ಗಡಿಯಲ್ಲಿ ಹೈಟೆನ್ಷನ್‌ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ

KannadaprabhaNewsNetwork |  
Published : May 02, 2025, 01:31 AM ISTUpdated : May 02, 2025, 04:11 AM IST
ಗಡಿ | Kannada Prabha

ಸಾರಾಂಶ

26 ಅಮಾಯಕರ ಬಲಿಪಡೆದ ಪಹಲ್ಗಾಂ ನರಮೇಧದ ಬಳಿಕದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ಎರಡೂ ಪರಮಾಣು ಶಕ್ತಿ ಉಳ್ಳ ದೇಶಗಳ ನಡುವೆ ಯುದ್ಧೋನ್ಮಾದ ತೀವ್ರಗೊಂಡಿದೆ.

ನವದೆಹಲಿ/ ಇಸ್ಲಾಮಾಬಾದ್‌: 26 ಅಮಾಯಕರ ಬಲಿಪಡೆದ ಪಹಲ್ಗಾಂ ನರಮೇಧದ ಬಳಿಕದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ಎರಡೂ ಪರಮಾಣು ಶಕ್ತಿ ಉಳ್ಳ ದೇಶಗಳ ನಡುವೆ ಯುದ್ಧೋನ್ಮಾದ ತೀವ್ರಗೊಂಡಿದೆ. ಗುರುವಾರ ಭಾರತೀಯ ನೌಕಾಪಡೆ ಪಾಕಿಸ್ತಾನದ ಜಲಗಡಿ ಸಮೀಪವೇ ಸಮರಾಭ್ಯಾಸ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮತ್ತೊಂದೆಡೆ ಭಾರತ ದಾಳಿ ನಡೆಸುವ ಭೀತಿ ಇರುವ ಕಾರಣ ಪಾಕಿಸ್ತಾನ ತನ್ನ ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ನಿಯೋಜನೆ ಮಾಡಿದೆ.

ಇದರ ಜೊತೆಗೆ ಭಾರತದ ವಾಯುದಾಳಿ ಸಾಧ್ಯತೆಗೆ ಬೆಚ್ಚಿರುವ ಪಾಕಿಸ್ತಾನವು, ರಾಜಧಾನಿ ಇಸ್ಲಾಮಾಬಾದ್‌, ವಾಣಿಜ್ಯ ರಾಜಧಾನಿ ಕರಾಚಿ ಸೇರಿದಂತೆ ಕೆಲ ನಗರಗಳಲ್ಲಿನ ವಾಯುಸೀಮೆಯನ್ನು ನಿತ್ಯ 4 ಗಂಟೆ ಕಾಲ ಸಂಚಾರ ನಿಷೇಧ ವಲಯವನ್ನಾಗಿ ಘೋಷಿಸಿದೆ.

ಗಡಿಗೆ ಸನಿಹದ ಸಮುದ್ರದಲ್ಲಿ ತಾಲೀಮು:

ಭಾರತೀಯ ನೌಕಾಪಡೆ ಅರಬ್ಬೀ ಸಮುದ್ರದ ವಿಶೇಷ ಆರ್ಥಿಕ ವಲಯದಲ್ಲಿ ತನ್ನ ಸಮರಾಭ್ಯಾಸ ತೀವ್ರಗೊಳಿಸಿದೆ. ಪಾಕಿಸ್ತಾನದ ಜಲಗಡಿಯಿಂದ ಕೇವಲ 80 ನಾಟಿಕಲ್‌ ಮೈಲು ದೂರದಲ್ಲೇ ನೌಕಾಪಡೆ ನಡೆಸುತ್ತಿರುವ ಸೇನಾ ಕಸರತ್ತಿನಲ್ಲಿ ಆ್ಯಂಟಿ ಶಿಪ್‌ ಮತ್ತು ಆ್ಯಂಟಿ ಏರ್‌ಕ್ರಾಫ್ಟ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದಲ್ಲದೆ ಗುಜರಾತ್‌ ಕರಾವಳಿಯ ಮುಂಚೂಣಿ ಪ್ರದೇಶದಲ್ಲಿ ಭಾರತದ ಕರಾವಳಿ ಕಾವಲು ಪಡೆ ನೌಕೆ ನಿಯೋಜಿಸಲಾಗಿದೆ. ನೌಕಾಪಡೆ ಜತೆಗೆ ಸೇರಿಕೊಂಡು ಸಮುದ್ರ ಮಾರ್ಗದ ಮೇಲೆ ಕಣ್ಗಾವಲು ಇಡಲಾಗುತ್ತಿದೆ.

ಪಾಕ್‌ನಿಂದ ಸೇನೆ ನಿಯೋಜನೆ:

ಈ ನಡುವೆ ಭಾರತದಿಂದ ದಾಳಿ ಭೀತಿ ಹೆಚ್ಚಾದ ಬೆನ್ನಲ್ಲೇ ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಯೋಧರು, ಶಸ್ತ್ರಾಸ್ತ್ರ, ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದೆ. ಈ ಶಸ್ತ್ರಾಸ್ತ್ರಗಳ ಪೈಕಿ ಚೀನಿ ನಿರ್ಮಿತ ಯುದ್ಧೋಪಕರಣಗಳು ಕೂಡಾ ಇವೆ ಎನ್ನಲಾಗಿದೆ. ಜಮ್ಮು-ಕಾಶ್ಮೀರ ಗಡಿ ಮಾತ್ರವಲ್ಲದೇ ರಾಜಸ್ಥಾನದ ಗಡಿ ಭಾಗಗಳಲ್ಲಿಯೂ ಪಾಕ್‌ ಸೇನೆ ನಿಯೋಜಿಸಿದೆ. ರಾಜಸ್ಥಾನದ ಬಾರ್ನೇರ್‌ನಲ್ಲಿನ ಲಾಂಗೇವಾಲಾದಲ್ಲಿ ಭಾರತದ ವಾಯು ಪ್ರದೇಶದ ಮೇಲೆ ನಿಗಾಕ್ಕೆ ರಾಡಾರ್‌ ಕಣ್ಗಾವಲಿರಿಸಿದ್ದು, ವಾಯುರಕ್ಷಣಾ ವ್ಯವಸ್ಥೆ ನಿಯೋಜಿಸಲಾಗಿದೆ ಎನ್ನಲಾಗಿದೆ.

ಪಾಕ್‌ನ 3 ಸಮರಾಭ್ಯಾಸ:

ಮತ್ತೊಂದೆಡೆ ಪಾಕಿಸ್ತಾನ ಸೇನೆಯ ಫಿಜಾ ಎ- ಭದ್ರ್‌, ಲಾಲ್ಕರ್‌ ಎ-ಮೊಮಿನ್‌ ಮತ್ತು ಜರ್ಬ್‌ ಎ- ಹೈದರಿ ಎಂಬ ಹೆಸರಿನಲ್ಲಿ ಸಮರಾಭ್ಯಾಸ ನಡೆಸುತ್ತಿದೆ ಎನ್ನಲಾಗಿದ್ದು, ಇದರಲ್ಲಿ ಎಫ್‌-16, ಜೆ-10 ಮತ್ತು ಜೆಎಫ್‌-17 ಎಂಬ ಯುದ್ಧ ವಿಮಾನ ಬಳಸಲಾಗಿದೆ. ಜೊತೆಗೆ ಸೈನಿಕರ ಕೊರತೆಯಾಗದಿರಲು ಪಾಕಿಸ್ತಾನ ಸೇನೆಯ ಸ್ಟ್ರೈಕ್‌ ಕಾರ್ಪ್‌ಗಳಿಗೂ ಯುದ್ಧಕಾಲದ ಶಸ್ತ್ರಾಭ್ಯಾಸ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಾಯುಸೀಮೆ ಬಂದ್‌:

ಈ ನಡುವೆ ಭದ್ರತಾ ಕಾರಣದಿಂದಾಗಿ ಕರಾಚಿ ಮತ್ತು ಲಾಹೋರ್‌ ವಾಯುಸೀಮೆಯ ನಿರ್ದಿಷ್ಟ ಭಾಗಗಳನ್ನು ಮೇ ತಿಂಗಳಿನಲ್ಲಿ ಪ್ರತಿನಿತ್ಯ 4 ಗಂಟೆಗಳ ಕಾಲ ಬಂದ್‌ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ‘ಮೇ 1 ರಿಂದ 31ರವರೆಗೆ ಮುಂಜಾನೆ 4 ರಿಂದ 8 ಗಂಟೆಯ ತನಕ ನಿರ್ಬಂಧಿತ ವಾಯುಪ್ರದೇಶವನ್ನು ಮುಚ್ಚಲಾಗುತ್ತದೆ’ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಿರ್ಬಂಧಿತ ಸಮಯದಲ್ಲಿ ವಿಮಾನಗಳನ್ನು ಪರ್ಯಾಯ ಹಾರಾಟ ಮೂಲಕ ತಿರುಗಿಸಲಾಗುತ್ತದೆ. ವಿಮಾನ ಕಾರ್ಯಾಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚುನಾವಣೆ ಸೋಲಿನ ಬಳಿಕ ಸಿಪಿಎಂಗೆ ಅಯ್ಯಪ್ಪನ ಭಕ್ತಿ!
1500 ಜನರ ಊರಿನಲ್ಲಿ ಮೂರೇತಿಂಗ್ಳಲ್ಲಿ 27000 ಮಕ್ಕಳ ಜನನ!