ನವದೆಹಲಿ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಮಮಂದಿರ ಉದ್ಘಾಟನೆಯ ಮೂಲಕ ಇಸ್ಲಾಂ ಜನಾಂಗದ ಮೇಲೆ ದ್ವೇಷ ಬಿತ್ತುವಂತೆ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನ ರಾಯಭಾರಿ ಆರೋಪಿಸಿದ್ದಾರೆ.
ಇದರ ವಿರುದ್ಧ ಕೆಂಡಾಮಂಡಲ ಆಗಿರುವ ಭಾರತ, ‘ಇಸ್ಲಾಂ ಭಯೋತ್ಪಾದನೆಯನ್ನು ನಿಗ್ರಹಿಸುವ ಮೂಲಕ ಸಮಸ್ತ ವಿಶ್ವವೇ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದರೂ ಪಾಕಿಸ್ತಾನದಲ್ಲಿ ಅದಕ್ಕೆ ಪೋಷಣೆ ಸಿಗುತ್ತಿದೆ. ಅಂಥದ್ದರಲ್ಲಿ ಪಾಕ್ ವಿರುದ್ಧ ಸುಖಾಸುಮ್ಮನೇ ಗೂಬೆ ಕೂರಿಸುತ್ತಿದೆ’ ಎಂದು ತಿರುಗೇಟು ನೀಡಿದೆ.
ಮೊದಲು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉಗ್ರವಾದದ ಬಗ್ಗೆ ಮಾತನಾಡಿದ ಪಾಕಿಸ್ತಾನದ ಪ್ರತಿನಿಧಿ ಮುನೀರ್ ಅಕ್ರಂ, ‘ಭಾರತದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚಳ ಆಗಲು ಇತ್ತೀಚೆಗೆ ಜಾರಿ ಮಾಡಿದ ಸಿಎಎ ಮತ್ತು ರಾಮಮಂದಿರ ಉದ್ಘಾಟನೆ ಇಂಬು ನೀಡಿವೆ’ ಎಂದು ಪ್ರತಿಪಾದಿಸಿದರು
ಇದಕ್ಕೆ ಭಾರತದ ವಿಶ್ವಸಂಸ್ಥೆಯ ಪ್ರತಿನಿಧಿ ರಿಚಿರ ಕಾಮ್‌ಭೋಜ್ ತಿರುಗೇಟು ನೀಡಿ ‘ಆದರೆ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಗ್ರಹಿಸಿ ಭಾರತವೂ ಸೇರಿದಂತೆ ಸಮಸ್ತ ವಿಶ್ವವೇ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ.
ಪಾಕಿಸ್ತಾನವು ಇಸ್ಲಾಮಿಕ್ ಭಯೋತ್ಪಾದಕರನ್ನು ಪೋಷಣೆ ಮಾಡುತ್ತಿರುವುದರಿಂದ ಅಲ್ಲಿನ ಪ್ರಗತಿ ಕುಂಠಿತವಾಗಿದೆ. ಭಾರತದ ವಿಚಾರದಲ್ಲಿ ಪಾಕಿಸ್ತಾನ ಅಪೂರ್ಣ ಸತ್ಯವನ್ನು ಹೇಳಿಕೆ ನೀಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಭಾರತದಲ್ಲಿ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಮಮಂದಿರ ಉದ್ಘಾಟನೆಯಿಂದ ಯಾವುದೇ ಮುಸ್ಲಿಮರಿಗೆ ತೊಂದರೆಯಾಗಿಲ್ಲ. ಎಲ್ಲವನ್ನೂ ಕಾನೂನಾತ್ಮಕವಾಗಿ ಮತ್ತು ಶಾಂತಿ ಸೌಹಾರ್ದತೆಯಿಂದ ಮಾಡಲಾಗಿದೆ’ ಎಂದು ತಿರುಗೇಟು ನೀಡಿದರು.