ಜಾಗ್ರೆಬ್(ಕ್ರೊಯೇಷಿಯಾ): ಇಲ್ಲಿ ನಡೆಯುತ್ತಿರುವ ಸೂಪರ್ ಯುನೈಟೆಡ್ ಚೆಸ್ ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್, ವಿಶ್ವದ ನಂ.1 ಆಟಗಾರ, 5 ಬಾರಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು 6ನೇ ಸುತ್ತಿನಲ್ಲಿ ಸೋಲಿಸಿ, ಅಗ್ರಸ್ಥಾನವನ್ನು ಕಾಯ್ದುಕೊಂಡರು. ಟೂರ್ನಿಯಲ್ಲಿ ಮುನ್ನಡೆ ಸಾಧಿಸಿರುವ ಗುಕೇಶ್ ಇದುವರೆಗೆ ಸತತ ಐದು ಗೆಲುವು ಪಡೆದಿದ್ದಾರೆ. ಇನ್ನು ಭಾರತದ ಮತ್ತೊಬ್ಬ ಚೆಸ್ ತಾರೆ ಪ್ರಜ್ಞಾನಂದ 5 ಅಂಕಗಳನ್ನು ಪಡೆದು ಏಳನೇಯ ಸ್ಥಾನದಲ್ಲಿದ್ದಾರೆ. ಗುಕೇಶ್ ವಿರುದ್ಧ ಸೋತ ಬಳಿಕ ಕಾರ್ಲ್‌ಸನ್ ತಾವು ಖುಷಿಯಿಂದ ಚೆಸ್ ಆಡುತ್ತಿಲ್ಲ. ಕ್ರೀಡೆಯು ತಮಗೆ ಮೊದಲಿನಂತೆ ಮನಸ್ಸಿಗೆ ಸಂತೋಷ ನೀಡುತ್ತಿಲ್ಲ ಎಂದಿದ್ದಾರೆ.
ಎಎಫ್‌ಸಿ: ಭಾರತಕ್ಕಿಂದು
ಥಾಯ್ಲೆಂಡ್ ಎದುರಾಳಿ
ಚಿಯಾಂಗ್ ಮೈ( ಥಾಯ್ಲೆಂಡ್): ಇಲ್ಲಿ ನಡೆಯುತ್ತಿರುವ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡ ಶನಿವಾರ ಥಾಯ್ಲೆಂಡ್ ಎದುರು ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ. ಭಾರತವು ಇದುವರೆಗೆ ಕ್ವಾಲಿಫೈಯರ್ ಪಂದ್ಯಗಳ ಮೂಲಕ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆಯನ್ನು ಪಡೆದಿಲ್ಲ. ಮಾತ್ರವಲ್ಲದೆ ಇಲ್ಲಿಯ ತನಕ ಥಾಯ್ಲೆಂಡನ್ನು ಮಣಿಸಲು ಸಾಧ್ಯವಾಗಿಲ್ಲ. ಹಾಗಾಗಿ ಭಾರತಕ್ಕೆ ಶನಿವಾರ ಸವಾಲಿನ ಪಂದ್ಯವಾಗಿರಲಿದೆ. ಟೂರ್ನಿಯಲ್ಲಿ ಭಾರತ ಇದುವರೆಗೆ ಮಂಗೋಲಿಯಾ, ಟಿಮೋರ್ ಲೆಸ್ಟೆ, ಇರಾಕ್ ವಿರುದ್ಧ ಗೆಲುವು ಸಾಧಿಸಿದ್ದು, ಥಾಯ್ಲೆಂಡ್ ಅನ್ನು ಸೋಲಿಸಿ ಹೊಸ ದಾಖಲೆ ಬರೆಯುವ ತವಕದಲ್ಲಿದೆ.
ಭಾರತದ ಬಾಂಗ್ಲಾ
ಪ್ರವಾಸ ರದ್ದು ಸಾಧ್ಯತೆ
ನವದೆಹಲಿ: ಆ.17ರಿಂದ 31ರ ವರೆಗೂ ನಿಗದಿಯಾಗಿರುವ ಬಾಂಗ್ಲಾದೇಶ ಪ್ರವಾಸವನ್ನು ಭಾರತ ಕ್ರಿಕೆಟ್ ತಂಡ ಮುಂದೂಡುವುದು ಬಹುತೇಕ ಖಚಿತ ಎನಿಸಿದೆ. ಬಾಂಗ್ಲಾದಲ್ಲಿ ಅಶಾಂತಿ ನೆಲೆಸಿದ್ದು, ಅಲ್ಲಿಗೆ ತೆರಳುವುದು ಸುರಕ್ಷಿತವಲ್ಲ ಎನ್ನುವ ನಿಲುವನ್ನು ಬಿಸಿಸಿಐ ಕೈಗೊಂಡಿದ್ದು, ತಂಡವನ್ನು ಕಳುಹಿಸದೆ ಇರಲು ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 3 ಏಕದಿನ, 3 ಟಿ20 ಪಂದ್ಯಗಳ ಸರಣಿ ನಿಗದಿಯಾಗಿದೆ.
2ನೇ ಟೆಸ್ಟ್: ಆಸೀಸ್ 286,
ವಿಂಡೀಸ್ ದಿಟ್ಟ ಹೋರಾಟ
ಸೇಂಟ್ ಜಾರ್ಜ್ಸ್: ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾ 286 ರನ್‌ಗೆ ಆಲೌಟ್ ಆಯಿತು. 110 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅಲೆಕ್ಸ್ ಕೇರಿ(63) ಹಾಗೂ ವೆಬ್‌ಸ್ಟರ್ (60) ಅರ್ಧಶತಕ ಬಾರಿಸಿ ಆಸರೆಯಾದರು. ಅಲ್ಜಾರಿ ಜೋಸೆಫ್ 4 ವಿಕೆಟ್ ಕಿತ್ತರು. 2ನೇ ದಿನವಾದ ಶುಕ್ರವಾರ ವಿಂಡೀಸ್ ಮೊದಲ ಇನ್ನಿಂಗ್ಸಲ್ಲಿ 28 ಓವರಲ್ಲಿ 3 ವಿಕೆಟ್‌ಗೆ 110 ರನ್ ಗಳಿಸಿತ್ತು.