ನಮ್ಮ ಕುಟುಂಬದ ಅಪಪ್ರಚಾರಕ್ಕೆ ಅಂತ್ಯ ಹಾಡಲು ಆತ್ಮಕತೆ: ಸೋನಿಯಾ

Published : Nov 17, 2026, 12:29 PM IST
Sonia gandhi

ಸಾರಾಂಶ

‘ನಮ್ಮ ಕುಟುಂಬದ ಬಗ್ಗೆ ಸತ್ಯವಲ್ಲದ ಅನೇಕ ವಿಷಯಗಳನ್ನು ಬರೆಯಲಾಗಿತ್ತು. ಆ ಸಂಗತಿಗಳನ್ನು ಸರಿಪಡಿಸಿ, ವಾಸ್ತವವನ್ನು ತಿಳಿಸಲು ನಾನು ಬಯಸಿದ್ದೆ. ನನ್ನ ಆತ್ಮಕಥೆಯನ್ನು ಬರೆಯಲು ಇದೇ ಪ್ರಮುಖ ಕಾರಣ’

ನವದೆಹಲಿ : ‘ನಮ್ಮ ಕುಟುಂಬದ ಬಗ್ಗೆ ಸತ್ಯವಲ್ಲದ ಅನೇಕ ವಿಷಯಗಳನ್ನು ಬರೆಯಲಾಗಿತ್ತು. ಆ ಸಂಗತಿಗಳನ್ನು ಸರಿಪಡಿಸಿ, ವಾಸ್ತವವನ್ನು ತಿಳಿಸಲು ನಾನು ಬಯಸಿದ್ದೆ. ನನ್ನ ಆತ್ಮಕಥೆಯನ್ನು ಬರೆಯಲು ಇದೇ ಪ್ರಮುಖ ಕಾರಣ’ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ತಿಳಿಸಿದ್ದಾರೆ.

ತಮ್ಮ ‘ಬಿಲಾಂಜಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ಕುಟುಂಬ, ಅತ್ತೆ, ಗಂಡ, ಮಗ, ಮಗಳ ಬಗ್ಗೆ ತುಂಬಾ ಹೇಳಲಾಗಿದೆ. ಅದರಲ್ಲಿ ಹೆಚ್ಚಿನವು ಅವಾಸ್ತವಿಕ ಕಥೆಗಳು. ಅನೇಕ ಸುಳ್ಳು ಕಥೆಗಳನ್ನು ಹೆಣೆಯಲಾಗಿದೆ. ಇವುಗಳನ್ನು ಸರಿಪಡಿಸಿ, ಸಮಾಜಕ್ಕೆ ಸತ್ಯವನ್ನು ತಿಳಿಸಲು ನಾನು ಬಯಸಿದ್ದೆ. ಇದು ಆತ್ಮಕಥೆ ಬರೆಯಲು ಮುಖ್ಯ ಕಾರಣ’ ಎಂದರು.

ಒತ್ತಾಯಕ್ಕಾಗಿ ಬರೆದೆ:

‘ನನ್ನ ಸ್ನೇಹಿತರು ನನ್ನ ಕಥೆಯನ್ನು ಬರೆಯಲೇಬೇಕೆಂದು ಪದೇಪದೇ ಹೇಳುತ್ತಿದ್ದರು. ನನ್ನ ಮನದಾಳದ ಭಾವನೆಗಳನ್ನು ಹೇಳಿಕೊಳ್ಳಲು ನಾನು ಹಿಂಜರಿಯುತ್ತಿದ್ದೆ, ಆದರೆ ರಾಹುಲ್, ಪ್ರಿಯಾಂಕಾ ಹಾಗೂ ಮಂಜುಲಿಕಾ ದುಬೆ ಅವರ ಒತ್ತಾಯದ ಮೇರೆಗೆ, ಅಂತಿಮವಾಗಿ ನಾನು ಒಪ್ಪಿಕೊಂಡೆ. ಆರಂಭದಲ್ಲಿ ಕಷ್ಟವಾಯಿತು, ಆದರೆ ಒಮ್ಮೆ ಶುರು ಮಾಡಿದ ಮೇಲೆ, ಎಲ್ಲವೂ ಪ್ರವಾಹದಂತೆ ಹೊರಹರಿಯಿತು’ ಎಂದರು.

‘ಬಿಲಾಂಗಿಂಗ್‌’ ಎಂಬ ಶೀರ್ಷಿಕೆಯನ್ನು ನಾನೇ ಆಯ್ಕೆ ಮಾಡಿಕೊಂಡೆ. ಏಕೆಂದರೆ ಇದರ ಅರ್ಥ ‘ಒಂದರ ಭಾಗವಾಗಿರುವುದು’. ನನ್ನ ವಿಷಯದಲ್ಲಿ ಹೇಳುವುದಾದರೆ, ನಾನು ಇಲ್ಲಿನ ಭಾಗವಾಗಲು ಎಷ್ಟು ಕಷ್ಟಪಟ್ಟೆ ಎಂಬುದನ್ನು ಇದು ಸೂಚಿಸುತ್ತದೆ. ಭಾರತದಲ್ಲಿಯೂ ಅನೇಕ ಮಹಿಳೆಯರ ಸ್ಥಿತಿ ಇದೇ ಆಗಿದೆ. ಅವರು ಮದುವೆಯಾದಾಗ, ಒಂದೇ ಹಿನ್ನೆಲೆಯಿಂದ ಬಂದವರಾಗಿರಬಹುದು, ಆದರೆ ಅವರು ತಮ್ಮ ಹೊಸ ಮನೆಗೆ ಹೊಂದಿಕೊಳ್ಳುವುದು ಕಷ್ಟ’ ಎಂದರು.

ಅತ್ತೆ ಕಂಡರೆ ಭಯವಿತ್ತು:

‘ನಾನು ಭಾರತಕ್ಕೆ ಬಂದು ಇಂದಿರಾ ಗಾಂಧಿಯವರ ಸೊಸೆಯಾದಾಗ, ಅಲ್ಲಿನ ವಾತಾವರಣವು ನನ್ನ ಇಟಾಲಿಯನ್ ಹಿನ್ನೆಲೆಯಲ್ಲಿದ್ದಷ್ಟು ಅನೌಪಚಾರಿಕವಾಗಿರಲಿಲ್ಲ. ಅಲ್ಲಿನ ಪರಿಸರವು ಹೆಚ್ಚು ಔಪಚಾರಿಕವಾಗಿತ್ತು. ಆದರೆ, ಇಟಲಿಯಲ್ಲಿ ನನ್ನ ಪಾಲನೆ-ಪೋಷಣೆಯು ನನಗೆ ಹಿರಿಯರಿಗೆ ಗೌರವ ನೀಡಲು ಕಲಿಸಿತ್ತು. ಅದು ನನಗೆ ಸಹಾಯಕವಾಯಿತು. ಆರಂಭದಲ್ಲಿ ಅತ್ತೆ ಇಂದಿರಾ ಗಾಂಧಿ ಅವರ ಬಗ್ಗೆ ಭಯವಿತ್ತು. ಅವರನ್ನು ಮಮ್ಮಿ ಎಂದು ಕರೆಯಲು ಪ್ರಾರಂಭಿಸಲು ಸಮಯ ಬೇಕಾಯಿತು’ ಎಂದು ಸ್ಮರಿಸಿದರು.

ಪತಿ ರಾಜಕೀಯ ಪ್ರವೇಶ ಇಷ್ಟವಿರಲಿಲ್ಲ:

‘ನನ್ನ ಪತಿ ರಾಜೀವ್‌ ಗಾಂಧಿ ರಾಜಕೀಯಕ್ಕೆ ಸೇರುವುದನ್ನು ನಾನು ತೀವ್ರವಾಗಿ ವಿರೋಧಿಸಿದ್ದೆ. ಬಹುಶಃ ನಾನು ಸ್ವಾರ್ಥಿಯಾಗಿದ್ದೆ ಎನ್ನಬಹುದು, ಏಕೆಂದರೆ ನಮಗಿದ್ದ ಸಮಯವನ್ನೆಲ್ಲ ನಾವು ಕಳೆದುಕೊಳ್ಳುತ್ತೇವೆ ಎಂದು ನನಗೆ ಅನ್ನಿಸಿತ್ತು. ಅವರಿಗೆ ಸಾಕಷ್ಟು ಪ್ರಯಾಣ ಮಾಡಬೇಕಾದ ಅನಿವಾರ್ಯತೆಯಿತ್ತು. ನಮ್ಮ ಜೀವನ ಬದಲಾಯಿತು, ಆದರೆ ನಮ್ಮ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. ರಾಜೀವ್ ಮರಣದ ನಂತರ, ನಾನು ಮಗುವಾದೆ. ನನ್ನ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ನನ್ನ ಪೋಷಕರಾದರು’ ಎಂದು ಮೆಲುಕು ಹಾಕಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಕ್ವನ್‌ ಸೈಕ್ಲೋನ್‌ ಪ್ರಭಾವ : ಮೂರು ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ
ಸೋನಿಯಾ ಆತ್ಮಕತೆ ಆರೇ ದಿನದಲ್ಲಿ 2 ಲಕ್ಷ ಸೇಲ್‌, ₹20 ಕೋಟಿ ಆದಾಯ!