ಮುಂಬೈ: ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ ವಿವಾದದ ನಡುವೆಯೇ ‘ ಹಿಂದಿ ಭಾಷೆ ಪಠ್ಯದ ಭಾಗವಾಗಬೇಕು’ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಹೇಳಿಕೆ ನೀಡಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಮಹಾರಾಷ್ಟ್ರ ಸರ್ಕಾರ ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಸುವ ನಿರ್ಧಾರವನ್ನು ಇತ್ತೀಚೆಗೆ ಹಿಂತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಸಿಎಂ ಪತ್ನಿ, ‘ಮರಾಠಿ ರಾಜ್ಯದ ನಂ.1 ಭಾಷೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇತರ ಭಾಗದ ಜನರ ಜೊತೆ ಸಂಪರ್ಕಿಸಲು ಹಿಂದಿ ಪಠ್ಯಗಳಲ್ಲಿ ಸೇರ್ಪಡೆಯಾಗಬೇಕು’ ಎಂದಿದ್ದಾರೆ.
ಟೆಕ್ ದೈತ್ಯ ಮೈಕ್ರೋಸಾಫ್ಟ್‌ನಿಂದ 9100 ನೌಕರರ ವಜಾ ಸಾಧ್ಯತೆ
ವಾಷಿಂಗ್ಟನ್: 2023ರ ನಂತರದ ಅತಿದೊಡ್ಡ ಸುತ್ತಿನ ಉದ್ಯೋಗ ಕಡಿತದಲ್ಲಿ ಮೈಕ್ರೋಸಾಫ್ಟ್ ತನ್ನ ಶೇ.4ರಷ್ಟು ಅಥವಾ ಸರಿಸುಮಾರು 9,100 ಜನರನ್ನು ವಜಾಗೊಳಿಸುತ್ತಿದೆ ಎಂದು ಸಿಯಾಟಲ್ ಟೈಮ್ಸ್ ಬುಧವಾರ ವರದಿ ಮಾಡಿದೆ.ಜೂನ್ 2024 ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಕಂಪನಿ ಹೊಂದಿತ್ತು. ಇದೀಗ ಆರ್ಥಿಕ ಮಂದಗತಿ ಕಾರಣ ತನ್ನ ಸಾವಿರಾರು ಉದ್ಯೋಗಗಳನ್ನು, ಕಡಿತಗೊಳಿಸಲು ಯೋಜಿಸುತ್ತಿದೆ ಎಂದು ವರದಿ ಹೇಳಿದೆ. ಮೈಕ್ರೋಸಾಫ್ಟ್ ಮೇ ತಿಂಗಳಲ್ಲಿ ಕೂಡ ಸುಮಾರು 6,000 ಉದ್ಯೋಗಿಗಳನ್ನು ವಜಾ ಮಾಡಿತ್ತು.
ತಿರುಪತಿ ಹುಂಡಿಗೆ ಒಂದೇ ದಿನ ₹5.3 ಕೋಟಿ ರು. ಕಾಣಿಕೆ: ದಾಖಲೆ
ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸೋಮವಾರ ಒಂದೇ ದಿನ ಭಕ್ತರಿಂದ ದಿನ 5.3 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ. ಇದು ಕಳೆದೊಂದು ವರ್ಷದಲ್ಲಿ ದಿನದಲ್ಲಿ ಸಂಗ್ರಹವಾದ ಅತ್ಯಧಿಕ ಮೊತ್ತವಾಗಿದೆ.ತಿರುಮಲಕ್ಕೆ ಸೋಮವಾರ ಒಂದೇ ದಿನ 78,730 ಭಕ್ತರು ಭೇಟಿ ನೀಡಿದ್ದರು. ಇದು ಹಬ್ಬ, ರಜಾ ದಿನಗಳಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಗಿಂತ ಕಡಿಮೆ. ಹೀಗಿದ್ದರೂ ಕೂಡ ಒಂದೇ ದಿನ 5.3 ಕೋಟಿ ರು. ಕಾಣಿಕೆ ಸಂಗ್ರಹವಾಗಿದೆ. 2023ರ ಜ. 2 ರಂದು ದೇಗುಲದಲ್ಲಿ ಒಂದೇ ದಿನ ಬರೋಬ್ಬರಿ 7.68 ಕೋಟಿ ರು. ಸಂಗ್ರಹವಾಗಿ ದಾಖಲೆ ಬರೆದಿತ್ತು. ಹಲವು ಸಲ ತಿರುಪತಿಯಲ್ಲಿ ಒಂದು ದಿನಕ್ಕೆ 6 ಕೋಟಿಗಿಂತಲೂ ಅಧಿಕ ಕಾಣಿಕೆ ಸಂಗ್ರಹವಾದ ನಿದರ್ಶನಗಳಿವೆ.
ಮಹಾರಾಷ್ಟ್ರ ಕಾಲೇಜಲ್ಲಿ ಹಿಜಾಬ್ ನಿಷೇಧ ವಿವಾದ
ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ ಎಂದು ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ಹಾಕಲಾಗಿದೆ. ಹೀಗಾಗಿ ಮೇಲೆ 6 ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ.ಸೋಮವಾರ ಮಧ್ಯಾಹ್ನ 1.45ಕ್ಕೆ ಪರೀಕ್ಷೆ ನಡೆಯುತ್ತಿದ್ದ ವೇಳೆ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿಗೆ ನುಗ್ಗಿದ 6 ಜನರ ಗುಂಪು ‘ನಮ್ಮ ಹುಡುಗಿಯರಿಗೆ ಹಿಜಾಬ್ ಹಾಕಲು ಏಕೆ ಅವಕಾಶ ನೀಡುತ್ತಿಲ್ಲ?’ ಎಂದು ಪ್ರಾಂಶುಪಾಲ ಅಭಿಜಿತ್ ವಾಡೇಕರ್‌ಗೆ ನಿಂದಿಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿತ್ತು.ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವಾಡೇಕರ್, ‘ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಅನುಮತಿ ನೀಡಿದ್ದೇವೆ. ಆದರೆ ಪರೀಕ್ಷೆ ಬರೆಯುವ ವೇಳೆ ಮಾತ್ರ ನಿರ್ಬಂಧಿಸಲಾಗಿತ್ತು’ ಎಂದಿದ್ದಾರೆ.
ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಟ್ರಂಪ್
ವಾಷಿಂಗ್ಟನ್: 2 ವರ್ಷಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಸಮ್ಮತಿಸಿದ್ದು, ಹಮಾಸ್ ಕೂಡ ಒಪ್ಪಿಗೆ ಸೂಚಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಇದಕ್ಕೆ ಹಮಾಸ್ ಕೂಡ ಪ್ರತಿಕ್ರಿಯಿಸಿದ್ದು. ‘ನಾವು ಕದನ ವಿರಾಮಕ್ಕೆ ಒಪ್ಪುತ್ತೇವೆ. ಆದರೆ ಇಸ್ರೇಲ್ ಗಾಜಾದಲ್ಲಿ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು’ ಎಂದು ಷರತ್ತು ವಿಧಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ಸೋಮವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನ ಈ ವಿದ್ಯಮಾನ ನಡೆದಿದೆ.ಮಂಗಳವಾರವಷ್ಟೇ ಡೊನಾಲ್ಟ್ ಟ್ರಂಪ್ ‘ಇಸ್ರೇಲ್ ಜೊತೆಗಿನ ಮಾತುಕತೆಯ ಬಳಿಕ ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿ ಕೊಂಡಿದೆ. ಹಮಾಸ್ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಎರಡೂ ರಾಷ್ಟ್ರಗಳ ನಡುವಿನ ಯುದ್ಧ ಕೊನೆಗಾಣಿಸಲು ಕೆಲಸ ಮಾಡುತ್ತೇವೆ’ ಎಂದಿದ್ದರು