ಈ ಸಲ ವಾಡಿಕೆಗಿಂತ ತುಸು ಹೆಚ್ಚು ಮಳೆ: ಐಎಂಡಿ ಭವಿಷ್ಯ

KannadaprabhaNewsNetwork |  
Published : Apr 16, 2024, 02:04 AM ISTUpdated : Apr 16, 2024, 05:53 AM IST
ಮಳೆ | Kannada Prabha

ಸಾರಾಂಶ

ಬರದಿಂದ ಕಂಗೆಟ್ಟ ಜನರಿಗೆ ಸಮಾಧಾನ ಸುದ್ದಿ ಬಂದಿದ್ದು, ದೇಶದಲ್ಲಿ 106% ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ: ಭಾರತದಲ್ಲಿ ಪ್ರಸ್ತುತ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ತುಸು ಹೆಚ್ಚಾಗಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ. ಇದರೊಂದಿಗೆ ಭೀಕರ ಬರಗಾಲದಿಂದ ಕಂಗೆಟ್ಟಿರುವ ದೇಶದ ಜನರಿಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಈ ಸಮಯದಲ್ಲಿ ಕರ್ನಾಟಕವೂ ಒಳಗೊಂಡಂತೆ ನೈಋತ್ಯ ಭಾರತದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂಬುದಾಗಿ ವರದಿ ತಿಳಿಸಿದೆ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ , ‘ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಋತುವಿನಲ್ಲಿ ಈ ಬಾರಿ ಶೇ.106ರಷ್ಟು ಮಳೆ ಬೀಳುವ ಸಂಭವವಿದೆ. ಅಂದರೆ ಒಟ್ಟಾರೆ ಸರಾಸರಿಯನ್ನು ತೆಗೆದುಕೊಂಡಾಗ ಸುಮಾರು 87 ಸೆಂ.ಮೀ. ಮಳೆ ಬೀಳುವ ಸಂಭವವಿದೆ’ ಎಂದು ಹೇಳಿದ್ದಾರೆ.

ಜೊತೆಗೆ ಈ ಬಾರಿ ಕಡಿಮೆ ಅವಧಿಯಲ್ಲಿ ಬೃಹತ್‌ ಪ್ರಮಾಣದ ಮಳೆಯಾಗುವ ಸಂಭವವಿದ್ದು, ಅದಕ್ಕೆ ತಕ್ಕುದಾದ ತಯಾರಿಗಳನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಜೊತೆಗೆ ಪೆಸಿಫಿಕ್‌ ಸಾಗರದಲ್ಲಿ ಮಾರುತಗಳು, ಹಿಮಾಲಯದಲ್ಲಿ ಹಿಮಗಾಳಿಯೂ ಸಾಧಾರಣ ಮಟ್ಟದಲ್ಲಿ ಬೀಸುತ್ತಿರುವುದು ಭಾರತೀಯ ಮುಂಗಾರು ಋತುವಿಗೆ ಪೂರಕವಾಗಿ ಪರಿಣಮಿಸಿದೆ. ಜೊತೆಗೆ ಮುಂಗಾರು ಋತುವಿನಲ್ಲಿ ಆಗಸ್ಟ್‌ ವೇಳೆಗೆ ಲಾ-ನಿನಾ ಹವಾಗುಣ ನಿರ್ಮಾಣವಾಗಿ ಕೃಷಿಗೆ ಪೂರಕವಾಗಿ ಮುಂಗಾರು ತಂಪೆರೆಯಲಿದೆ ಎಂದು ಪ್ರಕಟಿದ್ದಾರೆ.

ಕಳೆದ ಬಾರಿ ಮುಂಗಾರು ನಾಲ್ಕು ತಿಂಗಳ ಸರಾಸರಿಯನ್ನು ತೆಗೆದುಕೊಂಡಾಗ 82 ಸೆಂ.ಮೀ ಮಳೆಯಾಗಿ ಸಾಧಾರಣಕ್ಕಿಂತ ಕಡಿಮೆ ಮಳೆಯನ್ನು ದಾಖಲಿಸಿತ್ತು.

ಭಾರತದಲ್ಲಿ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಪಾಲು ಮುಂಗಾರಿನ ಮೇಲೆ ಅವಲಂಬಿತವಾಗಿದ್ದು, ಕೃಷಿ ವಲಯದಿಂದ ಭಾರತದ ಜಿಡಿಪಿಗೆ ಶೇ.14ರಷ್ಟು ಕೊಡುಗೆಯಿದೆ.

ಇದರ ಜೊತೆಗೆ ಮತ್ತಷ್ಟು ಕರಾರುವಕ್ಕಾದ ಮುಂಗಾರು ವರದಿಯನ್ನು ಮೇ ಮಧ್ಯಭಾಗದಲ್ಲಿ ನೀಡಲಾಗುವುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೇಗಿದೆ ಮಾನದಂಡ?:

1951ರಿಂದ 2023ರವರೆಗೆ ಬಿದ್ದ ಮಳೆಯ ವಾರ್ಷಿಕ ಸರಾಸರಿಯನ್ನು ಆಧರಿಸಿ ಹವಾಮಾನ ಇಲಾಖೆ ಮುಂಗಾರು ಬೀಳುವ ಪ್ರಮಾಣವನ್ನು ಐದು ಹಂತಗಳಾಗಿ ವಿಂಗಡಿಸಿದೆ. ವಾರ್ಷಿಕವಾಗಿ 87 ಸೆಂ.ಮೀ ಮಳೆ ಬಂದಲ್ಲಿ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿ ಒಟ್ಟಾರೆ ಸರಾಸರಿಯ ಶೇ.90ಕ್ಕಿಂತ ಕಡಿಮೆ ಮಳೆ ಬೀಳುವುದಾದರೆ ಅದನ್ನು ‘ಕೊರತೆ’ ಎಂದು ಪರಿಗಣಿಸಲಾಗುತ್ತದೆ.

ಶೇ.90ರಿಂದ ಶೇ.95ರಷ್ಟು ಮಳೆ ಬೀಳುವುದಾದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ವಿಂಗಡಿಸಲಾಗುತ್ತದೆ. ಶೇ.95ರಿಂದ ಶೇ.105ರಷ್ಟು ಮಳೆ ಬೀಳುವುದನ್ನು ಸಾಮಾನ್ಯ ಎಂದು ಪರಿಗಣಿಸಲಾಗಿದ್ದು, ಶೇ.105ರಿಂದ ಶೇ.110ರಷ್ಟು ಮಳೆ ಬಿದ್ದಲ್ಲಿ ಅದನ್ನು ಸಾಮಾನ್ಯಕ್ಕಿಂತ ಅಧಿಕ ಎಂದು ಪರಿಗಣಿಸಲಾಗುತ್ತದೆ. ಶೇ.110ಕ್ಕಿಂತ ಅಧಿಕ ಮಳೆ ಬಿದ್ದಲ್ಲಿ ಅದನ್ನು ಅಧಿಕ ಎಂದು ವಿಂಗಡಿಸಲಾಗುತ್ತದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಭೀತಿಕರ್ನಾಟಕವೂ ಸೇರಿದಂತೆ ನೈಋತ್ಯ ಭಾರತದಲ್ಲಿ ಸಾಮಾನ್ಯ ಮಳೆ ಸಾಧ್ಯತೆದೇಶದಲ್ಲಿ ಒಟ್ಟಾರೆ ಮುಂಗಾರು ಋತುವಿನಲ್ಲಿ 87 ಸೆಂ.ಮೀ. ಮಳೆ ಸಂಭವಪೆಸಿಫಿಕ್‌ ಮಹಾಸಾಗರದಲ್ಲಿ ಲಾ-ನಿನಾ ಪ್ರಭಾವದಿಂದ ಈ ಸಲ ಉತ್ತಮ ಮಳೆಆದರೆ ಕಡಿಮೆ ಅವಧಿಯಲ್ಲಿ ಭಾರೀ ಮಳೆ ಸುರಿಯುವ ಕುರಿತೂ ತಜ್ಞರ ಎಚ್ಚರಿಕೆಮೇ ಮಧ್ಯ ಭಾಗದಲ್ಲಿ ಕರಾರುವಾಕ್ಕಾದ ಮುಂಗಾರು ವರದಿ ನೀಡುವ ಭರವಸೆ

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ