೀ ದುಷ್ಕೃತ್ಯಕ್ಕೆ ಸಜ್ಜಾಗಿದ್ದ, ಅಗತ್ಯಬಿದ್ದರೆ ಆತ್ಮಾಹುತಿ ದಾಳಿಗೂ ಸಜ್ಜಾಗಿದ್ದ ಉಗ್ರ ಜಾಲವೊಂದನ್ನು ಬೇಧಿಸಿರುವ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಐಸಿಸ್‌ಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಸೋಮವಾರ ಬಂಧಿಸಿದೆ. 

ಇದರೊಂದಿಗೆ ಸಂಭವನೀಯ ದುರಂತವೊಂದು ತಪ್ಪಿದೆ. ಬಂಧಿತರೆಲ್ಲರೂ ಶ್ರೀಲಂಕಾ ಮೂಲದ ಪ್ರಜೆಗಳು.ಬಂಧಿತರನ್ನು ಮೊಹಮ್ಮದ್‌ ನುಸ್ರತ್‌, ಮೊಹಮ್ಮದ್‌ ಫಾರುಖ್‌, ಮೊಹಮ್ಮದ್‌ ನಫ್ರಾನ್‌ ಮತ್ತು ಮೊಹಮ್ಮದ್‌ ರಸದೀನ್‌ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐಸಿಸ್‌ ನಂಟಿನ ಮಾಹಿತಿ ನೀಡುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಬಂಧಿತರ ಮೊಬೈಲ್‌ನಲ್ಲಿದ್ದ ಸುಳಿವು ಆಧರಿಸಿ ಅಹಮದಾಬಾದ್‌ ನಿರ್ಜನ ಪ್ರದೇಶವೊಂದರಿಂದ ದಾಳಿಗೆ ಬಳಸಲು ಉದ್ದೇಶಿಸಿದ್ದ ಪಾಕಿಸ್ತಾನ ನಿರ್ಮಿತ ಪಿಸ್ತೂಲ್‌, ಗುಂಡು, ಐಸಿಸ್‌ ಧ್ವಜ ಕೂಡಾ ವಶಪಡಿಸಿಕೊಳ್ಳಲಾಗಿದೆ.

ಪಾಕ್‌ ಏಜೆಂಟ್‌ ಕುತಂತ್ರ:

ಶ್ರೀಲಂಕಾದಲ್ಲಿ ನಿಷೇಧಿತ ಎನ್‌ಜೆಟಿ ಎಂಬ ಉಗ್ರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ನಾಲ್ವರು ಆರೋಪಿಗಳು, ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ ಅಬು ಬಕ್ರ್‌ ಅಲ್‌ ಬಗ್ದಾದಿ ಎಂಬಾತನ ಸಂಪರ್ಕಕ್ಕೆ ಬಂದಿದ್ದರು. ನಾಲ್ವರನ್ನೂ ಮತೀಯವಾಗಿ ಪ್ರಚೋದಿಸಿದ್ದ ಅಬು, ಭಾರತದಲ್ಲಿ ದುಷ್ಕೃತ್ಯ ಎಸಗಲು ಸೂಚಿಸಿದ್ದ.

ಈ ಕೃತ್ಯಕ್ಕಾಗಿ ಇವರಿಗೆ ತಲಾ 4 ಲಕ್ಷ ‘ಶ್ರೀಲಂಕಾ ರುಪಾಯಿ’ಗಳನ್ನು ನೀಡಲಾಗಿತ್ತು. ಅಲ್ಲದೆ ದಾಳಿಗೆ ಅಗತ್ಯವಾದ ಶಸ್ತ್ರಾಸ್ತ್ರ ನೀಡುವ ಭರವಸೆಯನ್ನೂ ಅಬು ನೀಡಿದ್ದ.ಅದರಂತೆ ನಾಲ್ವರೂ ಲಂಕಾದಿಂದ ಚೆನ್ನೈಗೆ ಬಂದು, ಅಲ್ಲಿಂದ ವಿಮಾನದಲ್ಲಿ ಅಹಮದಾಬಾದ್‌ಗೆ ಬಂದಿದ್ದರು. ಇಲ್ಲಿ ಅವರಿಗೆ ವ್ಯಕ್ತಿಯೊಬ್ಬ ಭಾರತದಲ್ಲಿ ಎಲ್ಲಿ? ಯಾವಾಗ? ಹೇಗೆ ದುಷ್ಕೃತ್ಯ ನಡೆಸಬೇಕು ಎಂಬ ಸಂದೇಶ ರವಾನಿಸುವನಿದ್ದ.

ಆದರೆ ಈ ಕುರಿತು ಖಚಿತ ಮಾಹಿತಿ ಪಡೆದ ಎಟಿಎಸ್‌ ಸಿಬ್ಬಂದಿ, ಸೋಮವಾರ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿ ನಾಲ್ವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೇ 12ರಂದು ಅಹಮದಾಬಾದ್‌ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಬಾಂಬ್‌ ಕರೆ ಮಾಡಲಾಗಿತ್ತು. ಆದರೆ ಪರಿಶೀಲನೆ ವೇಳೆ ಅದೊಂದು ಹುಸಿ ಕರೆ ಎಂದು ಸಾಬೀತಾಗಿತ್ತು. ಅದರ ಬೆನ್ನಲ್ಲೇ ಶಂಕಿತ ಉಗ್ರರು ಬಲೆಗೆ ಬಿದ್ದಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲೂ ಎಟಿಎಸ್‌ ಸಿಬ್ಬಂದಿ, ರಾಜ್‌ಕೋಟ್‌ ಬಳಿ ಅಲ್‌ಖೈದಾ ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಿದ್ದರು.

Share this article