ಲೋಕಸಭೆ ಸ್ಪೀಕರ್‌ ಹುದ್ದೆಗೆ ಬಿರ್ಲಾ ಅವಿರೋಧ ಆಯ್ಕೆ

KannadaprabhaNewsNetwork |  
Published : Jun 27, 2024, 01:10 AM ISTUpdated : Jun 27, 2024, 04:47 AM IST
ಸ್ವೀಕರ್‌ ಓಂ ಬಿರ್ಲಾ | Kannada Prabha

ಸಾರಾಂಶ

ಲೋಕಸಭೆ ಸಭಾಧ್ಯಕ್ಷ ಸ್ಥಾನಕ್ಕೆ 46 ವರ್ಷ ಬಳಿಕ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕೊನೇ ಕ್ಷಣದ ಅನಿರೀಕ್ಷಿತ ತಿರುವುಗಳ ಪರಿಣಾಮ ಎನ್‌ಡಿಎ ನಾಮನಿರ್ದೇಶಿತ ಅಭ್ಯರ್ಥಿ ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.

  ನವದೆಹಲಿ : ಲೋಕಸಭೆ ಸಭಾಧ್ಯಕ್ಷ ಸ್ಥಾನಕ್ಕೆ 46 ವರ್ಷ ಬಳಿಕ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕೊನೇ ಕ್ಷಣದ ಅನಿರೀಕ್ಷಿತ ತಿರುವುಗಳ ಪರಿಣಾಮ ಎನ್‌ಡಿಎ ನಾಮನಿರ್ದೇಶಿತ ಅಭ್ಯರ್ಥಿ  ಓಂ ಬಿರ್ಲಾ ಅವರು ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡುವ ನಿರ್ಣಯ ಮಂಡಿಸಿದರು. ಆದರೆ ಕಾಂಗ್ರೆಸ್‌ ಸದಸ್ಯ ಕೋಡಿಕುನ್ನಿಲ್‌ ಸುರೇಶ್‌ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ಮುಂದಿಟ್ಟಿದ್ದ ಇಂಡಿಯಾ ಕೂಟದ ಪ್ರತಿಪಕ್ಷಗಳು, ಸದನಕ್ಕೆ ಮತ ಹಾಕಲು ಒತ್ತಾಯಿಸಲಿಲ್ಲ. ಹೀಗಾಗಿ ಧ್ವನಿಮತದಿಂದ ಓಂ ಬಿರ್ಲಾ ಅವರು ಸ್ಪೀಕರ್‌ ಆಗಿ ಆಯ್ಕೆ ಆಗಿದ್ದಾರೆ ಎಂದು ಹಂಗಾಮಿ ಸ್ಪೀಕರ್‌ ಭರ್ತೃಹರಿ ಮಹ್ತಬ್‌ ಘೋಷಣೆ ಮಾಡಿದರು.

ಇದರೊಂದಿಗೆ, ರಾಜಸ್ಥಾನದ ಕೋಟಾ ಕ್ಷೇತ್ರದ ಬಿಜೆಪಿ ಸಂಸದ ಬಿರ್ಲಾ ಅವರು ಸತತ ಎರಡನೇ ಬಾರಿಗೆ ಲೋಕಸಭೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂತಾಗಿದೆ. ಅಲ್ಲದೆ, 2ನೇ ಬಾರಿ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸುತ್ತಿರುವ 5ನೇ ವ್ಯಕ್ತಿ ಆಗಿ ಬಿರ್ಲಾ ಹೊರಹೊಮ್ಮಿದ್ದಾರೆ.

ಬಳಿಕ ಪ್ರಧಾನಿ ಮೋದಿ, ಲೋಕಸಭೆಯ ನೂತನ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೀಯ ಸಚಿವ ಕಿರಣ್‌ ರಿಜಿಜು ಅವರು ಓಂ ಬಿರ್ಲಾ ಅವರ ಸ್ಥಳಕ್ಕೆ ತೆರಳಿ ಅವರನ್ನು ಅಭಿನಂದಿಸಿದರು ಹಾಗೂ ಮೂವರೂ ಬಿರ್ಲಾ ಅವರನ್ನು ಕರೆದುಕೊಂಡು ಸ್ಪೀಕರ್‌ ಪೀಠದತ್ತ ತೆರಳಿದರು. ಆಗ ಸ್ಪೀಕರ್ ಸ್ಥಾನದಲ್ಲಿ ಕೂತ ಬಿರ್ಲಾ ಅವರನ್ನು ಭಾರಿ ಕರತಾಡನದ ಮಧ್ಯೆ ಮೂವರೂ ಅಭಿನಂದಿಸಿದರು.

ನಿಮ್ಮ ನಗುವೇ ಸದನಕ್ಕೆ ಭೂಷಣ- ಮೋದಿ

ಬಳಿಕ ಬಿರ್ಲಾ ಅವರನ್ನು ಅಭಿನಂದಿಸಿ 18ನೇ ಸಂಸತ್ತಿನಲ್ಲಿ ಮೊದಲ ಭಾಷಣ ಮಾಡಿದ ಮೋದಿ, ‘ಸಂಸದರಾಗಿ ಬಿರ್ಲಾ ಅವರ ಕೆಲಸವು ಹೊಸ ಲೋಕಸಭಾ ಸದಸ್ಯರಿಗೆ ಸ್ಫೂರ್ತಿಯಾಗಬೇಕು. ನೀವು ಎರಡನೇ ಬಾರಿಗೆ ಈ ಕುರ್ಚಿಗೆ ಆಯ್ಕೆಯಾಗಿರುವುದು ಗೌರವದ ವಿಷಯ. ನಾನು ಇಡೀ ಸದನದ ಪರವಾಗಿ ನಿಮ್ಮನ್ನು ಅಭಿನಂದಿಸುತ್ತೇನೆ ಮತ್ತು ಮುಂದಿನ 5 ವರ್ಷಗಳ ಕಾಲ ನಿಮ್ಮ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದರು. ಅಲ್ಲದೆ, ‘ಬಿರ್ಲಾ ಅವರ ‘ಸಿಹಿ ನಗು’ ಇಡೀ ಲೋಕಸಭೆಯನ್ನು ಸಂತೋಷವಾಗಿರಿಸುತ್ತದೆ’ ಎಂದೂ ಹರ್ಷಿಸಿದರು.

ವಿಪಕ್ಷಗಳಿಗೆ ಬಿರ್ಲಾ ಅವಕಾಶ- ರಾಹುಲ್‌ ವಿಶ್ವಾಸ

ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಬಿರ್ಲಾಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ‘ಸದನವು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಪ್ರತಿಪಕ್ಷಗಳು ಬಯಸುತ್ತವೆ. ಈ ಬಾರಿ ಪ್ರತಿಪಕ್ಷಗಳು ಕಳೆದ ಬಾರಿಗಿಂತ ಭಾರತೀಯರ ಧ್ವನಿಯನ್ನು ಪ್ರತಿನಿಧಿಸುತ್ತವೆ. ಸದನದಲ್ಲಿ ಮಾತನಾಡಿ ಜನರ ಪರ ದನಿ ಎತ್ತಲು ನೀವು ನಮಗೆ ಅವಕಾಶ ನೀಡುತ್ತೀರಿ ಎಂದು ನನಗೆ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಎಸ್ಪಿಯ ಅಖಿಲೇಶ್‌ ಯಾದವ್‌ ಮಾತನಾಡಿ ‘ನೀವು ತಾರತಮ್ಯವಿಲ್ಲದೆ ಮುನ್ನಡೆಯುತ್ತೀರಿ ಮತ್ತು ಸ್ಪೀಕರ್ ಆಗಿ ನೀವು ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ಮತ್ತು ಗೌರವವನ್ನು ನೀಡುತ್ತೀರಿ ಎಂದು ನಾವು ನಂಬುತ್ತೇವೆ. ನಿಷ್ಪಕ್ಷಪಾತವು ಈ ದೊಡ್ಡ ಹುದ್ದೆಯ ದೊಡ್ಡ ಜವಾಬ್ದಾರಿಯಾಗಿದೆ’ ಎಂದರು.

ಇದಕ್ಕೆ ಉತ್ತರಿಸಿದ ಬಿರ್ಲಾ, ‘18ನೇ ಲೋಕಸಭೆಯಲ್ಲಿ ಯಾವುದೇ ಅಡ್ಡಿಗಳು ಉಂಟಾಗದೇ ಕಲಾಪ ನಡೆಯುತ್ತವೆ ಎಂಬ ವಿಶ್ವಾಸ ಇಡಿ. ನನ್ನ ಸ್ಪೀಕರ್‌ನಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಭಾವಿಸುತ್ತನೆ. ನಾನು ಎಲ್ಲರ ಒಪ್ಪಿಗೆಯೊಂದಿಗೆ ಸದನವನ್ನು ನಡೆಸುತ್ತೇನೆ’ ಎಂದರು.

ಚುನಾವಣೆ ನಡೆಯಲಿಲ್ಲ ಏಕೆ? ಲೋಕಸಭೆ ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿಯ ಓಂ ಬಿರ್ಲಾ ಹಾಗೂ ಕಾಂಗ್ರೆಸ್‌ನ ಕೆ. ಸುರೇಶ್‌ ನಡುವೆ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. 

ಏಕೆಂದರೆ ಬುಧವಾರ ಪ್ರಸ್ತಾಪಿತವಾದ ಬಿರ್ಲಾ ಹೆಸರಿಗೆ ಸಂಸದರೆಲ್ಲ ಒಪ್ಪಿಗೆ ಸೂಚಿಸಿದರು ಹಾಗೂ ಮತ ವಿಭಜನೆಗೆ ಅವಕಾಶ ಕೇಳಲಿಲ್ಲ. ಹೀಗಾಗಿ ಬಿರ್ಲಾ ಅವಿರೋಧ ಆಯ್ಕೆ ಆದರು. ಸರ್ವಾನುಮತಕ್ಕೆ ಒಪ್ಪದೇ ವಿಪಕ್ಷಗಳು ಮತ ವಿಭಜನೆಗೆ ಮನವಿ ಮಾಡಿದ್ದರೆ ಮತಚೀಟಿಗಳ ಮೂಲಕ ಮತದಾನ ನಡೆಸಲಾಗುತ್ತಿತ್ತು. ಈ ರೀತಿ ವಿಪಕ್ಷಗಳ ಅಭ್ಯರ್ಥಿ ಇದ್ದರೂ ಅವರ ಪರ ಮತ ವಿಭಜನೆಗೆ ಕೋರಿಕೆ ಸಲ್ಲಿಸದೇ ಆಡಳಿತ ಪಕ್ಷಗಳ ಅಭ್ತರ್ಥಿಯನ್ನು ಅವಿರೋಧ ಆಯ್ಕೆ ಮಾಡುವುದು ಅಪರೂಪದ ಪ್ರಸಂಗವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ