ಪಾಕಿಸ್ತಾನ ತನ್ನ ಬತ್ತಳಿಕೆಯಲ್ಲಿರುವ ಪರಮಾಣು ಸಾಮರ್ಥ್ಯದ ಅತಿ ಪ್ರಬಲ ಶಾಹೀನ್ ಕ್ಷಿಪಣಿಯನ್ನು ಬಳಸಿತ್ತು. ಆದರೆ ಅದನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಯಾದ ಎಸ್-400 ತಡೆದಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ನವದೆಹಲಿ: ಪಹಲ್ಗಾಂ ನರಮೇಧದ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂದೂರ ಪ್ರತಿಯಾಗಿ ಭಾರತದ ವಿರುದ್ಧ ಭಾರೀ ಪ್ರಮಾಣದ ಡ್ರೋನ್, ಕ್ಷಿಪಣಿ ಶೆಲ್ಲಿಂಗ್ ತೀವ್ರಗೊಳಿಸಿದ್ದ ಪಾಕಿಸ್ತಾನ, ಈ ಹಂತದಲ್ಲಿ ತನ್ನ ಬತ್ತಳಿಕೆಯಲ್ಲಿರುವ ಪರಮಾಣು ಸಾಮರ್ಥ್ಯದ ಅತಿ ಪ್ರಬಲ ಶಾಹೀನ್ ಕ್ಷಿಪಣಿಯನ್ನು ಬಳಸಿತ್ತು. ಆದರೆ ಅದನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಯಾದ ಎಸ್-400 ತಡೆದಿತ್ತು ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಪಾಕ್ ಕಡೆಯಿಂದ ಹಾರಿಬಂದ ಈ ಕ್ಷಿಪಣಿಯನ್ನು ಗಾಳಿಯಲ್ಲೇ ತಡೆದಿದ್ದ ಸುದರ್ಶನ ಚಕ್ರ ಖ್ಯಾತಿಯ ರಷ್ಯಾ ನಿರ್ಮಿತ ಎಸ್-400, ಅದನ್ನು ಗಾಳಿಯಲ್ಲೇ ಧ್ವಂಸ ಮಾಡಿತ್ತು. ಈ ಮೂಲಕ ಸಂಭಾವ್ಯ ಹಾನಿಯನ್ನು ತಡೆಯಲಾಯಿತು ಎಂದು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಬಿಡುಗಡೆ ಮಾಡಿರುವ ವಿಡಿಯೋ ಆಧರಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ.
ಪಾಕಿಸ್ತಾನವೇ ಅಭಿವೃದ್ಧಿಪಡಿಸಿರುವ ಶಾಹೀನ್ ಕ್ಷಿಪಣಿಯು 2,750 ಕಿ.ಮೀ. ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ತಾಕತ್ತು ಹೊಂದಿದೆ. ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದವರೆಗೂ ಸಾಗಬಲ್ಲದಾಗಿದೆ. ಈ ಕ್ಷಿಪಣಿ ಪರಮಾಣು ಮತ್ತು ಸಾಂಪ್ರದಾಯಿಕ ಸಿಡಿತಲೆಗಳನ್ನು ಹತ್ತೊಯ್ಯಲು ಶಕ್ತವಾಗಿದೆ. ಭಾರತದ ಅಗ್ನಿ 3 ಕ್ಷಿಪಣಿಗೆ ಪ್ರತಿಯಾಗಿ ಶಾಹೀನ್ ಕ್ಷಿಪಣಿಯನ್ನು ಪಾಕಿಸ್ತಾನ ಅಭಿವೃದ್ಧಿಪಡಿಸಿ 2015ರ ಮಾರ್ಚ್‌ನಲ್ಲಿ ಮೊದಲ ಬಾರಿ ಪರೀಕ್ಷಿಸಿತ್ತು.
ಇದನ್ನು ಭಾರತದ ಮೇಲೆ ಪ್ರಯೋಗಿಸಿದ ವೇಳೆ ಅದಕ್ಕೆ ಪರಮಾಣು ಸಿಡಿತಲೆ ಅಳವಡಿಸಿರಲಿಲ್ಲ. ಆದರೂ, ಆಗಾಗ ಅಣ್ವಸ್ತ್ರ ಬೆದರಿಗೆ ಒಡ್ಡುತ್ತಿರುವ ಪಾಕಿಸ್ತಾನದ ಕಡೆಯಿಂದ ಸಂಘರ್ಷದಲ್ಲಿ ಇದರ ಬಳಕೆಯಾಗಿರುವುದು ಈಗ ಕಳವಳಕ್ಕೆ ಕಾರಣವಾಗಿದೆ.
2750 ಕಿ.ಮೀ. ರೇಂಜ್‌ನ ಪಾಕ್ ನಿರ್ಮಿತ ಕ್ಷಿಪಣಿ ಶಾಹೀನ್
ಇದು ಭೂಮಿಯಿಂದ ಹಾರಿಸಬಹುದಾದ ಬ್ಯಾಲೆಸ್ಟಿಕ್ ಕ್ಷಿಪಣಿ
ಪರಮಾಣು, ಸಾಂಪ್ರದಾಯಿಕ ಸಿಡಿತಲೆ ಹೊತ್ತೊಯ್ಯಬಲ್ಲದು
ಶಬ್ದಕ್ಕಿಂತ 18 ಪಟ್ಟು ವೇಗ ಚಲಿಸುವ ಸಾಮರ್ಥ್ಯ ಇದಕ್ಕಿದೆ
ಭಾರತದ ಅಂಡಮಾನ್ ಗಡಿವರೆಗೆ ಸಂಚರಿಸಬಲ್ಲದಾಗಿದೆ
ಭಾರತದ ಅಗ್ನಿ 3ಗೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ್ದ ಕ್ಷಿಪಣಿ