ಲೇಹ್: ಹೈದರಾಬಾದ್ ಮೂಲದ ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಎಂಬ ಸ್ಟಾರ್ಟ್ಅಪ್ ಕಂಪನಿ ಐಐಟಿ ಹೈದರಾಬಾದ್‌ನ ಸಹಯೋಗದೊಂದಿಗೆ ಮಿಲಿಟರಿ ಬಳಕೆಗಾಗಿ ವಿಶ್ವದ ಮೊದಲ 3ಡಿ-ಮುದ್ರಿತ ಬಂಕರ್ ಅನ್ನು ನಿರ್ಮಿಸಿದೆ.
ಐಐಟಿ ಹೈದರಾಬಾದ್‌ನ ಪ್ರಾಧ್ಯಾಪಕ ಕೆ. ವಿ. ಎಲ್. ಸುಬ್ರಮಣಿಯಂ ಮಾರ್ಗದರ್ಶನ ಮಾಡಿದ್ದು, ಲೇಹ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ.
ಏನಿದು 3ಡಿ-ಮುದ್ರಿತ ಬಂಕರ್?:ಲಡಾಖ್ ವಲಯದಲ್ಲಿ ಚೀನಾ ಗಡಿಯಲ್ಲಿರುವ ಸೈನಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸುವುದಕ್ಕೋಸ್ಕರ ಈ ವಿಶೇಷ ಬಂಕರ್ ನಿರ್ಮಿಸಲಾಗಿದೆ. 3ಡಿ-ಮುದ್ರಿತ ಬಂಕರ್‌ಗಳ ಪ್ರಯೋಜನವೆಂದರೆ, ಇವು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಕಡಿಮೆ ತೂಕ ಹೊಂದಿರುತ್ತವೆ. ಇವು ತುಂಬಾ ಬಲಿಷ್ಠವಾಗಿದ್ದು, ಟಿ-90 ಟ್ಯಾಂಕ್‌ನ ನೇರ ಹೊಡೆತವನ್ನು ಸಹ ತಡೆದುಕೊಳ್ಳಬಲ್ಲವು. ಸೈನ್ಯದ ಅವಶ್ಯಕತೆಗಳನ್ನು ಅವಲಂಬಿಸಿ ಇವುಗಳನ್ನು ಬಹಳ ಬೇಗನೆ ತಯಾರಿಸಬಹುದಾಗಿದೆ.
ಹರ್ಯಾಣ ಭೂಹಗರಣ: 3ನೇ ದಿನವೂ ರಾಬರ್ಟ್ ವಾದ್ರಾ ವಿಚಾರಣೆ
ನವದೆಹಲಿ: ಹರ್ಯಾಣ ಭೂ ಹಗರಣ ಸಂಬಂಧಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸತತ 3ನೇ ದಿನವೂ ಉದ್ಯಮಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾರನ್ನು 6 ತಾಸು ವಿಚಾರಣೆಗೆ ಒಳಪಡಿಸಿದೆ.ತನಿಖೆಯ ಭಾಗವಾಗಿ ಗುರುವಾರವೂ ರಾಬರ್ಟ್ ಅವರ ವಿಚಾರಣೆ ಮುಂದುವರಿದಿದ್ದು, ಹಿಂದಿನ 2 ದಿನಗಳಲ್ಲಿ ಅವರನ್ನು 10 ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಲಾಗಿತ್ತು. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏ.21, 22ಕ್ಕೆ ರಾಹುಲ್ ಗಾಂಧಿ ಅಮೆರಿಕ ಪ್ರವಾಸ
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಏ.21, 22ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅಲ್ಲಿನ ಬ್ರೌನ್ ವಿವಿಯಲ್ಲಿ ಉಪನ್ಯಾಸ ನೀಡಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅದಕ್ಕೂ ಮೊದಲು ಅನಿವಾಸಿ ಭಾರತೀಯರು, ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.ರಾಹುಲ್ ಈ ಹಿಂದೆಯೂ ವಿದೇಶಗಳ ಹಲವು ವಿವಿಗಳಲ್ಲಿ ಉಪನ್ಯಾಸ ನೀಡಿದ್ದರು. ಭಾರತದ ಪ್ರಜಾಪ್ರಭುತ್ವದ ಕುರಿತ ಅವರ ಸಂವಾದ ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಅವರು ವಿದೇಶಗಳಲ್ಲಿ ಭಾರತದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಈ ಬಾರಿಯ ಅಮೆರಿಕ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.