ಭಾರತ - ಅಮೆರಿಕ ಡೀಲ್‌ನಿಂದ ಧಾನ್ಯಗಳಿಗೆ ಕೊಕ್‌ - ಫ್ಯಾಕ್ಟ್‌ ಶೀಟ್‌ನಲ್ಲಿ ದಿಢೀರ್‌ 3 ಬದಲಾವಣೆ

KannadaprabhaNewsNetwork |  
Published : Feb 12, 2026, 03:45 AM ISTUpdated : Feb 12, 2026, 04:39 AM IST
india us trade deal white house fact sheet changes pulses removed 500 billion purchase intended digital tax update

ಸಾರಾಂಶ

ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಮಂಗಳವಾರ ಬಿಡುಗಡೆ ಮಾಡಿದ್ದ ತನ್ನ ಫ್ಯಾಕ್ಟ್‌ಶೀಟ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಬುಧವಾರ 3 ಮಹತ್ವದ ಬದಲಾವಣೆ ಮಾಡಿದ್ದು, ಹೊಸದಾಗಿ ಫ್ಯಾಕ್ಟ್‌ ಶೀಟ್‌ ಬಿಡುಗಡೆ ಮಾಡಿದೆ.

 ವಾಷಿಂಗ್ಟನ್‌: ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಮಂಗಳವಾರ ಬಿಡುಗಡೆ ಮಾಡಿದ್ದ ತನ್ನ ಫ್ಯಾಕ್ಟ್‌ಶೀಟ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಬುಧವಾರ 3 ಮಹತ್ವದ ಬದಲಾವಣೆ ಮಾಡಿದ್ದು, ಹೊಸದಾಗಿ ಫ್ಯಾಕ್ಟ್‌ ಶೀಟ್‌ ಬಿಡುಗಡೆ ಮಾಡಿದೆ.

ಈ ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ ಭಾರತದ ತೆರಿಗೆ ವಿನಾಯ್ತಿ ಅಥವಾ ರದ್ದತಿಗೆ ಒಳಗಾಗುವ ಅಮೆರಿಕದ ಕೃಷಿ ಉತ್ಪನ್ನಗಳ ಪಟ್ಟಿಯಿಂದ ಧಾನ್ಯಗಳನ್ನು ಕೈಬಿಡಲಾಗಿದೆ. ಜತೆಗೆ, ಅಮೆರಿಕದಿಂದ ಇಂಧನ ಸೇರಿ 45 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಮುಂದಿನ 5 ವರ್ಷಗಳಲ್ಲಿ ಖರೀದಿಸುವುದಾಗಿ ಭಾರತ ‘ಬದ್ಧತೆ ವ್ಯಕ್ತಪಡಿಸಿದೆ’ ಎಂಬ ಸಾಲಿನ ಬದಲು ‘ಖರೀದಿಸಲು ಉದ್ದೇಶಿಸಿದೆ’ ಎಂದು ಬದಲಾವಣೆ ಮಾಡಲಾಗಿದೆ. ಇನ್ನು ‘ಡಿಜಿಟಲ್‌ ಸೇವೆಗಳ ಮೇಲಿನ ತೆರಿಗೆಯನ್ನು ಭಾರತ ರದ್ದು ಮಾಡಲು ತೀರ್ಮಾನಿಸಿದೆ’ ಎಂಬ ವಾಕ್ಯವನ್ನೂ ತೆಗೆದು ಹಾಕಲಾಗಿದೆ.

ಧಾನ್ಯಗಳು ಪದಕ್ಕೆ ಕೊಕ್‌:

ಭಾರತದಲ್ಲಿ ತೆರಿಗೆ ವಿನಾಯ್ತಿ ಅಥವಾ ಸಂಪೂರ್ಣ ತೆರಿಗೆ ರದ್ದತಿ (ಶೂನ್ಯ ತೆರಿಗೆ) ವ್ಯಾಪ್ತಿಗೆ ಬರುವ ಅಮೆರಿಕದ ಕೃಷಿ ಉತ್ಪನ್ನಗಳ ಪಟ್ಟಿಯಿಂದ ಧಾನ್ಯಗಳನ್ನು ಕೈಬಿಡಲಾಗಿದೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರುದ್ಧ ಕೃಷಿ ಸಂಘಟನೆಗಳು ಗುರುವಾರ ದೇಶಾದ್ಯಂತ ಪ್ರತಿಭಟನೆಯ ನಿರ್ಧಾರ ಘೋಷಿಸಿವೆ. ಇದರ ಬೆನ್ನಲ್ಲೇ ಅಮೆರಿಕ ಸರ್ಕಾರ ಇಂಥದ್ದೊಂದು ಬದಲಾವಣೆಗೆ ಮುಂದಾಗಿರುವುದು ನೆಮ್ಮದಿ ಮೂಡಿಸಿದೆ.

ಈ ಹಿಂದೆ ಅಮೆರಿಕ ಬಿಡುಗಡೆ ಮಾಡಿದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಫ್ಯಾಕ್ಟ್‌ಶೀಟ್‌ನಲ್ಲಿ ಕೈಗಾರಿಕಾ ಉತ್ಪನ್ನಗಳು, ಒಣಗಿಸಿದ ಡಿಸ್ಟಿಲರಿಗಳ ಧಾನ್ಯಗಳು, ಕೆಂಪು ಮೆಕ್ಕೆಜೋಳ, ಬಾದಾಮಿಯಂಥ ಬೀಜಗಳು, ತಾಜಾ ಹಾಗೂ ಸಂಸ್ಕರಿತ ಆಹಾರಗಳು, ಕೆಲ ಧಾನ್ಯಗಳು, ಸೋಯಾಬಿನ್‌ ಎಣ್ಣೆ, ವೈನ್‌ ಮತ್ತು ಸ್ಪಿರಿಟ್‌, ಹೆಚ್ಚುವರಿ ಉತ್ಪನ್ನಗಳು ಸೇರಿ ಹಲವು ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಭಾರತ ರದ್ದು ಮಾಡಲಿದೆ ಅಥವಾ ಕಡಿಮೆ ಮಾಡಲಿದೆ ಎಂದು ಹೇಳಲಾಗಿತ್ತು.

45 ಲಕ್ಷ ಕೋಟಿ ರು. ವ್ಯಾಪಾರ ‘ಬದ್ಧತೆ’ ಅಲ್ಲ, ‘ಉದ್ದೇಶ’:

ಹಿಂದಿನ ಫ್ಯಾಕ್ಟ್‌ಶೀಟ್‌ನಲ್ಲಿ ಭಾರತವು ಅಮೆರಿಕದಿಂದ ಮುಂದಿನ ಐದು ವರ್ಷಗಳ ಅವಧಿಯಲ್ಲಿ 45 ಲಕ್ಷ ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಇಂಧನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರೆ ಉತ್ಪನ್ನಗಳನ್ನು ಖರೀದಿಸುವ ‘ಬದ್ಧತೆ ವ್ಯಕ್ತಪಡಿಸಿದೆ’ ಎಂದು ಹೇಳಲಾಗಿತ್ತು. ಆದರೆ, ಇದೀಗ ಬಿಡುಗಡೆ ಮಾಡಲಾದ ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಲ್ಲಿ ‘ಬದ್ಧತೆ’ ಎಂಬ ಪದದ ಬದಲು ‘ಉದ್ದೇಶಿಸಿದೆ’ ಎಂಬ ಬದಲಾವಣೆ ಮಾಡಲಾಗಿದೆ.

ಡಿಜಿಟಲ್‌ ಸೇವೆಗಳ ತೆರಿಗೆ ರದ್ದತಿ ಇಲ್ಲ:

ಇನ್ನು ಡಿಜಿಟಲ್‌ ಸೇವೆಗಳ ತೆರಿಗೆ (ಗೂಗಲ್‌, ಮೆಟಾದಂಥ ವಿದೇಶಿ ತಂತ್ರಜ್ಞಾನ ಕಂಪನಿಗಳು ಭಾರತದಲ್ಲಿ ಗಳಿಸುವ ಆದಾಯದ ಮೇಲೆ ಹಾಕುವ ತೆರಿಗೆ) ಕಡಿತ ವಿಚಾರವನ್ನೂ ಪರಿಷ್ಕೃತ ಫ್ಯಾಕ್ಟ್‌ಶೀಟಿಂದ ಕೈಬಿಡಲಾಗಿದೆ. ಹಿಂದಿನ ಫ್ಯಾಕ್ಟ್‌ಶೀಟ್‌ನಲ್ಲಿ ಭಾರತವು ಡಿಜಿಟಲ್‌ ಸೇವೆಗಳ ತೆರಿಗೆ ತೆಗೆದುಹಾಕಲಿದೆ ಎಂದು ಹೇಳಲಾಗಿತ್ತು. ಇದು ಭಾರತದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಯಾಕೆಂದರೆ ಭಾರತ ಬಿಡುಗಡೆ ಮಾಡಿದ ವ್ಯಾಪಾರ ಒಪ್ಪಂದ ಕುರಿತ ಅಧಿಕೃತ ಹೇಳಿಕೆಯಲ್ಲಿ ಈ ಕುರಿತು ಪ್ರಸ್ತಾಪವೇ ಇರಲಿಲ್ಲ. ಹೀಗಾಗಿ ಶ್ವೇತಭವನ ಈ ಸಾಲುಗಳನ್ನು ಪರಿಷ್ಕೃತ ಫ್ಯಾಕ್ಟ್‌ಶೀಟ್‌ನಿಂದ ತೆಗೆದುಹಾಕಿದೆ.

ಭಾರತವು ಕಳೆದ ವರ್ಷವೇ ಡಿಜಿಟಲ್‌ ಜಾಹೀರಾತುಗಳ ಆದಾಯದ ಮೇಲಿನ ಸಮೀಕರಣ ತೆರಿಗೆಯನ್ನು ಶೇ.6ರಷ್ಟು ಕಡಿತ ಮಾಡಿದೆ.

ಏನೇನು ಬದಲಾವಣೆ?

1. ಅಮೆರಿಕದಿಂದ ಬರುವ ಧಾನ್ಯಗಳಿಗೆ ತೆರಿಗೆ ವಿನಾಯ್ತಿ/ಸಂಪೂರ್ಣ ತೆರಿಗೆ ವಿನಾಯ್ತಿ ಪ್ರಸ್ತಾಪ ಮೊದಲು ಇತ್ತು. ಈಗ ಧಾನ್ಯಗಳ ಹೆಸರನ್ನೇ ಕೈಬಿಡಲಾಗಿದೆ.

2. 45 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಅಮೆರಿಕದಿಂದ 5 ವರ್ಷದಲ್ಲಿ ಖರೀದಿಸಲು ಭಾರತ ‘ಬದ್ಧತೆ’ ವ್ಯಕ್ತಪಡಿಸಿದೆ ಎಂದು ಇತ್ತು. ‘ಬದ್ಧತೆ’ಯನ್ನು ಈಗ ‘ಉದ್ದೇಶ’ ಎಂದು ಬದಲಿಸಲಾಗಿದೆ

3. ಡಿಜಿಟಲ್‌ ಸೇವೆಗಳ ಮೇಲಿನ ತೆರಿಗೆಯನ್ನು ಭಾರತ ರದ್ದು ಮಾಡಲು ತೀರ್ಮಾನಿಸಿದೆ ಎಂಬ ವಾಕ್ಯ ಮೊದಲು ಇತ್ತು. ಈಗ ಅದು ಕೂಡ ಇಲ್ಲ

ಭಾರತವನ್ನೇ ಮಾರಿದ್ದಾರೆ

ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ಮೂಲಕ ಭಾರತವನ್ನೇ ಮಾರಲಾಗಿದೆ. ಇದು ಹೋಲ್‌ಸೇಲ್‌ ಶರಣಾಗತಿ.

- ರಾಹುಲ್‌ ಗಾಂಧಿ, ವಿಪಕ್ಷ ನಾಯಕ

ಆರೋಪ ಸಾಬೀತು ಮಾಡಿ

ನೀವು (ರಾಹುಲ್‌) ಅಧಿಕೃತ ವಿಪಕ್ಷ ನಾಯಕ. ನೀವು ಮಾತಿಗೆ ಪರಿಣಾಮಗಳೂ ಇರುತ್ತವೆ. ಹೀಗಾಗಿ ಆರೋಪ ಸಾಬೀತುಮಾಡಿ.

- ಕಿರಣ್‌ ರಿಜಿಜು, ಸಚಿವ

 ದೇಶವನ್ನು ಮಾರಲು ಆಗದು

ಭಾರತವನ್ನು ಮಾರುವ ಧೈರ್ಯ ಯಾರಿಗೂ ಇಲ್ಲ. ಡಬ್ಲ್ಯುಟಿಒ ಮುಂದೆ ರೈತರನ್ನು ಮಾರಿದ್ದು, ದೇಶವನ್ನು ಶರಣಾಗಿಸಿದ್ದೇ ಕಾಂಗ್ರೆಸ್‌.

- ನಿರ್ಮಲಾ ಸೀತಾರಾಮನ್‌, ವಿತ್ತ ಸಚಿವೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಮ್ಮನ್ನು ಅಮೆರಿಕ ಟಾಯ್ಲೆಟ್‌ ಪೇಪರ್‌ ರೀತಿ ಬಳಸ್ತು: ಪಾಕ್‌ ಸಚಿವ
ಪಿಒಕೆ, ಅಕ್ಸಾಯ್‌ ಚಿನ್‌ ಇರುವ ಭಾರತ ನಕ್ಷೆ ಅಳಿಸಿದ ಅಮೆರಿಕ