ನೆರೆಯ ಆಪ್ತ ದೇಶವಾದ ಭೂತಾನ್‌ಗೆ ರೈಲು ಸಂಪರ್ಕ ಕಲ್ಪಿಸಲು ಭಾರತ ಸರ್ಕಾರ ಮುಂದಾಗಿದೆ. ಈ ಯೋಜನೆ ಜಾರಿ ಬಳಿಕ ಪುಟ್ಟ ದೇಶ ಭೂತಾನ್ ಮೊದಲ ಬಾರಿಗೆ ರೈಲ್ವೆ ಸಂಪರ್ಕ ಪಡೆದ ಸಂಭ್ರಮಕ್ಕೆ ಪಾತ್ರವಾಗಲಿದೆ.
ನವದೆಹಲಿ: ಕೆಲ ಈಶಾನ್ಯ ರಾಜ್ಯಗಳಲ್ಲಿನ ಆಂತರಿಕ ಬಿಕ್ಕಟ್ಟಿನ ಪರಿಣಾಮ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ನನೆಗುದಿಗೆ ಬಿದ್ದಿರುವ ನಡುವೆಯೇ, ಮತ್ತೊಂದು ನೆರೆಯ ಆಪ್ತ ದೇಶವಾದ ಭೂತಾನ್‌ಗೆ ರೈಲು ಸಂಪರ್ಕ ಕಲ್ಪಿಸಲು ಭಾರತ ಸರ್ಕಾರ ಮುಂದಾಗಿದೆ. ಈ ಯೋಜನೆ ಜಾರಿ ಬಳಿಕ ಪುಟ್ಟ ದೇಶ ಭೂತಾನ್ ಮೊದಲ ಬಾರಿಗೆ ರೈಲ್ವೆ ಸಂಪರ್ಕ ಪಡೆದ ಸಂಭ್ರಮಕ್ಕೆ ಪಾತ್ರವಾಗಲಿದೆ.
ಭಾರತ ಮತ್ತು ಭೂತಾನ್ ಅನ್ನು ಸಂಪರ್ಕಿಸುವ 69 ಕಿ.ಮೀ. ಉದ್ದದ ಪ್ರಸ್ತಾವಿತ ಹೊಸ ರೈಲು ಮಾರ್ಗದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. 3,500 ಕೋಟಿ ರು.ಗಳ ಈ ಯೋಜನೆಯು ಪಶ್ಚಿಮ ಅಸ್ಸಾಂನ ಕೊಕ್ರಝಾರ್ ಪಟ್ಟಣವನ್ನು ಭೂತಾನ್‌ನ ಗೆಲೆಫು ಪಟ್ಟಣದೊಂದಿಗೆ ಸಂಪರ್ಕಿಸಲಿದೆ. ಇದು ಭೂತಾನ್‌ನೊಂದಿಗೆ ವ್ಯಾಪಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ವಿನಿಮಯ ಹಾಗೂ ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.
‘ಈ ಯೋಜನೆಯು ಬಾಲಜನ್, ಗರುಭಾಸ, ರುಣಿಖಾತ, ಶಾಂತಿಪುರ, ದದ್ಗಿರಿ ಮತ್ತು ಗೆಲೆಫು(ಭೂತಾನ್)ನಲ್ಲಿ 6 ನಿಲ್ದಾಣಗಳನ್ನು ಒಳಗೊಂಡಿರುತ್ತದೆ. ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದು, ಡಿಪಿಆರ್ ಅನ್ನು ಅಗತ್ಯ ನಿರ್ದೇಶನಗಳಿಗಾಗಿ ಮೇಲಧಿಕಾರಿಗಳಿಗೆ ಕಳಿಸಲಾಗಿದೆ’ ಎಂದು ಈಶಾನ್ಯ ಗಡಿನಾಡು ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಪಿಂಜಲ್ ಕಿಶೋರ್ ಶರ್ಮಾ ತಿಳಿಸಿದ್ದಾರೆ.
ಬಾಂಗ್ಲಾ, ಮ್ಯಾನ್ಮಾರ್ ರೈಲು ಸಂಪರ್ಕ ನನೆಗುದಿಗೆ:
ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ರೈಲು ಸಂಪರ್ಕ ಕಲ್ಪಿಸುವ ಭಾರತದ ಯೋಜನೆಗಳು ನನೆಗುದಿಗೆ ಬಿದ್ದಿವೆ. ತ್ರಿಪುರಾದ ಅಗರ್ತಲಾ ಮತ್ತು ಬಾಂಗ್ಲಾದ ಅಖೌರಾ ಪಟ್ಟಣದ ನಡುವಿನ ರೈಲು ಮಾರ್ಗ ನಿರ್ಮಾಣ ಹಂತದಲ್ಲಿತ್ತು. ಆದರೆ ಜುಲೈ 2024ರಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ನಂತರ ರಾಜಕೀಯ ಪ್ರಕ್ಷುಬ್ಧತೆಯ ಕಾರಣ ಕಾರ್ಯ ಸ್ಥಗಿತಗೊಂಡಿದೆ. ಅದೇ ರೀತಿ, 2021ರಿಂದ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಮತ್ತು ಪ್ರಜಾಪ್ರಭುತ್ವಪರ ಪ್ರತಿಭಟನಾಕಾರರ ನಡುವಿನ ಸಂಘರ್ಷದ ಕಾರಣ ಗಡಿಯಲ್ಲಿ ಬಿಕ್ಕಟ್ಟು ಏರ್ಪಟ್ಟಿದೆ. ಹಾಗಾಗಿ ಆ ಯೋಜನೆಯೂ ಸ್ಥಗಿತಗೊಂಡಿದೆ.