ನ್ಯೂಯಾರ್ಕ್ : ಎಚ್1ಬಿ ವೀಸಾ ಮೇಲೆ 88 ಲಕ್ಷ ರು. ಶುಲ್ಕ ವಿಧಿಸಿದ್ದ ಅಮೆರಿಕದ ಟ್ರಂಪ್ ಸರ್ಕಾರ ಇದೀಗ ಈ ಶುಲ್ಕ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿ ಮಾರ್ಗಸೂಚಿ ಹೊರಡಿಸಿದೆ. ವೀಸಾ ಸ್ಥಿತಿಗತಿ ಬದಲಿಸುವವರು ಹಾಗೂ ವೀಸಾ ವಿಸ್ತರಣೆ ಬಯಸುವವರಿಗೆ ಈ ಶುಲ್ಕ ಅನ್ವಯಿಸಲ್ಲ. 2025ರ ಸೆ.21ರ ನಂತರ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅನ್ವಯವಾಗಲಿದೆ ಎಂದಿದೆ.
ಕುರಿತು ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದರಿಂದ ಎಚ್-1ಬಿ ವೀಸಾದ ಅತಿದೊಡ್ಡ ಫಲಾನುಭವಿಗಳಾದ ಭಾರತೀಯರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ವಲಸಿಗರ ನಿಯಂತ್ರಿಸಲು ಸೆ.19ರಂದು ಟ್ರಂಪ್ ಅವರು ಎಚ್-1ಬಿ ವೀಸಾ ಮೇಲೆ 88 ಲಕ್ಷ ರು. ಹೆಚ್ಚುವರಿ ಶುಲ್ಕ ವಿಧಿಸುವ ಆದೇಶ ಹೊರಡಿಸಿದ್ದರು. ಇದು ಭಾರತೀಯ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
-ಯಾರಿಗೆಲ್ಲ 88 ಲಕ್ಷ ಶುಲ್ಕ ಅನ್ವಯಿಸಲ್ಲ?
- ಈಗಾಗಲೇ ಎಚ್1ಬಿ ವೀಸಾ ಪಡೆದು ಅಮೆರಿಕದಲ್ಲಿರುವವರು
- 2025ರ, ಸೆಪ್ಟೆಂಬರ್ 21ಕ್ಕಿಂತ ಮೊದಲು ವೀಸಾ ಪಡೆದಿರುವವರು
- ಅಮೆರಿಕದಲ್ಲಿದ್ದುಕೊಂಡು ವಿದ್ಯಾರ್ಥಿ ವೀಸಾದಿಂದ ಉದ್ಯೋಗಿ ವೀಸಾಗೆ ಬದಲಾವಣೆ ಮಾಡಿಕೊಳ್ಳುವವರು
- ಈಗಾಗಲೇ ಪಡೆದಿರುವ ಎಚ್1ಬಿ ವೀಸಾ ಅವಧಿ ವಿಸ್ತರಣೆ ಮಾಡಲು ಬಯಸುವವರು
- ಅಮೆರಿಕದಿಂದ ಹೊರ ಹೋಗಿದ್ದರೂ ಅದೇ ಎಚ್1ಬಿ ವೀಸಾದಡಿ ವಾಪಸ್ ಬರುವವರು
ಭಾರತೀಯರಿಗೆ ಹೇಗೆ ಅನುಕೂಲ?ಎಚ್1ಬಿ ವೀಸಾದ ಅತಿದೊಡ್ಡ ಫಲಾನುಭವಿಗಳು ಭಾರತೀಯರೇ ಆಗಿದ್ದಾರೆ. ಅಮೆರಿಕದಿಂದ ವಿತರಿಸಲಾಗುವ ಶೇ.71ರಷ್ಟು ಎಚ್1ಬಿ ವೀಸಾ ಭಾರತೀಯರ ಪಾಲಾಗುತ್ತದೆ. ಎಂಜಿನಿಯರ್‌ಗಳು, ತಂತ್ರಜ್ಞರು ಅಥವಾ ಇತರೆ ವಿಶೇಷ ನೈಪುಣ್ಯ ಹೊಂದಿರುವ ವ್ಯಕ್ತಿಗಳಿಗೆ ಈ ವೀಸಾ ನೀಡಲಾಗುತ್ತದೆ.
ಕಳೆದ ತಿಂಗಳು ಟ್ರಂಪ್ ಸರ್ಕಾರ ಹೊರಡಿಸಿದ್ದ ಎಚ್1ಬಿ ವೀಸಾ ಮೇಲೆ 88 ಲಕ್ಷ ದಷ್ಟು ಶುಲ್ಕ ವಿಧಿಸುವ ಸುಗ್ರೀವಾಜ್ಞೆ ಭಾರತೀಯರಲ್ಲಿ ಭಾರೀ ಆತಂಕ ಮೂಡಿಸಿತ್ತು. ಇದೀಗ ಬಿಡುಗಡೆಯಾಗಿರುವ ಮಾನದಂಡದಿಂದ ಅವರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.