ಬಂದವರಿಗೆಲ್ಲ ಆಶ್ರಯ ನೀಡಲು ಭಾರತ ಧರ್ಮ ಶಾಲೆಯಲ್ಲ : ಸುಪ್ರೀಂ

KannadaprabhaNewsNetwork | Updated : May 20 2025, 05:02 AM IST
Follow Us

ಸಾರಾಂಶ

ಜೈಲುಶಿಕ್ಷೆ ಅನುಭವಿಸಿದ ನಂತರ ತನ್ನ ಗಡೀಪಾರು ಪ್ರಶ್ನಿಸಿ ಭಾರತದಲ್ಲೇ ಆಶ್ರಯ ಕೋರಿದ್ದ ಶ್ರೀಲಂಕಾ ಪ್ರಜೆಯೊಬ್ಬನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ನವದೆಹಲಿ: ಜೈಲುಶಿಕ್ಷೆ ಅನುಭವಿಸಿದ ನಂತರ ತನ್ನ ಗಡೀಪಾರು ಪ್ರಶ್ನಿಸಿ ಭಾರತದಲ್ಲೇ ಆಶ್ರಯ ಕೋರಿದ್ದ ಶ್ರೀಲಂಕಾ ಪ್ರಜೆಯೊಬ್ಬನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಅಲ್ಲದೆ, ‘ಭಾರತವು ಪ್ರಪಂಚದಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ನೀಡಲು ಇರುವ ಧರ್ಮಶಾಲೆಯಲ್ಲ’ ಎಂದು ಕಟುವಾಗಿ ನುಡಿದಿದೆ.

ಶ್ರೀಲಂಕಾ ಪ್ರಜೆಯಾಗಿರುವ ಅರ್ಜಿದಾರ, ಲಂಕೆಯ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಸಂಘಟನೆಯೊಂದಿಗೆ ಗುರುತಿಸಿಕೊಂಡು 2015ರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾಗಿದ್ದ. 2018ರಲ್ಲಿ ವಿಚಾರಣಾ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿ 10 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. 2022ರಲ್ಲಿ, ಮದ್ರಾಸ್ ಹೈಕೋರ್ಟ್ ಶಿಕ್ಷೆಯನ್ನು 7 ವರ್ಷಗಳಿಗೆ ಕಡಿತಗೊಳಿಸಿ, ಶಿಕ್ಷೆ ಮುಗಿದ ತಕ್ಷಣ ದೇಶ ತೊರೆಯುವಂತೆ ಆದೇಶಿಸಿತ್ತು. ಆದರೆ ಶಿಕ್ಷೆ ಮುಗಿದ ಬಳಿಕ, ಶ್ರೀಲಂಕಾದಲ್ಲಿ ತನಗೆ ಜೀವ ಬೆದರಿಕೆ ಇದೆ ಎಂಬ ನೆಪವೊಡ್ಡಿ ಭಾರತ ತೊರೆಯಲು ನಿರಾಕರಿಸಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ, ‘ನಾವು ಭಾರತದಲ್ಲಿರುವ 140 ಕೋಟಿ ಜನಸಂಖ್ಯೆಯೊಂದಿಗೆ ಕಷ್ಟಪಡುತ್ತಿದ್ದೇವೆ. ಇದು ಎಲ್ಲೆಡೆಯಿಂದ ಬರುವ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ. ಇಲ್ಲಿ ನೆಲೆಸಲು ನಿಮಗೆ ಯಾವ ಹಕ್ಕಿದೆ?’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.

ಏನಿದು ಪ್ರಕರಣ?

ಎಲ್‌ಟಿಟಿಇ ನಂಟಿನ ಹಿನ್ನೆಲೆ ಲಂಕಾ ಪ್ರಜೆಗೆ 2015ರಲ್ಲಿ 10 ವರ್ಷ ಜೈಲು

2022ರಲ್ಲಿ ಈತನ ಶಿಕ್ಷೆ 7 ವರ್ಷಕ್ಕೆ ಇಳಿಸಿ ಮದ್ರಾಸ್‌ ಹೈಕೋರ್ಟ್‌ ಆದೇಶ

ಬಿಡುಗಡೆ ಬಳಿಕ ತಕ್ಷಣ ದೇಶ ತೊರೆಯುವಂತೆ ಆದೇಶಿಸಿದ್ದ ನ್ಯಾಯಾಲಯ

ಆದರೆ ಲಂಕಾದಲ್ಲಿ ಜೀವ ಬೆದರಿಕೆ ಎಂದು ದೇಶ ತೊರೆಯಲು ಆತನ ನಕಾರ

ಭಾರತದಲ್ಲೇ ಉಳಿಯಲು ಅವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ

ವಿಚಾರಣೆ ವೇಳೆ ನಾವೇ 140 ಕೋಟಿ ಜನಸಂಖ್ಯೆಯೊಂದಿಗೆ ಕಷ್ಟದಲ್ಲಿದ್ದೇವೆ

ವಿದೇಶಿಯರಿಗೆ ಆಶ್ರಯ ನೀಡಲು ಭಾರತ ಧರ್ಮಶಾಲೆಯಲ್ಲ ಎಂದು ಅರ್ಜಿ ವಜಾ

Read more Articles on