ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ

KannadaprabhaNewsNetwork |  
Published : Dec 10, 2025, 03:30 AM ISTUpdated : Dec 10, 2025, 04:07 AM IST
Supreme Court

ಸಾರಾಂಶ

ಮಗುವಿನ ಜಾತಿ ತಂದೆಯಿಂದ ನಿರ್ಧಾರವಾಗುತ್ತದೆ ಎಂಬ ಚಾಲ್ತಿ ಪದ್ಧತಿಗೆ ಬ್ರೇಕ್‌ ಹಾಕಿರುವ ಸುಪ್ರೀಂಕೋರ್ಟ್‌, ತಾಯಿ ಜಾತಿಯ ಆಧಾರದಲ್ಲೂ  ಪುತ್ರಿಗೆ ಪರಿಶಿಷ್ಠ ಜಾತಿ ಪ್ರಮಾಣಪತ್ರ ಪಡೆಯಲು ಅರ್ಹ ಎಂಬ ಐತಿಹಾಸಿಕ ತೀರ್ಪು ನೀಡಿದೆ.  ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ನವದೆಹಲಿ: ಮಗುವಿನ ಜಾತಿ ತಂದೆಯಿಂದ ನಿರ್ಧಾರವಾಗುತ್ತದೆ ಎಂಬ ಚಾಲ್ತಿ ಪದ್ಧತಿಗೆ ಬ್ರೇಕ್‌ ಹಾಕಿರುವ ಸುಪ್ರೀಂಕೋರ್ಟ್‌, ತಾಯಿಯ ಜಾತಿಯ ಆಧಾರದಲ್ಲೂ ಆಕೆಯ ಪುತ್ರಿಗೆ ಪರಿಶಿಷ್ಠ ಜಾತಿಯ ಪ್ರಮಾಣಪತ್ರ ಪಡೆಯಲು ಅರ್ಹ ಎಂಬ ಐತಿಹಾಸಿಕ ತೀರ್ಪು ನೀಡಿದೆ. ಈ ಸಂಬಂಧ ಈ ಹಿಂದೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಏನಿದು ಪ್ರಕರಣ?:

ಪುದುಚೇರಿಯ ಎಸ್‌ಸಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳಿಗೆ ( 2 ಹೆಣ್ಣು, 1 ಗಂಡು) ತನ್ನದೇ ಜಾತಿಯ ಆಧಾರದ ಮೇಲೆ ಎಸ್‌ಸಿ ಪ್ರಮಾಣ ಪತ್ರ ನೀಡಬೇಕು ಎಂದು ಕೋರಿದ್ದರು. ಅದಕ್ಕೆ ಪೂರಕವಾಗಿ ತನ್ನ ತಂದೆ ತಾಯಿ ಪೋಷಕರು, ಅಜ್ಜ ಅಜ್ಜಿ ಎಲ್ಲರೂ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದವರು. ಅನ್ಯಜಾತಿಯವರಾದ ಪತಿ ಮದುವೆಯಾದ ಮೇಲೆ ನಮ್ಮ ಪೋಷಕರ ಮನೆಯಲ್ಲಿಯೇ ಇರುವುದರಿಂದ ಮಕ್ಕಳಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಬೇಕು ಕೋರ್ಟ್‌ ಮೆಟ್ಟಿಲೇರಿದ್ದರು.

ಮದ್ರಾಸ್‌ ಹೈಕೋರ್ಟ್‌ ಇದಕ್ಕೆ ಅಸ್ತು ಎಂದಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ನ್ಯಾಯಾಲಯ ಮದ್ರಾಸ್‌ ಹೈಕೋರ್ಟ್ ತೀರ್ಪು ಎತ್ತಿಹಿಡಿದಿದೆ. ಇದೇ ವೇಳೆ ಸುಪ್ರೀಂ ‘ ಬದಲಾಗುತ್ತಿರುವ ಕಾಲಮಾನದಲ್ಲಿರುವ ನಾವು, ತಾಯಿ ಜಾತಿ ಆಧಾರದಲ್ಲಿ ಪ್ರಮಾಣ ಪತ್ರವನ್ನು ಏಕೆ ನೀಡಬಾರದು?’ ಎಂದು ಪ್ರಶ್ನಿಸಿದೆ. ಈ ಮೂಲಕ ಎಸ್‌ಸಿ ಮಹಿಳೆಯು ಅನ್ಯ ಪುರುಷನೊಂದಿಗೆ ವಿವಾಹವಾದರೂ ಎಸ್‌ಸಿ ಪ್ರಮಾಣಪತ್ರಕ್ಕೆ ಅರ್ಹರು ಎಂದು ಈ ಪ್ರಕರಣದಲ್ಲಿ ಹೇಳಿದೆ.

ಸುಪ್ರೀಂಕೋರ್ಟ್‌ನ ಈ ಆದೇಶ, ವಿವಿಧ ರಾಜ್ಯಗಳಲ್ಲೇ ಬಾಕಿ ಉಳಿದಿರುವ ಇಂಥದ್ದೇ ಅರ್ಜಿಗಳಿಗೆ ಆಧಾರಸ್ತಂಬವಾಗುವ ನಿರೀಕ್ಷೆ ಇದೆ.

ಹಿಂದೆಯೂ ಒಂದು ಕೇಸ್‌:

ಈ ಹಿಂದಿನ ಬಹುತೇಕ ಪ್ರಕರಣಗಳಲ್ಲಿ ತಂದೆಯಿಂದಲೇ ಮಕ್ಕಳಿಗೆ ಜಾರಿ ಬರುತ್ತದೆ ಎಂದು ಸುಪ್ರೀಂಕೋರ್ಟ್‌ ಹೇಳಿತ್ತು. ಆದರೆ 2012ರಲ್ಲಿ ಗುಜರಾತ್‌ನ ಪ್ರಕರಣವೊಂದರಲ್ಲಿ ಈ ನಿಯಮವನ್ನು ಸ್ವಲ್ಪ ಸಡಿಲಿಸಿತ್ತು. ಅಂತರ್‌ಜಾತಿ ವಿವಾಹದ ಪ್ರಕರಣಗಳಲ್ಲಿ, ಆದಿವಾಸಿ ಮಹಿಳೆ, ಆದಿವಾಸಿಯೇತರ ವ್ಯಕ್ತಿ ಮದುವೆ ಆಗಿದ್ದರೆ ಕೇವಲ ತಂದೆ ಜಾತಿಯಿಂದ ಅವರ ಮಕ್ಕಳ ಜಾತಿ ನಿರ್ಧರಿಸಲಾಗದು. 

ಮಕ್ಕಳು ತಂದೆಯ ಜಾತಿಗೆ ಸೇರಿರುತ್ತರಾದರೂ, ಆ ನಿಯಮವನ್ನು ಅಂತಿಮವೂ ಅಲ್ಲ ಅಥವಾ ಬದಲಾಯಿಸಲಾಗದ್ದು ಎಂದೇನೂ ಅಲ್ಲ. ಮಕ್ಕಳು, ಎಸ್‌ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ತಾಯಿಯ ವಾತಾವರಣದಲ್ಲಿ ಬೆಳೆದಿದ್ದರೆ, ಮತ್ತು ಅದೇ ಸಮುದಾಯದ ಇತರರು ಅನುಭವಿಸಿದ ಸಾಮಾಜಿಕ ತಾರತಮ್ಯ ಎದುರಿಸಿದ್ದರೆ, ಅಂಥ ಮಕ್ಕಳಿಗೆ ತಾಯಿ ಜಾತಿಯ ಪ್ರಮಾಣಪತ್ರ ನೀಡಬಹುದು ಎಂದು ಹೇಳಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ