;Resize=(412,232))
ತಿರುವನಂತಪುರ: ಮಲಯಾಳಂ ಚಿತ್ರೋದ್ಯಮದಲ್ಲಿ ನಡೆದಿದೆ ಎನ್ನಲಾದ ಸೆಕ್ಸ್ ಹಗರಣ ಇದೀಗ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದೆ. ಇದುವರೆಗೆ ಮಹಿಳೆಯರು ಮಾತ್ರವೇ ತಮಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಆರೋಪ ಮಾಡಿದ್ದರೆ, ಮೊದಲ ಬಾರಿಗೆ ಕಲ್ಲಿಕೋಟೆ ಮೂಲದ ನಟನೊಬ್ಬ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ರಂಜಿತ್ ವಿರುದ್ಧ ಸಲಿಂಗಕಾಮದ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ಕುರಿತು ಪ್ರಕರಣ ಕೂಡಾ ದಾಖಲಿಸಿದ್ದಾರೆ.
ಗುರುವಾರ ದೂರು ನೀಡಿರುವ ಹೆಸರು ಬಹಿರಂಗಪಡಿಸದ ವ್ಯಕ್ತಿ, ‘2012ರಲ್ಲಿ ಮಮ್ಮುಟ್ಟಿ ನಟನೆಯ ಚಿತ್ರವೊಂದರ ಶೂಟಿಂಗ್ ವೇಳೆ ನಾನು ರಂಜಿತ್ ಅವರನ್ನು ಭೇಟಿ ಮಾಡಿ ನಟನೆಯ ಆಸೆ ವ್ಯಕ್ತಪಡಿಸಿದ್ದೆ. ಆಗ ಅವರು ನನಗೆ ಅವರ ನಂಬರ್ ನೀಡಿದ್ದರು. ಬಳಿಕ ಅದಕ್ಕೆ ಕರೆ ಮಾಡಿದಾಗ ಬೆಂಗಳೂರಿಗೆ ಬರಲು ತಿಳಿಸಿದ್ದರು. ಅವರ ಸೂಚನೆಯಂತೆ ಬೆಂಗಳೂರಿನ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ರಂಜಿತ್ ಅವರನ್ನು ಭೇಟಿಯಾಗಿದ್ದೆ. ಅಲ್ಲಿ ಕುಡಿದ ಮತ್ತಿನಲ್ಲಿದ್ದ ಅವರು ನೀನು ಹೇಗೆ ಕಾಣುತ್ತೀಯ ನೋಡಬೇಕು ಎಂದು ಹೇಳಿ ನನ್ನ ಬಟ್ಟೆ ಬಿಚ್ಚಿಸಿದ್ದರು’ ಎಂದಿದ್ದಾರೆ.
‘ಬಳಿಕ ಕಣ್ಣಿಗೆ ಐಬ್ರೋ ಮಾಡಿಸಿಕೋ ಎಂದು ಸಲಹೆ ನೀಡಿದರು. ಅದೇ ಸ್ಥಿತಿಯಲ್ಲಿ ನನ್ನ ಫೋಟೋ ತೆಗೆದರು. ಫೋಟೋ ತೆಗೆಯುವ ವೇಳೆಯೇ ಅವರು ನಟಿ ರೇವತಿ ಅವರೊಂದಿಗೆ ಮಾತನಾಡುತ್ತಿದ್ದರು. ಬಳಿಕ ಫೋಟೋ ರೇವತಿಗೆ ಕಳುಹಿಸಿಕೊಟ್ಟರು. ಬಳಿಕ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು’ ಎಂದು ಗಂಭೀರ ಆರೋಪ ಮಾಡಿದ್ದಾರೆ.