ಮತ್ತೆ ಗದ್ದುಗೆ ಗದ್ದಲ : ಕೊಟ್ಟ ಮಾತಂತೆ ನಡೀತಾರೆ ಎಂದ ಡಿಕೆಸು, 2028ಕ್ಕೂ ಸಿದ್ದು ನೇತೃತ್ವ: ಜಮೀರ್‌

KannadaprabhaNewsNetwork |  
Published : Feb 12, 2026, 02:15 AM ISTUpdated : Feb 12, 2026, 04:53 AM IST
Zameer Ahmed Khan

ಸಾರಾಂಶ

‘2028ರವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. 2028ರ ವಿಧಾನಸಭಾ ಚುನಾವಣೆಗೂ ಅವರದ್ದೇ ನೇತೃತ್ವ ಇರುತ್ತದೆ’ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ. ಕೊಟ್ಟ ಮಾತಂತೆ ನಡೀತಾರೆ ಎಂದ ಡಿಕೆಸು.

  ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಧಾನವಾಗಿಯಾದರೂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎನ್ನುವ ಭರವಸೆ ಇಂದಿಗೂ ಇದೆ. ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಮಾತೇ ನಮಗೆ ವೇದವಾಕ್ಯ. ಅವರೇ ಹೈಕಮಾಂಡ್ ಎಂದು ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಯತೀಂದ್ರ ಅವರ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಅವರಷ್ಟು ತಿಳಿವಳಿಕೆ ನಮಗಿಲ್ಲ. ಅವರಷ್ಟು ದೊಡ್ಡವರು ನಾವಲ್ಲ. ಅವರು ಏನು ಹೇಳುತ್ತಾರೋ ಅದೇ ವೇದವಾಕ್ಯ ಎಂದರು.

ಯತೀಂದ್ರ ಅವರಿಗೆ ನೋಟಿಸ್‌ ನೀಡದ ಕುರಿತ ಶಾಸಕ ಇಕ್ಬಾಲ್‌ ಹುಸೇನ್‌ ಪ್ರಶ್ನೆ ಬಗ್ಗೆ ಪ್ರತಿಕ್ರಿಯಿಸಿ, ಇಕ್ಬಾಲ್‌ ಹುಸೇನ್ ಹೇಳುತ್ತಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು. ಆದರೆ, ಯತೀಂದ್ರ ಅವರೇ ಹೈಕಮಾಂಡ್‌ ಆಗಿರುವುದರಿಂದ ಏನೂ ಸಮಸ್ಯೆಯಿಲ್ಲ ಎಂದು ವ್ಯಂಗ್ಯವಾಡಿದರು.ಮುಖ್ಯಮಂತ್ರಿ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಈ ಹಿಂದಿನ ಹೇಳಿಕೆ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಇಂದಿಗೂ ನನಗೆ ಭರವಸೆಯಿದೆ. ಇನ್ನು, ಮಾತುಕತೆ ವಿಚಾರವಾಗಿ ಡಿ.ಕೆ.ಶಿವಕುಮಾರ್‌ ಅವರು ನೀಡಿರುವ ಹೇಳಿಕೆ ಬಗ್ಗೆ ಅವರೇ ಪ್ರತಿಕ್ರಿಯಿಸಬೇಕು. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.

ಹೈಕಮಾಂಡ್‌ ನಾಯಕರ ಭೇಟಿ ಕುರಿತು ಉತ್ತರಿಸಿ, ನಾವು ದೆಹಲಿಗೆ ಹೋದಾಗಲೆಲ್ಲ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತಲಿರುತ್ತೇವೆ. ನಮ್ಮ ಹಾಗೂ ಅವರ ಬಾಂಧವ್ಯದ ವಿಚಾರ. ಪಕ್ಷ, ಕ್ಷೇತ್ರ ಹಾಗೂ ಇತರ ವಿಚಾರಗಳನ್ನು ಚರ್ಚೆ ಮಾಡುತ್ತೇವೆ. ಕೆಲವರು ನಿರ್ದಿಷ್ಟ ಕೆಲಸಕ್ಕಾಗಿ ದೆಹಲಿಗೆ ಹೋಗುತ್ತಾರೆ. ನಾನು ಮತ್ತು ಡಿ.ಕೆ.ಶಿವಕುಮಾರ್‌ ಆ ವರ್ಗಕ್ಕೆ ಸೇರುವುದಿಲ್ಲ. ಸದ್ಯ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸವು ಪಕ್ಷ ಮತ್ತು ಸರ್ಕಾರದ ಕಾರ್ಯಗಳಿಗಾಗಿ ಎಂದು ಹೇಳಿದರು.ಶಾಸಕರ ವಿದೇಶ ಪ್ರವಾಸದ ಬಗ್ಗೆ ನಮಗೆ ತಿಳಿದಿಲ್ಲ. ಈ ವಿಚಾರವನ್ನು ಯಾರು ಪ್ರವಾಸಕ್ಕೆ ಹೋಗುತ್ತಿದ್ದಾರೋ ಮತ್ತು ಪ್ರವಾಸ ಆಯೋಜಿಸುವವರನ್ನು ಕೇಳಬೇಕು. ಡಿ.ಕೆ.ಶಿವಕುಮಾರ್‌ ಅವರಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಮುಖಂಡಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನೊಳಗೊಂಡಿದೆ. ಇಲ್ಲಿ ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ ಸೇರಿ ಎಲ್ಲ ಪಕ್ಷದವರೂ ಇದ್ದಾರೆ. ನಮ್ಮಲ್ಲಿ ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ. ನಂತರ ಕಾಂಗ್ರೆಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಪಕ್ಷದ ಗುರಿ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗಳಿಗೆ ಇರುವುದರಿಂದ ಹೀಗೆ ಮಾಡಿರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದರು.ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ:

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್‌, ನಾನು ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅದರಲ್ಲಿ ಲಾಬಿ ಮಾಡಿ ಪಡೆಯುವಂಥದ್ದೇನೂ ಇಲ್ಲ. ರೈತರ ಹಿತ ಕಾಯುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಮತ್ತು ಸರ್ಕಾರದ ತೀರ್ಮಾನದಂತೆ ಎಲ್ಲವೂ ಆಗುತ್ತದೆ. ನನಗೆ ಅನೇಕ ಜವಾಬ್ದಾರಿಗಳಿವೆ. ಅದನ್ನು ನಿಭಾಯಿಸುವುದೇ ಕಷ್ಟ ಎಂದು ಹೇಳಿದರು.--

2028ಕ್ಕೂ ಸಿದ್ದು ನೇತೃತ್ವ: ಜಮೀರ್‌ 

 ಹೊಸಪೇಟೆ :  ‘2028ರವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. 2028ರ ವಿಧಾನಸಭಾ ಚುನಾವಣೆಗೂ ಅವರದ್ದೇ ನೇತೃತ್ವ ಇರುತ್ತದೆ’ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ಶುಕ್ರವಾರದಿಂದ ಆರಂಭವಾಗಲಿರುವ ಮೂರು ದಿನಗಳ ಹಂಪಿ ಉತ್ಸವಕ್ಕೆ ನಡೆಯುತ್ತಿರುವ ಸಿದ್ಧತೆ ಪರಿಶೀಲಿಸಿದ ಬಳಿಕ, ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, 2028ರ ವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಆದಾಗ್ಯೂ, ಈ ವಿಷಯದಲ್ಲಿ ಹೈಕಮಾಂಡ್‌ ನಿರ್ಧಾರವೇ ಅಂತಿಮ. ನಮ್ಮ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧವಾಗಿರುತ್ತೇವೆ. ಹೈಕಮಾಂಡ್‌ ಬೀದಿಯಲ್ಲಿ ಹೋಗೋ ದಾಸಯ್ಯನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೂ, ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, 2028ರ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಅವರದ್ದೇ ನೇತೃತ್ವ ಇರುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳನ್ನು ಪದೇ, ಪದೇ ಬದಲಾವಣೆ ಮಾಡುವ ಅಭ್ಯಾಸ ಬಿಜೆಪಿಯಲ್ಲಿದೆ. 2008ರಿಂದ 2011ರವರೆಗೆ ಬಿಜೆಪಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರು. ಆದರೆ, ಕಾಂಗ್ರೆಸ್‌ನಲ್ಲಿ ಆ ಪದ್ಧತಿ ಇಲ್ಲ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ಅಸ್ಸಾಂ ಹಾಗೂ ಇತರ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗೆ ಪಕ್ಷದ ರಣತಂತ್ರ ರೂಪಿಸಲು ದೆಹಲಿಯಲ್ಲಿ ಕರೆದಿರುವ ಎಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಅವರು ದೆಹಲಿಗೆ ಹೋಗಿದ್ದಾರೆ. ಪಕ್ಷದ ಕಾರ್ಯ ನಿಮಿತ್ತ ಅವರು ದೆಹಲಿಗೆ ಹೋಗಿದ್ದಾರೆಯೇ ಹೊರತು, ಹೈಕಮಾಂಡ್ ಭೇಟಿ ಮಾಡಲು ತಡಕಾಡುತ್ತಿಲ್ಲ. ನಮ್ಮ ಹೈಕಮಾಂಡ್‌ ನಾಯಕರು ಎಲ್ಲರಿಗೂ ಸಿಗುತ್ತಾರೆ ಎಂದು ಹೇಳಿದರು.ಲೇಟಾದ್ರೂ ಸಿದ್ದು

 ಎಲ್ಲದಕ್ಕೂ ಕಾಲ ಉತ್ತರಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ನಾವು ಏನು ಮಾತನಾಡಿದ್ದೇವೆ, ಅದು ನಮಗೆ ಮಾತ್ರ ಗೊತ್ತು. ಕಾಲ ಯಾವಾಗ ಬರಲಿದೆ ಎಂದು ಸಮಯ ನೋಡಿ ಹೇಳುವೆ.

- ಡಿ.ಕೆ.ಶಿವಕುಮಾರ್‌, ಡಿಸಿಎಂ

ಪದೇ ಪದೇ ಕೇಳಬೇಡಿ

ನಾಯಕತ್ವ ವಿಚಾರದಲ್ಲಿ ಹೈಕಮಾಂಡ್‌ ನಾಯಕರು ತೀರ್ಮಾನ ಮಾಡುತ್ತಾರೆ. ಅದರಂತೆ ನಾನು, ಡಿ.ಕೆ.ಶಿವಕುಮಾರ್‌ ನಡೆದುಕೊಳ್ಳುತ್ತೇವೆ. ಮತ್ತೆ ಮತ್ತೆ ಇದರ ಬಗ್ಗೆಯೇ ಕೇಳಬೇಡಿ.

- ಸಿದ್ದರಾಮಯ್ಯ ಮುಖ್ಯಮಂತ್ರಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರು ಯುವತಿ ಜತೆ ಮದುವೆಯಾದ ಮಹಾಕುಂಭ ಖ್ಯಾತಿಯ ‘ಐಐಟಿ ಬಾಬಾ’
ಕೋಮಾದಲ್ಲಿ ಮೊಜ್ತಬಾ, ಕೋಂ ನಗರದಲ್ಲಿ ಚಿಕಿತ್ಸೆ