;Resize=(412,232))
ಅಮರಾವತಿ/ಚೆನ್ನೈ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಅ.26ರ ವೇಳೆಗೆ ಚಂಡಮಾರುತ ಏಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಇದರ ಪರಿಣಾಮವಾಗಿ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪೂರ್ವ-ಮಧ್ಯ ಮತ್ತು ದಕ್ಷಿಣ-ಪೂರ್ವ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಚಂಡಮಾರುತದ ಪ್ರಭಾವದಿಂದಾಗಿ ಶುಕ್ರವಾರ ಬೆಳಿಗ್ಗೆ 5.30ಕ್ಕೆ ವಾಯುಭಾರ ಕುಸಿತ ಉಂಟಾಗಿದ್ದು, ಶನಿವಾರ ಮತ್ತು ಭಾನುವಾರ ಇದು ತೀವ್ರವಾಗುತ್ತಾ ಹೋಗಲಿದೆ. ಅ.26ರ ಬೆಳಿಗ್ಗೆ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಐಎಂಡಿ ತಿಳಿಸಿದೆ.
ತಮಿಳುನಾಡಿನ ಮದುರೈ, ವಿರುದುನಗರ, ದಿಂಡಿಗಲ್, ಈರೋಡ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿರುದುನಗರ ಜಿಲ್ಲೆಯ ಸಾತ್ತೂರಿನಲ್ಲಿ ಮನೆಯ ಗೋಡೆ ಕುಸಿದು 12ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಆಕೆಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ವಿಜಯನಗರಂ, ಮನ್ಯಂ, ಅಲ್ಲೂರಿ, ಕಡಪ, ಅನ್ನಮಯ್ಯ, ಚಿತ್ತೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ತಿರುಪತಿ ಜಿಲ್ಲೆಯ ಅಲಿವೇಲುಮಂಗಾಪುರಂನಲ್ಲಿ 87.5 ಮಿ.ಮೀ ಹಾಗೂ ಓಬುಲವಾರಿಪಲ್ಲೆಯಲ್ಲಿ 50.4 ಮಿ.ಮೀ ಮಳೆ ದಾಖಲಾಗಿದೆ.
ಪುದುಚೇರಿ ಜಲಾವೃತ:
ಪುದುಚೇರಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಪುದುಚೇರಿಯಲ್ಲಿ 9.6 ಸೆಂ.ಮೀ ಮತ್ತು ಕಾರೈಕಲ್‌ನಲ್ಲಿ 4 ಸೆಂ.ಮೀ ಮಳೆ ದಾಖಲಾಗಿದೆ.