;Resize=(412,232))
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಮತ್ತೆ ಗಗನಕ್ಕೇರಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್ ಸಿಲಿಂಡರ್, ಗೃಹ ಬಳಕೆಯ 5 ಕೆಜಿ ಗ್ಯಾಸ್ ಸಿಲಿಂಡರ್, ಸಗಟು ಡೀಸೆಲ್ ಮತ್ತು ವೈಮಾನಿಕ ಇಂಧನದ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಆದರೆ ಗೃಹ ಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರೆದಿದೆ.
ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ದಾಖಲೆಯ 991 ರು.ನಷ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಸಿಲಿಂಡರ್ ದರ 3152 ರು.ಗೆ ತಲುಪಿದೆ. ವಾಣಿಜ್ಯ ಎಲ್‌ಪಿಜಿ ದರವನ್ನು ಈ ಪ್ರಮಾಣದಲ್ಲಿ ಏರಿಕೆ ಮಾಡಿದ್ದು ಇದೇ ಮೊದಲು. ಕಳೆದ ತಿಂಗಳಷ್ಟೇ ಈ ಸಿಲಿಂಡರ್ ದರವನ್ನು 195 ರು. ಹೆಚ್ಚಿಸಲಾಗಿತ್ತು. ಹೀಗಾಗಿ ಒಂದೇ ತಿಂಗಳಲ್ಲಿ ಒಂದು ಸಿಲಿಂಡರ್ ಬೆಲೆ 1186 ರು. ಹೆಚ್ಚಳವಾದಂತಾಗಿದೆ. ಮಾರ್ಚ್‌ನಲ್ಲಿ ಏರಿಸಿದ್ದ 114 ರು. ಅನ್ನೂ ಗಣನೆಗೆ ತೆಗೆದುಕೊಂಡರೆ 1300 ರು. ಏರಿದಂತಾಗಲಿದೆ. ಈ ಪ್ರಮಾಣದ ದರ ಏರಿಕೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಭಾರೀ ಹೊರೆ ಬೀಳಲಿದ್ದು, ತಕ್ಷಣವೇ ಅವು ದರ ಏರಿಕೆಯತ್ತ ಮುಖ ಮಾಡುವ ಸಾಧ್ಯತೆ ಇದೆ.
ಈ ನಡುವೆ ಭಾರೀ ಪ್ರಮಾಣದ ದರ ಏರಿಕೆ ಖಂಡಿಸಿ ಮೇ 6ರಂದು ಮುಷ್ಕರ ನಡೆಸಲು ಕೇರಳ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಇತರೆ ಹಲವು ರಾಜ್ಯಗಳ ಹೋಟೆಲ್ ಮಾಲೀಕರ ಸಂಘದಿಂದಲೂ ಬೆಲೆ ಏರಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಹಲವು ಕಡೆ ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಹಲವು ತಿನಿಸುಗಳ ಬೆಲೆ ಕೂಡಾ ಹೆಚ್ಚಳ ಮಾಡಲಾಗಿದೆ.
5 ಕೆಜಿ ಎಲ್ಪಿಜಿ:
ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಬಿಡುಗಡೆ ಮಾಡಲಾಗಿರುವ ಗೃಹ ಬಳಕೆಯ 5 ಕೆಜಿ ಎಲ್ಪಿಜಿ ಸಿಲಿಂಡರ್ ದರವನ್ನು 261 ರು.ನಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ಇದುವರೆಗೆ 549 ರು. ಇದ್ದ ದರ ಇದೀಗ 810 ರು.ಗೆ ತಲುಪಿದೆ.
ಸಗಟು ಡೀಸೆಲ್:
ಪೆಟ್ರೋಲ್ ಬಂಕ್‌ಗಳನ್ನು ಹೊರತುಪಡಿಸಿ ಉಳಿದ ಉದ್ಯಮಗಳು ತೈಲ ಕಂಪನಿಗಳಿಂದಲೇ ನೇರವಾಗಿ ಖರೀದಿ ಮಾಡುವ ಸಗಟು ಡೀಸೆಲ್ ದರವನ್ನು ಕೂಡ ಪ್ರತಿ ಲೀಟರ್‌ಗೆ 12 ರು.ನಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ಇದುವರೆಗೂ 137 ರು.ನಷ್ಟಿದ್ದ ದರ ಇದೀಗ 149 ರು.ಗೆ ತಲುಪಿದೆ.
ಇನ್ನು ವೈಮಾನಿಕ ಇಂಧನ ದರವನ್ನು ಪ್ರತಿ ಲೀಟರ್‌ಗೆ 7 ರು.ನಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಈ ಹೆಚ್ಚಳದಿಂದ ದೇಶೀಯ ವಿಮಾನ ಪ್ರಯಾಣಿಕರ ಮೇಲೆ ಆಗುವ ಹೊರೆಯನ್ನು ತಪ್ಪಿಸುವ ಸಲವಾಗಿ ಬೆಲೆ ಏರಿಕೆಯಿಂದ ದೇಶೀಯ ವಿಮಾನ ಕಂಪನಿಗಳನ್ನು ಹೊರಗಿಡಲಾಗಿದೆ. ವಿದೇಶಕ್ಕೆ ಸಂಚಾರ ಕೈಗೊಳ್ಳುವ ವಿಮಾನಗಳಿಗೆ ಈ ಹೊಸ ದರ ಅನ್ವಯವಾಗಲಿದೆ.
ಉತ್ಪನ್ನ ಹಳೆ ದರ ಹೊಸ ದರ ಏರಿಕೆ
ಗೃಹ ಬಳಕೆ ಎಲ್‌ಪಿಜಿ 913 913 000
ಸಗಟು ಡೀಸೆಲ್ 137 149 12
5 ಕೆಜಿ ಎಲ್ಪಿಜಿ 549 810 261
ವಾಣಿಜ್ಯ ಎಲ್ಪಿಜಿ 2161 3152 991
ವೈಮಾನಿಕ ಇಂಧನ (ಸ್ವದೇಶಿ) 105 105 000
ವೈಮಾನಿಕ ಇಂಧನ (ವಿದೇಶಿ) 135 142 7
ಈವರೆಗಿನ ದರ: ₹2161
ಹೊಸ ದರ: ₹3152
ಏರಿಕೆ: ₹991
5 ಕೇಜಿ ಸಿಲಿಂಡರ್
ಈವರೆಗಿನ ದರ: ₹549
ಹೊಸ ದರ: ₹810
ಏರಿಕೆ: ₹261
ಪೆಟ್ರೋಲ್, ಡೀಸೆಲ್ ₹5, ಮನೆ ಸಿಲಿಂಡರ್ ₹50 ಶೀಘ್ರ ದುಬಾರಿ?
ನವದೆಹಲಿ: ವಾಣಿಜ್ಯ ಸಿಲಿಂಡರ್ ದರ ಏರಿಸಿರುವ ತೈಲ ಕಂಪನಿಗಳು ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರವನ್ನೂ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಯುದ್ಧ ಆರಂಭದ ವೇಳೆ ಕಚ್ಚಾ ತೈಲ ಬೆಲೆ 70 ಡಾಲರ್ ಇತ್ತು. ಅದು ಈಗ 126 ಡಾಲರ್‌ಗೆ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಹೇಳಿವೆ. ಈ ನಡುವೆ, ಒಂದು ವಾರದಲ್ಲಿ ಪೆಟ್ರೋಲ್- ಡೀಸೆಲ್ ದರ 4ರಿಂದ 5 ರು., ಗೃಹಬಳಕೆಯ ಸಿಲಿಂಡರ್ 40ರಿಂದ 50 ರು. ಏರಬಹುದು ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.
ಆಟೋ ರಿಕ್ಷಾ ಗ್ಯಾಸ್ ಲೀ.ಗೆ ₹5.73 ಏರಿಕೆ
ಬೆಂಗಳೂರು: ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆ ಬೆನ್ನಲ್ಲೇ ಆಟೋ ಎಲ್‌ಪಿಜಿ ದರ ಪ್ರತಿ ಕೆ.ಜಿ.ಗೆ 5.73 ರು. ಹೆಚ್ಚಳವಾಗಿದ್ದು, ಆಟೋ ಚಾಲಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತಾಗಿದೆ. ದರ ಹೆಚ್ಚಳದಿಂದಾಗಿ ಲೀಟರ್‌ಗೆ 89.35 ರು. ಇದ್ದ ಎಲ್‌ಪಿಜಿ ದರ 95.08ಕ್ಕೆ ಏರಿಕೆಯಾಗಿದೆ. ದರ ಹೆಚ್ಚಳಕ್ಕೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿನಿಸು ದರ ಹೆಚ್ಚಳಕ್ಕೆ ಹೋಟೆಲ್‌ಗಳ ಸಿದ್ಧತೆ
ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲು ಹೋಟೆಲ್‌ಗಳು ಸಜ್ಜಾಗಿವೆ. ಸಣ್ಣ, ಮಧ್ಯಮ ಹೋಟೆಲ್‌ಗಳಲ್ಲಿ ಕಾಫಿ-ಟೀ 3 ರಿಂದ 5 ರುಪಾಯಿ, ತಿಂಡಿಗಳಿಗೆ 5 ರು. ಮತ್ತು ಊಟಕ್ಕೆ 10 ರು. ಬೆಲೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.