ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳು ಬಲಿಪಶುಗಳಾಗುತ್ತಿದ್ದು, ದುಬೈನಲ್ಲಿ ತಾಜಾ ಆಹಾರಕ್ಕೂ ಸಂಚಕಾರ ಬಂದೊದಗಿದೆ. ಇಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಮಾತ್ರವೇ ಆಹಾರ ದಾಸ್ತಾನುಗಳಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ಯುದ್ಧ ಮುಂದುವರೆದರೆ ತಾಜಾ ಆಹಾರಗಳ ಕೊರತೆ ಭೀತಿ

ಆಹಾರಕ್ಕೆ ವಿದೇಶಗಳನ್ನೇ ಅವಲಂಬಿಸಿರುವ ಕೊಲ್ಲಿ ದೇಶ

ನವದೆಹಲಿ: ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳು ಬಲಿಪಶುಗಳಾಗುತ್ತಿದ್ದು, ದುಬೈನಲ್ಲಿ ತಾಜಾ ಆಹಾರಕ್ಕೂ ಸಂಚಕಾರ ಬಂದೊದಗಿದೆ. ಇಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಮಾತ್ರವೇ ಆಹಾರ ದಾಸ್ತಾನುಗಳಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ದುಬೈನಲ್ಲಿ ಯಾವುದೇ ರೀತಿ ಆಹಾರಗಳನ್ನು ಬೆಳೆಯಲ್ಲ. ಹಾಗಾಗಿ ಯುಎಇ, ಸೌದಿ ಅರೇಬಿಯಾ ಹಾಗೂ ಹೆಚ್ಚಿನ ಅರಬ್‌ ರಾಷ್ಟ್ರಗಳು ದೈನಂದಿನ ಅಗತ್ಯಗಳಿಗೆ ಬೇಕಾದ ಬಹುತೇಕ ಎಲ್ಲಾ ಸಾಮಗ್ರಿಗಳಿಗೆ ವಿದೇಶಗಳನ್ನು ಅವಲಂಬಿಸಿವೆ. ಆಹಾರ ಮತ್ತು ಪಾನೀಯಗಳಲ್ಲಿ ಸುಮಾರು ಶೇ.80-90ರಷ್ಟನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಇನ್ನು ಗಲ್ಫ್‌ ದೇಶಗಳಿಗೆ ಪೂರೈಕೆಯಾಗುವ ಆಹಾರದ ಶೇ.70ರಷ್ಟು ಹಾರ್ಮೋಜ್‌ ಜಲಸಂಧಿ ಮೂಲಕವೇ ಸರಬರಾಜಾಗುತ್ತಿತ್ತು.

ಸಂಘರ್ಷದಿಂದಾಗಿ ಹಾರ್ಮೋಜ್‌ ಜಲಸಂಧಿ ಸ್ಥಬ್ಧವಾಗಿರುವುದು ವ್ಯಾಪಾರಕ್ಕೆ ಅಡ್ಡಿಯಾಗಿದೆ. ಈ ಪರಿಸ್ಥಿತಿ ಸುಧಾರಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದೆಗೆಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ವಾಯು ಸರಕು ಸಾಮರ್ಥ್ಯವು ಶೇ.22ರಷ್ಟು ಕಡಿಮೆಯಾಗಿದೆ. ಇದು ಕೂಡ ಆಹಾರ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಹಣ್ಣು ತರಕಾರಿ, ಡೈರಿ ಉತ್ಪನ್ನಗಳ ಕೊರತೆಗೆ ಕಾರಣವಾಗಿದೆ,

ಮತ್ತೊಂದೆಡೆ ತಜ್ಞರು ಹೇಳುವ ಪ್ರಕಾರ ತಾಜಾ ಉತ್ಪನ್ನಗಳ ದಾಸ್ತಾನು ಕಡಿಮೆ ಆಗಿದೆ ನಿಜ. ಆದರೆ ಧಾನ್ಯ, ಶೀತಲೀಕೃತ ಆಹಾರ ಸಂಗ್ರಹ ಗಣನೀಯ ಆಗಿರುವುದರಿಂದ ಜನರು ಆತಂಕ ಪಡಬೇಕಾಗಿಲ್ಲ.

==

ಇಸ್ರೇಲ್‌ಗೆ 20000 ಅಮೆರಿಕ ಬಾಂಬ್‌

ಇರಾನ್‌ ಮೇಲೆ ಸುದೀರ್ಘ, ತೀವ್ರ ದಾಳಿ?

ವಾಷಿಂಗ್ಟನ್‌: ಇರಾನ್‌ ಜತೆಗಿನ ಸಂಘರ್ಷ 3 ತಿಂಗಳಾದರೂ ನಡೆಯುತ್ತದೆ ಎಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್‌, ಇದೀಗ ಇಸ್ರೇಲ್‌ಗೆ 6000 ಕೋಟಿ ರು. ಮೌಲ್ಯದ 20,000 ಬಾಂಬ್‌ಗಳನ್ನು ಇಸ್ರೇಲ್‌ಗೆ ರವಾನಿಸುವಂತೆ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಅಮೆರಿಕದ ಶಸ್ತ್ರಾಸ್ತ್ರ ರಫ್ತು ನಿಯಂತ್ರಣ ಕಾಯ್ದೆಯಡಿ ವಿದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲು ಸಂಸತ್ತು ಅನುಮತಿಸುವುದು ಅಗತ್ಯವಾದರೂ ಟ್ರಂಪ್‌ ಸಂಸತ್ತಿನ ಗಮನಕ್ಕೇ ತರದೆ ಸ್ಫೋಟಕಗಳ ರವಾನೆಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕ್ರಮವು ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಹೇಳಿದ್ದಾರೆ.ಈ ವ್ಯವಹಾರದ ಹಿಂದೆ, ಇಸ್ರೇಲ್‌ ನೆಲದಿಂದ ಇರಾನ್‌ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಲೆಕ್ಕಾಚಾರವಿರುವುದು ಸ್ಪಷ್ಟ.