ಗಾಜಾದಲ್ಲಿ ಕದನ ವಿರಾಮ ಒಪ್ಪಂದದ ಭಾಗವಾಗಿ 4 ಇಸ್ರೇಲಿ ಯೋಧರು, 270 ಪ್ಯಾಲೆಸ್ತೀನಿಗಳು ಬಂಧಮುಕ್ತ

KannadaprabhaNewsNetwork | Updated : Jan 26 2025, 04:47 AM IST

ಸಾರಾಂಶ

ಗಾಜಾದಲ್ಲಿ ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಶನಿವಾರ ನಾಲ್ವರು ಮಹಿಳಾ ಇಸ್ರೇಲಿ ಸೈನಿಕರನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಪ್ಯಾಲೇಸ್ತೀನ್‌ನ 270 ಕೈದಿಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ.

ಡೇರ್‌ ಅಲ್‌ ಬಲಾ (ಗಾಜಾ): ಗಾಜಾದಲ್ಲಿ ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಶನಿವಾರ ನಾಲ್ವರು ಮಹಿಳಾ ಇಸ್ರೇಲಿ ಸೈನಿಕರನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಪ್ಯಾಲೇಸ್ತೀನ್‌ನ 270 ಕೈದಿಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದೆ.

ಇಸ್ರೇಲಿ ಸೈನಿಕರಾದ ಕರೀನಾ ಅರಿವ್, ಡೇನಿಯೆಲ್ಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಅವರನ್ನು 477 ದಿನಗಳವರೆಗೆ ಬಂಧಿಸಲಾಯಿತ್ತು. ಅವರನ್ನು ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ಗೆ ಹಮಾಸ್‌ ಹಸ್ತಾಂತರಿಸಿದೆ. ಗಾಜಾ ನಗರದ ಚೌಕದಲ್ಲಿ ಹಮಾಸ್ ಸ್ಥಾಪಿಸಿದ ವೇದಿಕೆಯಲ್ಲಿ ಮಹಿಳೆಯರು ಮಿಲಿಟರಿ ಶೈಲಿಯ ಸಮವಸ್ತ್ರವನ್ನು ಧರಿಸಿದ್ದರು.

ಇದಾದ ಬಳಿಕ ಮೊದಲ ಕಂತಿನಲ್ಲಿ ಇಸ್ರೇಲ್‌ 70 ಪ್ಯಾಲೆಸ್ತೀನಿಗಳನ್ನು ಈಜಿಪ್ಟ್‌ಗೆ ಕಳಿಸಿಕೊಟ್ಟಿತು. ನಂತರ ಇನ್ನೂ 200 ಕೈದಿಗಳನ್ನು ಬಿಡುಗಡೆ ಮಾಡಿತು.

ಕಳೆದ ವಾರ 3 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್‌ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ 90 ಪ್ಯಾಲೆಸ್ತೀನಿಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿತ್ತು.

ಕುಂಭಮೇಳದಲ್ಲಿ ಫೆ.1ರಂದು 73 ದೇಶಗಳ ರಾಯಭಾರಿಗಳ ಸ್ನಾನ

ಪ್ರಯಾಗರಾಜ್‌: ರಷ್ಯಾ, ಉಕ್ರೇನ್‌ ರಾಯಭಾರಿಗಳು ಸೇರಿದಂತೆ 73 ದೇಶಗಳ ರಾಜತಾಂತ್ರಿಕರು ಫೆ.1ರಂದು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಮೇಳ ಅಧಿಕಾರಿ ವಜಯ್‌ ಕಿರಣ್‌ ಆನಂದ್‌ ಧೃಡಪಡಿಸಿದ್ದಾರೆ.

ಈ ಕುರಿತು ವಿದೇಶಾಂಗ ಸಚಿವಾಲಯ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ‘ಜಪಾನ್‌, ಅಮೆರಿಕ, ರಷ್ಯಾ, ಉಕ್ರೇನ್‌, ಜರ್ಮನಿ, ನೆಥರ್ಲೆಂಡ್‌, ಕ್ಯಾಮರೂನ್‌, ಕೆನಡಾ, ಸ್ವಿಟ್ಜರ್ಲೆಂಡ್‌, ಸ್ವೀಡನ್‌, ಪೋಲೆಂಡ್‌ ಹಾಗೂ ಬೊಲಿವಿಯಾದ ರಾಜತಾಂತ್ರಿಕರು ಮಹಾ ಕುಂಭಕ್ಕೆ ಆಗಮಿಸಲಿದ್ದಾರೆ. ಇವರೆಲ್ಲಾ ದೋಣಿಯಲ್ಲಿ ಸಂಗಮಕ್ಕೆ ತೆರಳಿ ಪವಿತ್ರ ಸ್ನಾನ ಮಾಡಲಿದ್ದರೆ. 

ಬಳಿಕ ಅಕ್ಷಯವತ್ ಮತ್ತು ಬಡೆ ಹನುಮಾನ್‌ ಮಂದಿರಕ್ಕೆ ಭೇಟಿ ನೀಡಿ, ಡಿಜಿಟಲ್‌ ಮಹಾಕುಂಭ ಅನುಭವ ಕೇಂದ್ರದಲ್ಲಿ ಕುಂಭದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ’ ಎಂದು ತಿಳಿಸಲಾಗಿದೆ.

ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಗಢ: 2 ಕಾರು ಭಸ್ಮ

ಮಹಾಕುಂಭ ನಗರ (ಉ.ಪ್ರ.): ಇಲ್ಲಿ ನಡೆಯುತ್ತಿರುವ ಮಹಾಕುಂಭ ಉತ್ಸದಲ್ಲಿ ಶನಿವಾರ ಬೆಳಿಗ್ಗೆ ಮತ್ತೆ ಅಗ್ನಿ ಅವಗಢ ಸಂಭವಿಸಿದೆ. ಕಾರುಗಳು ಬೆಂಕಿ ಕೆನ್ನಾಲಿಗೆಗೆ ತುತ್ತಾಗಿವೆ. ಆದರೆ ಯಾವುದೇ ಪ್ರಾಣಹಾನಿ ಆಗಿಲ್ಲ.ವಾರಾಣಸಿಯಿಂದ ಕುಂಭ ಮೇಳಕ್ಕೆ ಬಂದಿದ್ದ ಕಾರ್‌ಗೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿದೆ. ಇದು ಪಕ್ಕದಲ್ಲಿದ್ದ ಕಾರಿಗೂ ವ್ಯಾಪಿಸಿದೆ. ಇದರಿಂದ ಎರಡೂ ಕಾರುಗಳು ಬೆಂಕಿಯಿಂದ ಸುಟ್ಟು ಹೋಗಿವೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಕಾರಿನ ಒಳಗಿದ್ದವರನ್ನು ರಕ್ಷಿಸಿದ್ದಾರೆ. ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮಹಾಕುಂಭದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್‌ ಶರ್ಮಾ ಹೇಳಿದ್ದಾರೆ.

ಜು.19ಕ್ಕೆ ಮಹಾಕುಂಭದ ಸೆಕ್ಷರ್‌ 19ರಲ್ಲಿ ಅಗ್ನಿ ದುರಂತ ಸಂಭವಿಸಿ ಅಲ್ಲಿನ ಸುಮಾರು 100 ಶಿಬಿರಗಳು ಭಸ್ಮವಾಗಿದ್ದವು. ಮರುದಿನ ಕಿನ್ನರ ಅಖಾಡದಲ್ಲಿ ಬೆಂಕಿಯಾಗಿತ್ತು.

ಪುಣೆ: ನರ ಸಂಬಂಧಿ ಜಿಬಿಎಸ್‌ಯಿಂದ 73 ಮಂದಿ ಅಸ್ವಸ್ಥ

ಪುಣೆ: ನರ ಸಂಬಂಧಿ ಕಾಯಿಲೆಯಾದ ಗುಯಿಲಿನ್ ಬಾರ್ರೆ ಸಿಂಡ್ರೋಂ ಪ್ರಕರಣಗಳು ಪುಣೆಯಲ್ಲಿ ಇದ್ದಕ್ಕಿದ್ದಂತೆ ಹೆಚ್ಚುತ್ತಿದ್ದು, ಕಳೆದ ಕೆಲವು ದಿನಗಳಲ್ಲಿ 73 ಅಸ್ವಸ್ಥರಾಗಿದ್ದಾರೆ.

73 ಸೋಂಕಿತರ ಪೈಕಿ 47 ಜನ ಪುರುಷರು, 26 ಜನ ಮಹಿಳೆಯರಿದ್ದು, 14 ಮಂದಿಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಆದರೆ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ದಿಢೀರ್‌ ಸೋಂಕು ಹೆಚ್ಚಳಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ತುರ್ತು ಪ್ರತಿಕ್ರಿಯೆ ತಂಡವನ್ನೂ ರಚಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದು, ಸೋಂಕಿನ ಲಕ್ಷಣ ಇರುವವರನ್ನು ಪತ್ತೆ ಹಚ್ಚುವ ಹಾಗೂ ಆ ಬಗ್ಗೆ ಜಾಗತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. 2 ದಿನದಲ್ಲಿ 7 ಸಾವಿರಕ್ಕೂ ಅಧಿಕ ಮನೆಗಳ ಸಮೀಕ್ಷೆ ನಡೆದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಣ್ಗಾವಲು ಘಟಕದ ವೈದ್ಯರ ತಂಡವೂ ಪುಣೆಗೆ ಆಗಮಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಂಗ್ರಹಿಸಿಡಲಾಗುತ್ತದೆ.

ಜಿಬಿಎಸ್‌ ಸೋಂಕು ಎಂದರೇನು?:

ಈ ಸಿಂಡ್ರೋಂ ಅನ್ನು ಫ್ರೆಂಚ್‌ ನರತಜ್ಞರಾದ ಗುಯಿಲಿನ್ ಹಾಗೂ ಜೀನ್‌ ಬಾರ್ರೆ ಕಂಡುಹಿಡಿದಿದ್ದು, ಕಾಯಿಲೆಗೆ ಅವರ ಹೆಸರನ್ನೇ (ಗುಯಿಲಿನ್ ಬಾರ್ರೆ ಸಿಂಡ್ರೋಂ- ಜಿಬಿಎಸ್) ಇಡಲಾಗಿದೆ.ಇದೊಂದು ಅಪರೂಪದ ನರ ಸಂಬಂಧಿತ ಸಮಸ್ಯೆಯಾಗಿದ್ದು, ದೇಹದ ಬಾಹ್ಯ ನರಮಂಡಲದ ಮೇಲೆ ರೋಗನಿರೋಧಕ ಶಕ್ತಿ ದಾಳಿ ಮಾಡಿದಾಗ ಸಂಭವಿಸುತ್ತದೆ. ಈ ಸಿಂಡ್ರೋಂ ಸ್ನಾಯು ಚಲನೆಯನ್ನು ನಿಯಂತ್ರಿಸುವ ಹಾಗೂ ನೋವನ್ನು ಗ್ರಹಿಸುವ ನರಗಳ ಮೇಲೆ ದಾಳಿ ಮಾಡುವ ಪರಿಣಾಮ ಕೈ ಕಾಲುಗಳು ಸ್ಪರ್ಶಜ್ಞಾನ ಕಳೆದುಕೊಳ್ಳುತ್ತವೆ. ಉಸಿರಾಟ ಹಾಗೂ ನುಂಗುವುದು ಕಷ್ಟವಾಗುತ್ತದೆ. ಕಾಯಿಲೆಗೆ ನಿಖರ ಕಾರಣ ತಿಳಿದಿಲ್ಲವಾದರೂ ಸೋಂಕು ಅಥವಾ ಶಸ್ತ್ರಚಿಕಿತ್ಸೆ ಆದಾಗ, ಲಸಿಕೆ ಪಡೆದಾಗ ರೋಗನಿರೋಧಕ ಶಕ್ತಿ ಅಗತ್ಯಕ್ಕಿಂತ ಚುರುಕಾಗಿ ಸಮಸ್ಯೆ ಉದ್ಭವಿಸುತ್ತದೆ.

Share this article