ಕೋಲ್ಕತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ರಾಜ್ಯಪಾಲ ಆರ್.ಎನ್. ರವಿ ಗುರುವಾರದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ. ಈ ಮೂಲಕ ಇತ್ತೀಚಿನ ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿ ರಾಜ್ಯವು ಸಾಂವಿಧಾನಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುವಂತೆ ಮಾಡಿದ್ದ ಮಮತಾ ಬ್ಯಾನರ್ಜಿಗೆ ಗೇಟ್‌ಪಾಸ್ ನೀಡಿದ್ದಾರೆ.
ಪರಿಣಾಮ ಅತ್ತ ಮುಖ್ಯಮಂತ್ರಿಯೂ ಅಲ್ಲದ, ಅತ್ತ ಶಾಸಕಿಯೂ ಅಲ್ಲದ ಮಮತಾ ಇನ್ನು ಬಿಜೆಪಿ ಸರ್ಕಾರದ ವಿರುದ್ಧ ಬೀದಿಯಿಂದಲೇ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಅಕ್ರಮ, ರಾಜಕೀಯ ಪಿತೂರಿ ಎಂದು ಬಣ್ಣಿಸಿದ್ದ ಮಮತಾ ಬ್ಯಾನರ್ಜಿ ತಾವು ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದ್ದರು. ಅಲ್ಲದೆ ‘ಅಧಿಕಾರವಿಲ್ಲವಾದ್ದರಿಂದ ನಾನೀಗ ಸ್ವತಂತ್ರ ಹಕ್ಕಿ. ಬೀದಿಗಿಳಿದು ಹೋರಾಟ ಮಾಡುತ್ತೇನೆ’ ಎಂದು ಹೇಳಿದ್ದರು. ಹೀಗಾಗಿ ಅವರು ರಾಜೀನಾಮೆ ನೀಡದ ಹೊರತೂ ಅಥವಾ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸದ ಹೊರತೂ ಮೇ 9ರಂದು ನಡೆಯಬೇಕಿರುವ ನೂತನ ಸರ್ಕಾರ ರಚನೆ ಸಾಧ್ಯವಿರಲಿಲ್ಲ. ಹೀಗಾಗಿ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ, ಅವಧಿ ಮುಗಿದ ವಿಧಾನಸಭೆಯನ್ನು ವಿಸರ್ಜಿಸಿ ಮುಂದಿನ ಸಾಂವಿಧಾನಿಕ ಪ್ರಕ್ರಿಯೆಗೆ ಹಾದಿ ಸುಗಮಗೊಳಿಸಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 207 ಸೀಟುಗಳನ್ನು ತನ್ನದಾಗಿಸಿಕೊಂಡಿದ್ದರೆ, ಟಿಎಂಸಿ 80 ಕ್ಷೇತ್ರಗಳಲ್ಲಷ್ಟೇ ಗೆದ್ದಿತ್ತು. ಸತತ 15 ವರ್ಷ ಮುಖ್ಯಮಂತ್ರಿಯಾಗಿದ್ದ ಮಮತಾ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ಸೋಲುಂಡಿದ್ದರು.
ಕೋಲ್ಕತಾ: ಬಂಗಾಳ ಚುನಾವಣೆ ಸೋಲುವ ಜೊತೆಗೆ ಸ್ವತಃ ವಿಧಾನಸಭೆಗೆ ಆಯ್ಕೆಯಾಗುವುದರಿಂದಲೂ ವಂಚಿತರಾಗಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ತಮ್ಮ ಹಿಂದಿನ ವಕೀಲ ವೃತ್ತಿ ಆರಂಭಿಸುವ ಸಾಧ್ಯತೆ ಇದೆ. ಚುನಾವಣಾ ಸೋಲಿನ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಅದರಲ್ಲಿ ವಾದ ಮಂಡಿಸುವ ಮೂಲಕವೇ ಅವರು ವಕೀಲ ವೃತ್ತಿಗೆ ಮರಳುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಪಕ್ಷದ ನೂತನ ಶಾಸಕರ ಸಭೆಯಲ್ಲಿ ಮಮತಾ ತಾವು ವಕೀಲಿಕೆಗೆ ಮರಳುವ ಮಾತುಗಳನ್ನು ಆಡಿದ್ದಾರೆ. ಅಲ್ಲದೆ ಪಕ್ಷದಲ್ಲಿನ ಇತರೆ ಹಲವು ನಾಯಕರಿಗೂ ಮರಳಿ ವಕೀಲಿಕೆ ಪುನಾರಂಭಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ, ಮತಪಟ್ಟಿ ವಿಶೇಷ ಪರಿಷ್ಕರಣೆಯನ್ನು ಪ್ರಶ್ನಿಸಿ ಸ್ವತಃ ಮಮತಾ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು. ಇದು ಭಾರತದಲ್ಲಿ ಸಿಎಂ ಒಬ್ಬರು ಸುಪ್ರೀಂನಲ್ಲಿ ವಾದಿಸಿದ ಮೊದಲ ಘಟನೆಯಾಗಿತ್ತು.