‘ತೃತೀಯ ಜಗತ್ತಿನ’ ಜನರ ಅಮೆರಿಕ ವಲಸೆಗೆ ಬ್ರೇಕ್‌

KannadaprabhaNewsNetwork |  
Published : Nov 29, 2025, 12:30 AM IST
Donald Trump

ಸಾರಾಂಶ

ವೈಟ್‌ ಹೌಸ್‌ ಬಳಿ ನಿಯೋಜನೆಗೊಂಡಿದ್ದ ಇಬ್ಬರು ಸೈನಿಕರ ಮೇಲೆ ಆಫ್ಘನ್‌ ಪ್ರಜೆಯೊಬ್ಬ ದಾಳಿ ಮಾಡಿದ ಘಟನೆ ಬಳಿಕ ವಲಸಿಗರ ವಿರುದ್ಧ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕುಪಿತರಾಗಿದ್ದಾರೆ ಹಾಗೂ ‘ತೃತೀಯ ಜಗತ್ತಿನ ರಾಷ್ಟ್ರಗಳ ಪ್ರಜೆಗಳ ಅಮೆರಿಕ ವಲಸೆಯನ್ನು ಸಂಪೂರ್ಣ ನಿಲ್ಲಿಸಲಾಗುವುದು’ ಎಂದು ಘೋಷಿಸಿದ್ದಾರೆ.

 ವಾಷಿಂಗ್ಟನ್‌:  ವೈಟ್‌ ಹೌಸ್‌ ಬಳಿ ನಿಯೋಜನೆಗೊಂಡಿದ್ದ ಇಬ್ಬರು ಸೈನಿಕರ ಮೇಲೆ ಆಫ್ಘನ್‌ ಪ್ರಜೆಯೊಬ್ಬ ದಾಳಿ ಮಾಡಿದ ಘಟನೆ ಬಳಿಕ ವಲಸಿಗರ ವಿರುದ್ಧ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕುಪಿತರಾಗಿದ್ದಾರೆ ಹಾಗೂ ‘ತೃತೀಯ ಜಗತ್ತಿನ ರಾಷ್ಟ್ರಗಳ ಪ್ರಜೆಗಳ ಅಮೆರಿಕ ವಲಸೆಯನ್ನು ಸಂಪೂರ್ಣ ನಿಲ್ಲಿಸಲಾಗುವುದು’ ಎಂದು ಘೋಷಿಸಿದ್ದಾರೆ.

ಜತೆಗೆ, ಈಗಾಗಲೇ ಅಮೆರಿಕದ ಪೌರತ್ವ ಪಡೆದಿರುವ 19 ದೇಶದವರ ಗ್ರೀನ್‌ ಕಾರ್ಡ್‌ ಪರಿಶೀಲನೆಗೂ ಆದೇಶಿಸಿದ್ದಾರೆ. ಈ ಬಗ್ಗೆ ಟ್ರುತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ನಾವು ತಾಂತ್ರಿಕವಾಗಿ ಮುಂದುವರೆದಿದ್ದರೂ, ಈ ಹಿಂದಿನ ಬೈಡೆನ್‌ ಸರ್ಕಾರ ಜಾರಿ ಮಾಡಿದ ವಲಸೆ ನೀತಿ, ದೇಶಕ್ಕೆ ಮಾರಕವಾಗಿದೆ. ಆದ್ದರಿಂದ ಅಮೆರಿಕಕ್ಕೆ ಕೊಡುಗೆ ನೀಡದ, ಈ ದೇಶವನ್ನು ಪ್ರೀತಿಸದ ಅಥವಾ ಭದ್ರತೆಗೆ ಅಪಾಯ ತಂದೊಡ್ಡುವ 3ನೇ ಜಗತ್ತಿನ ರಾಷ್ಟ್ರಗಳ ಲಕ್ಷಾಂತರ ಪ್ರಜೆಗಳಿಗೆ ಇನ್ನು ಪ್ರವೇಶವಿಲ್ಲ. ಈಗಾಗಲೇ ಪ್ರವೇಶಿಸಿದ ಅಕ್ರಮ ವಲಸಿಗರನ್ನು ಹೊರಹಾಕುತ್ತೇವೆ’ ಎಂದು ಹೇಳಿದ್ದಾರೆ.

ಆದರೆ 3ನೇ ಜಗತ್ತಿನ ದೇಶಗಳ ಪಟ್ಟಿಯನ್ನು ಅವರು ಬಿಡುಗಡೆ ಮಾಡಿಲ್ಲ. ಇದು ಭಾರತೀಯರಿಗೂ ಅನ್ವಯಿಸಲಿದೆಯೇ ಎಂಬುದು ಸ್ಪಷ್ಟವಿಲ್ಲ.

ಈಗಾಗಲೇ ಅಫ್ಘಾನಿಸ್ತಾನದವರ ವಲಸೆ ಅರ್ಜಿ ಸ್ವೀಕಾರವನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಲಾಗಿದೆ. 

ಗ್ರೀನ್‌ ಕಾರ್ಡ್‌ ಪರಿಶೀಲನೆ:

ಅಫ್ಘಾನಿಸ್ತಾನ ಸೇರಿ 19 ದೇಶದ ಜನರ ಗ್ರೀನ್‌ ಕಾರ್ಡ್‌ ಪರಿಶೀಲನೆಗೂ ಟ್ರಂಪ್‌ ಆದೇಶಿಸಿದ್ದಾರೆ. ಇದರೊಂದಿಗೆ, ಅಮೆರಿಕದ ಪೌರತ್ವ ಪಡೆಯುವ ಪ್ರಕ್ರಿಯೆಯಲ್ಲಿ, ಅರ್ಜಿದಾರರು ಯಾವ ದೇಶಕ್ಕೆ ಸೇರಿದವರು ಎಂಬುದೂ ಪ್ರಮುಖ ಪಾತ್ರ ವಹಿಸಲಿದೆ. ಇದು ಭಾರತ ಮೂಲದವರಿಗೆ ಅನ್ವಯಿಸದು.

3ನೇ ವಿಶ್ವದ ರಾಷ್ಟ್ರಗಳು ಎಂದರೇನು? 

ಶೀತಲ ಸಮರದ ಸಮಯದಲ್ಲಿ, 1952ರಲ್ಲಿ ಹುಟ್ಟಿಕೊಂಡ ಪದವಿದು. ಅಮೆರಿಕ ಹಾಗೂ ನ್ಯಾಟೋ ಗುಂಪಿಗೆ ಸೇರಿದ ದೇಶಗಳನ್ನು ‘ಮೊದಲ ಜಗತ್ತಿನ ರಾಷ್ಟ್ರ’ ಎಂದು ಕರೆಯಲಾಗುತ್ತದೆ. ಅಮೆರಿಕ ವಿರೋಧಿಯಾದ ರಷ್ಯಾ (ಅಂದಿನ ಸೋವಿಯತ್‌), ಅದರ ಪೂರ್ವ ಯುರೋಪಿನ ಮಿತ್ರರಾಷ್ಟ್ರಗಳು, ಕ್ಯೂಬಾ ಮತ್ತು ಚೀನಾ ದೇಶಗಳನ್ನು ‘2ನೇ ಜಗತ್ತಿನ ದೇಶಗಳು’ ಎನ್ನಲಾಗುತ್ತದೆ. ಈ ಎರಡೂ ಬಣಕ್ಕೆ ಸೇರದ, ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಹಿಂದುಳಿದ ದೇಶಗಳನ್ನು ‘3ನೇ ಜಗತ್ತಿನ ರಾಷ್ಟ್ರಗಳು’ ಎಂದು ಪರಿಗಣಿಸಲಾಗುತ್ತದೆ.

ಭಾರತಕ್ಕೆ ಅನ್ವಯವಿಲ್ಲ?

ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಹಾಗೂ ಶೀತಲ ಸಮರದ ವೇಳೆ ತಟಸ್ಥವಾಗಿದ್ದ ದೇಶದಲ್ಲಿ ಭಾರತ 3ನೇ ಜಗತ್ತಿನ ಸೇರಿದೆ. ಆದರೆ 3ನೇ ಜಗತ್ತಿನ ದೇಶ ಎಂಬುದು ಶೀತಲ ಸಮರದ ವೇಳೆಯ ದಶಕಗಳ ಹಿಂದಿನ ಪರಿಕಲ್ಪನೆ. ಈಗ ಅದಿಲ್ಲ. ಅಲ್ಲದೆ, ಭಾರತ ಈಗ ಆರ್ಥಿಕವಾಗಿ ಮುಂದುವರಿದಿರುವ ದೇಶದ ಸಾಲಿಗೆ ಸೇರಿರುವ ಕಾರಣ ಭಾರತದ ವಲಸಿಗರ ಮೇಲೆ ನಿರ್ಬಂಧ ಅನುಮಾನ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪ್ರಿಯಕರನ ಮೃತದೇಹವನ್ನೇ ವರಿಸಿದ ಯುವತಿ!
ವಸಾಹತುಶಾಹಿ ಗುರುತು ಅಳಿಸಿ ಹಾಕಲು ರಾಜಭವನ ಇನ್ನು ಲೋಕಭವನ