ನವದೆಹಲಿ : ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟೀಕರಣ ನೀಡಿದ್ದು, ‘ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ವ್ಯಾಪಕ ಅಧ್ಯಯನಗಳು ಕೊರೊನಾ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ದೃಢೀಕರಿಸಿವೆ. ಇಂಥ ಹೇಳಿಕೆಗಳು ಸುಳ್ಳು ಮತ್ತು ದಾರಿತಪ್ಪಿಸುವಂಥವಾಗಿವೆ. ಸರ್ಕಾರ ತನ್ನ ನಾಗರಿಕ ಆರೋಗ್ಯ ರಕ್ಷಣೆಗೆ ಸದಾಕಾಲ ಬದ್ಧವಾಗಿದೆ’ ಎಂದು ತಿಳಿಸಿದೆ.
ಮಂಗಳವಾರ ಮಾತನಾಡಿದ್ದ ಸಿದ್ದರಾಮಯ್ಯ, ‘ಕೋವಿಡ್ ಲಸಿಕೆಯನ್ನು ಆತುರದಿಂದ ಅನುಮೋದಿಸಿ ಸಾರ್ವಜನಿಕರಿಗೆ ವಿತರಿಸಿದ್ದು ಈ ಸಾವುಗಳಿಗೆ ಕಾರಣವಾಗಿರಬಹುದು. ಎದೆನೋವು, ಉಸಿರಾಟದ ತೊಂದರೆ ಮೊದಲಾದ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಮಾಡದೇ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ’ ಎಂದಿದ್ದರು.
ಅವರ ಈ ಹೇಳಿಕೆಯನ್ನು ಅಲ್ಲಗಳೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ‘ದೇಶದ ಹಲವಾರು ಏಜೆನ್ಸಿಗಳ ಮೂಲಕ ಹಠಾತ್ ಸಾವಿನ ವಿಷಯವನ್ನು ತನಿಖೆ ಮಾಡಲಾಗಿದೆ. ಈ ಅಧ್ಯಯನಗಳು ಕೋವಿಡ್ ಲಸಿಕೆಗೂ ದಿಢೀರ್ ಸಾವುಗಳಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ದೃಢಪಡಿಸಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ಅಧ್ಯಯನಗಳು ಭಾರತದಲ್ಲಿ ಕೋವಿಡ್ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸ್ಪಷ್ಟಪಡಿಸಿವೆ. ಜೊತೆಗೆ ಇದರ ಅಡ್ಡಪರಿಣಾಮಗಳು ಸಹ ತೀರಾ ಅಪರೂಪದಲ್ಲಿ ಕಂಡುಬಂದಿವೆ. ಈ ಸಾವುಗಳಿಗೆ ಅನುವಂಶೀಯತೆ, ಜೀವನಶೈಲಿ, ಮೊದಲೇ ಇದ್ದ ಮತ್ತು ಕೋವಿಡ್ ನಂತರದ ಅನಾರೋಗ್ಯ ಸೇರಿ ಹಲವು ಕಾರಣಗಳಿರಬಹುದು’ ಎಂದಿದೆ.
ಅಲ್ಲದೆ, ‘ಹಠಾತ್ ಸಾವುಗಳಿಗೆ ಕೋವಿಡ್ ಲಸಿಕೆಯನ್ನು ಲಿಂಕ್ ಮಾಡುವ ಹೇಳಿಕೆಗಳು ಸುಳ್ಳು ಮತ್ತು ದಾರಿತಪ್ಪಿಸುವಂಥವಾಗಿವೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ ಎಂದು ವೈದ್ಯಕೀಯ ತಜ್ಞರೇ ತಿಳಿಸಿದ್ದಾರೆ. ಸರ್ಕಾರ ತನ್ನ ನಾಗರಿಕರ ಆರೋಗ್ಯವನ್ನು ರಕ್ಷಿಸಲು ಆಧಾರಪೂರ್ವಕ ಸಾರ್ವಜನಿಕ ಆರೋಗ್ಯ ಸಂಶೋಧನೆಗೆ ಬದ್ಧವಾಗಿದೆ’ ಎಂದು ಅದು ತಿಳಿಸಿದೆ.