ತಿರುವನಂತಪುರಂ: ವಾರಕ್ಕೆ 60/70/90 ಗಂಟೆ ಕೆಲಸ, ಉದ್ಯೋಗ ಮತ್ತು ಕೌಟುಂಬಿಕ ಸಮತೋಲನದ ಕುರಿತು ದೇಶವ್ಯಾಪಿ ಉನ್ನತ ವೇತನ ವರ್ಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೇರಳದಲ್ಲಿ ಈಶಾನ್ಯ ರಾಜ್ಯಗಳ ಯುವಕರು ಕರ್ತವ್ಯದ ಸ್ಥಳದಲ್ಲೇ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರಿಗೀಗ ಕೇರಳ ಹೊಸ ಲವ್ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ!
ಹೀಗೆ ಹೊಟ್ಟೆಪಾಡಿಗಾಗಿ ಕೇರಳಕ್ಕೆ ಆಗಮಿಸಿ, ನೆಲೆಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಒಗ್ಗಿಕೊಳ್ಳುತ್ತಿರುವ ವಲಸೆ ಕಾರ್ಮಿಕರು ತಮ್ಮ ಹಳೆ ವೃತ್ತಿಯನ್ನು ತ್ಯಜಿಸಿ, ವ್ಯಾಪಾರ ಸೇರಿದಂತೆ ಉತ್ತಮ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಇಂಥವರನ್ನು ಇಲ್ಲಿನ ಯುವತಿಯರು ವಿವಾಹವಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಅಧಿಕವಿದ್ದು, ಈ ಸಂಖ್ಯೆ 2017-18ರಲ್ಲಿ 31 ಲಕ್ಷ ಇದ್ದು, 2030ರ ವೇಳೆಗೆ 50 ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಇಂತಹ ಹಲವು ಜೋಡಿಗಳನ್ನು ರಾಜ್ಯಾದ್ಯಂತ ಕಾಣಬಹುದಾಗಿದೆ. ಈ ಕುರಿತು ಮಾತನಾಡಿರುವ ಸಂಯೋಜಿತ ರಾಷ್ಟ್ರೀಯ ವಲಸೆ ಕಾರ್ಮಿಕರ ಒಕ್ಕೂಟ(ಎಈಟಿಯುಸಿ) ಉಪಾಧ್ಯಕ್ಷ ರಾಜೇಂದ್ರ ನಾಯಕ್, ‘ಈಶಾನ್ಯದ ಯುವಕರು ಶ್ರಮಜೀವಿಗಳಾಗಿದ್ದು, ಕೇರಳದಲ್ಲೇ ನೆಲೆಸಿ ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ, ಮದುವೆ ವೇಳೆ ವರದಕ್ಷಿಣೆಯನ್ನೂ ಬಯಸುವುದಿಲ್ಲ’ ಎಂದಿದ್ದಾರೆ. ಇವರೂ ಕೂಡ ಒಡಿಶಾ ಮೂಲದವರಾಗಿದ್ದು, ಕೇರಳದ ರಜನಿ ಎಂಬುವರನ್ನು ವಿವಾಹವಾಗಿರುವುದು ಗಮನಾರ್ಹ.