ಲೋಕಸಭೆ ಚುನಾವಣೆ ವೇಳೆ ಒಗ್ಗಟ್ಟಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಸೆಣಸಿ ಪ್ರಬಲ ಸ್ಪರ್ಧೆ ನೀಡಿದ್ದ ಇಂಡಿಯಾ ಕೂಟವು ದೆಹಲಿ ಚುನಾವಣೆಯಲ್ಲಿಯೂ ಅದನ್ನೇ ಮುಂದುವರೆಸಿಕೊಂಡು ಬಂದಿದ್ದರೆ, 14 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಬಹುದಿತ್ತು.
ನವದೆಹಲಿ: ಲೋಕಸಭೆ ಚುನಾವಣೆ ವೇಳೆ ಒಗ್ಗಟ್ಟಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಸೆಣಸಿ ಪ್ರಬಲ ಸ್ಪರ್ಧೆ ನೀಡಿದ್ದ ಇಂಡಿಯಾ ಕೂಟವು ದೆಹಲಿ ಚುನಾವಣೆಯಲ್ಲಿಯೂ ಅದನ್ನೇ ಮುಂದುವರೆಸಿಕೊಂಡು ಬಂದಿದ್ದರೆ, 14 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಬಹುದಿತ್ತು. ಕಾಂಗ್ರೆಸ್ ಹಾಗೂ ಆಪ್ ಒಟ್ಟಾಗಿದ್ದರೆ ಬಿಜೆಪಿಯನ್ನು ಕಟ್ಟಿಹಾಕಬಹುದಿತ್ತು ಎಂದು ವಿಶ್ಲೇಷಣೆ ಕೇಳಿಬಂದಿದೆ.
ದೆಹಲಿಯಲ್ಲಿ ಕಾಂಗ್ರೆಸ್‌ಗೆ ಅಷ್ಟಾಗಿ ನೆಲೆ ಇಲ್ಲದಿದ್ದರೂ, ಆಪ್ ಕಳೆದ 10 ವರ್ಷದಿಂದ ಆಳ್ವಿಕೆ ನಡೆಸಿ ಜನಪ್ರಿಯವಾಗಿತ್ತು. ಹೀಗಾಗಿ, ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದರೆ ಏಕಾಂಗಿ ಬಿಜೆಪಿಯನ್ನು 14 ಕ್ಷೇತ್ರಗಳಲ್ಲಿ ಹಿಂದಿಕ್ಕಬಹುದಿತ್ತು. ಇದಕ್ಕೆ ಪೂರಕವೆಂವಂತೆ ಹಲವು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರವು, ಆಪ್ - ಕಾಂಗ್ರೆಸ್ ಒಟ್ಟಾಗಿ ಪಡೆದ ಮತಕ್ಕಿಂತ ಭಾರೀ ಕಡಿಮೆ ಇದೆ.
ಅಂದರೆ ಆಪ್- ಕಾಂಗ್ರೆಸ್ ಒಂದಾಗಿದ್ದರೆ ಹಲವು ಕ್ಷೇತ್ರಗಳು ಇಂಡಿ ಕೂಟದ ಪಾಲಾಗುವ ಎಲ್ಲಾ ಸಾಧ್ಯತೆಗಳಿದ್ದವು.ಆದರೆ ಪಂಜಾಬ್‌ನಂತೆ ಇಲ್ಲಿಯೂ ಏಕಾಂಗಿ ಗೆಲುವು ಸಾಧಿಸುವ ಹಠ ಹೊತ್ತ ಆಪ್, ಕಾಂಗ್ರೆಸ್ ಅನ್ನು ದೂರವಿಟ್ಟು ಏಕಾಂಗಿಯಾಗಿ ಕಣಕ್ಕೆ ಇಳಿದಿತ್ತು. ಹೀಗಾಗಿ ಕಾಂಗ್ರೆಸ್ ಕೂಡಾ ಅನಿವಾರ್ಯವಾಗಿ ಏಕಾಂಗಿಯಾಗಿ ಕಣಕ್ಕೆ ಇಳಿದು ಹೀನಾಯ ಸೋಲು ಕಂಡಿದೆ.ಕಳೆದ ವರ್ಷ ಅ.5ರಂದು ನಡೆದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲೂ ಕೂಟದ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದವು.
ಇಂಡಿ ನಾಯಕತ್ವ ತೊರೆಯಲು ಕಾಂಗ್ರೆಸ್‌ಗೆ ಮತ್ತಷ್ಟು ಒತ್ತಡ?
ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಿ, ಸೋಲಿಸಲು ರಚನೆಯಾದ ವಿಪಕ್ಷಗಳ ಇಂಡಿಯಾ ಕೂಟದ ಬಿರುಕು ಈಗಾಗಲೇ ಜಗಜ್ಜಾಹಿರ. ಕೂಟ ಮುನ್ನಡೆಸಲು ಕಾಂಗ್ರೆಸ್ ವಿಫಲವಾಗಿದೆ. ಹೀಗಾಗಿ ಅದು ನಾಯಕತ್ವ ತೊರೆಯುವುದು ಸೂಕ್ತ ಎಂದು ಈಗಾಗಲೇ ಮೈತ್ರಿ ಕೂಟದಲ್ಲಿ ಹಲವು ಬಾರಿ ಬಹಿರಂಗವಾಗಿಯೇ ಕರೆ ಕೇಳಿಬಂದಿದೆ.
ಅದರ ಬೆನ್ನಲ್ಲೇ ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ಕಂಡಿದೆ. ಇದೀಗ ದೆಹಲಿಯಲ್ಲೂ ಕಾಂಗ್ರೆಸ್‌ನ ಹೀನಾಯ ಸೋಲಿನ ಬಳಿಕ ಇಂಡಿಯಾ ಕೂಟದ ನಾಯಕತ್ವ ತೊರೆಯುವ ಆಗ್ರಹ ಇನ್ನೂ ತೀವ್ರಗೊಳ್ಳುವ ನಿರೀಕ್ಷೆಯಿದೆ.ಈಗಾಗಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೇ ಇಂಡಿಯಾ ಕೂಟದ ನಾಯಕಿಯಾಗಲಿ ಎಂಬ ಟಿಎಂಸಿ ಆಗ್ರಹಕ್ಕೆ ಸಮಾಜವಾದಿ ಪಕ್ಷ, ಆರ್‌ಜೆಡಿ, ಉದ್ಧವ್‌ರ ಶಿವಸೇನೆ ಕೂಡ ಬೆಂಬಲ ವ್ಯಕ್ತಪಡಿಸಿವೆ. ಕೇಜ್ರಿವಾಲ್ ಕೂಡ ಇಂಡಿಯಾದ ನಾಯಕ ಸ್ಥಾನಕ್ಕೇರಲು ಅರ್ಹ ಎಂದು ಹಲವು ಪಕ್ಷಗಳು ಪ್ರತಿಪಾದಿಸಿದ್ದವು. ಈ ಆ ಕೂಗು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ತಾಯಿ ಸೋಲಿಗೆ ಸೇಡು ತೀರಿಸಿಕೊಂಡ ಸಂದೀಪ್ ದೀಕ್ಷಿತ್!
ನವದೆಹಲಿ: ಸತತ 15 ವರ್ಷ ದೆಹಲಿಯಲ್ಲಿ ಕಾಂಗ್ರೆಸ್ ಮುನ್ನಡೆಸಿದ್ದು ಅಂದಿನ ಸಿಎಂ ಶೀಲಾ ದೀಕ್ಷಿತ್. ಆದರೆ 2013ರಲ್ಲಿ ಮೊದಲ ಬಾರಿಗೆ ಆಪ್ ನಾಯಕ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶೀಲಾ ದೀಕ್ಷಿತ್ ಸೋಲಿಸುವ ಮೂಲಕ ರಾಜಧಾನಿಯಲ್ಲಿ ಕಾಂಗ್ರೆಸ್ ಸೋಲಿಗೆ ಮುನ್ನುಡಿ ಬರೆದಿದ್ದು. ಸರಿಯಾಗಿ 22 ವರ್ಷಗಳ ಬಳಿಕ ಅದೇ ಕ್ಷೇತ್ರದಲ್ಲಿ ಅದೇ ಕೇಜ್ರಿವಾಲ್‌ರನ್ನು ಶೀಲಾರ ಪುತ್ರ ಸಂದೀಪ್ ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ.ನವದೆಹಲಿ ಕ್ಷೇತ್ರದಲ್ಲಿ ಗೆದ್ದಿದ್ದು ಬಿಜೆಪಿಯ ಪರ್ವೇಷ್ ವರ್ಮಾ, ವರ್ಮಾ ಕೇಜ್ರಿವಾಲ್‌ರನ್ನು ಕೇವಲ 4089 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇನ್ನೊಂದೆಡೆ ಸಂದೀಪ್ ದೀಕ್ಷಿತ್ 4568 ಮತ ಪಡೆದು ಕೇಜ್ರಿ ಸೋಲಿಗೆ ನೇರವಾಗಿ ಕಾರಣವಾಗಿದ್ದಾರೆ.