ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈ ಬಾರಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿರುವಾಗಲೇ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ 272 ಸ್ಥಾನಗಳ ಮ್ಯಾಜಿಕ್ ನಂಬರ್ ದಾಟಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಐಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಜೈರಾಂ ರಮೇಶ್, ‘ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತಮ್ಮ ಹಠಕ್ಕೆ ಅಂಟಿಕೊಂಡ ಹೊರತಾಗಿಯೂ ಇಂಡಿಯಾ ಮೈತ್ರಿಕೂಟ ಒಡೆದಿಲ್ಲ.
ಮೈತ್ರಿ ಅಚಲವಾಗಿಯೇ ಇದೆ. ಈ ಬಾರಿ ನಾವು 272ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ ವಿಪಕ್ಷಗಳ ಭ್ರಷ್ಟಾಚಾರದ ಕುರಿತು ಪ್ರಧಾನಿ ಮೋದಿ ಮಾಡುತ್ತಿರುವ ಆರೋಪಗಳು ಪೂರ್ಣ ಪೊಳ್ಳು ಎಂದು ಟೀಕಿಸಿದ ರಮೇಶ್, ‘ಹೇಮಂತ್ ಸೊರೇನ್ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಕರಣದ ಮುಂದಿಟ್ಟುಕೊಂಡು ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಮೋದಿ ಪೊಳ್ಳು ವಾದ ಮಾಡುತ್ತಿದ್ದಾರೆ.
ಏಕೆಂದರೆ ನೀವು ಚುನಾವಣಾ ಬಾಂಡ್ ಪ್ರಕರಣದ ನೋಡಿ, ಅದು ಪೂರ್ಣವಾಗಿ ಕೊಟ್ಟು, ಕೊಳ್ಳುವ ಭ್ರಷ್ಟಾಚಾರಕ್ಕೆ ಉದಾಹರಣೆ ಎಂದು ಟೀಕಿಸಿದರು.ಬಿಜೆಪಿಗೆ ಸಂದಾಯವಾದ 4000 ಕೋಟಿ ಚುನಾವಣಾ ಬಾಂಡ್ ದೇಣೀಗೆಗೆ ಪ್ರತಿಯಾಗಿ ಪಕ್ಷಕ್ಕೆ 4 ಲಕ್ಷ ಕೋಟಿ ಮೌಲ್ಯದ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ ಎಂದು ರಮೇಶ್ ಆರೋಪಿಸಿದರು.
ಇದೇ ವೇಳೆ ಈ ಬಾರಿ ಗಾಂಧೀ ಕುಟುಂಬ ಉತ್ತರಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳನ್ನು ತೊರೆಯಲಿದೆ. ರಾಹುಲ್ ಅಮೇಠಿಯಿಂದ ಮತ್ತು ಪ್ರಿಯಾಂಕಾ ರಾಯ್‌ಬರೇಲಿಯಿಂದ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂಬ ವರದಿಗಳ ಬಗ್ಗೆ, ‘ರಾಹುಲ್ ಗಾಂಧಿ ತಾವು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸ್ಪರ್ಧಿಸಲು ಸೂಚಿಸಿದರೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಎಂದು ನೇರ ಉತ್ತರ ನೀಡದೇ ಜಾರಿಕೊಂಡರು. ಜೊತೆಗೆ ಪಕ್ಷದ ಹಿರಿಯ ನಾಯಕರು ಲೋಕಸಭೆಗೆ ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆ ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದರು.