ನವದೆಹಲಿ: ಇತ್ತೀಚಿನ ಭಾರತದ-ಪಾಕ್ ಸಂಘರ್ಷದ ವೇಳೆ ಪಾಕಿಸ್ತಾನದ ಪರವಾಗಿ ನಿಂತು ಅದಕ್ಕೆ ಸೇನಾ ನೆರವು ನೀಡಿದ್ದ ಮಿತ್ರದ್ರೋಹಿ ಟರ್ಕಿ ವಿರುದ್ಧ ಇದೀಗ ದೇಶದಲ್ಲಿ ‘ಬಾಯ್ಕಾಟ್ ಅಭಿಯಾನ’ (ಬಹಿಷ್ಕಾರ ಅಭಿಯಾನ) ಆರಂಭವಾಗಿದೆ. ಕಷ್ಟದಲ್ಲಿ ನೆರವಾದ ಭಾರತವನ್ನು ಮರೆತ ಟರ್ಕಿ ಮತ್ತು ಅಜರ್‌ಬೈಜಾನ್ ಜೊತೆಗಿನ ಎಲ್ಲಾ ಸಂಬಂಧ ಕಡಿತ ಮಾಡಬೇಕೆಂದು ದೊಡ್ಡಮಟ್ಟದಲ್ಲಿ ಕೂಗು ಕೇಳಿಬಂದಿದೆ.
ಈ ಹಿಂದೆ ಮಾಲ್ಡೀವ್ಸ್ ನೀಡಿದ್ದ ಆರ್ಥಿಕ ಹೊಡೆತವನ್ನು ಇದೀಗ ಪಾಕಿಸ್ತಾನದ ಮಿತ್ರ ದೇಶಗಳಿಗೂ ವಿಸ್ತರಿಸಿ ಪಾಠ ಕಲಿಸಬೇಕೆಂಬ ಆಗ್ರಹ ಜನ ಸಾಮಾನ್ಯರಿಂದ ಕೇಳಿಬಂದಿದೆ.
ಅದರ ಬೆನ್ನಲ್ಲೇ ಭಾರತ ವಿರೋಧಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಟರ್ಕಿಯ ಟಿಆರ್‌ಟಿ ವರ್ಡ್ ಎಂಬ ಸುದ್ದಿ ಮಾಧ್ಯಮವೊಂದರ ಎಕ್ಸ್ ಖಾತೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ಮತ್ತೊಂದೆಡೆ ಟರ್ಕಿ, ಅಜರ್‌ಬೈಜಾನ್ ಪ್ರವಾಸ ಕೈಬಿಡಿ ಎಂದು ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.
ಪ್ರವಾಸ ರದ್ದು, ಆಮದು ನಿರ್ಬಂಧ:
ಪರಿಣಾಮ ಪ್ರವಾಸಿ ಸೇವೆ ನೀಡುವ ಹಲವು ಸಂಸ್ಥೆಗಳು ಈ ದೇಶಗಳಿಗೆ ಪ್ರವಾಸ ಸೇವೆ ರದ್ದು ಮಾಡಿವೆ. ಇನ್ನೊಂದೆಡೆ ಈ ಎರಡೂ ದೇಶಗಳಿಗೆ ಈಗಾಗಲೇ ಪ್ರವಾಸ ಬುಕ್ ಮಾಡಿದ್ದವರ ಪೈಕಿ ಭಾರೀ ಪ್ರಮಾಣದಲ್ಲಿ ಜನತೆ ಪ್ರವಾಸ ರದ್ದು ಮಾಡಿದ್ದಾರೆ. ಮತ್ತೊಂದೆಡೆ ಟರ್ಕಿಯಿಂದ ಆಮದು ಮಾಡಿಕೊಳ್ಳುವ ಒಣಹಣ್ಣು, ಸೇಬು, ಅಮೃತಶಿಲೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗುವುದು ಎಂದು ದೇಶದ ವಿವಿಧ ಭಾಗಗಳ ಹಲವು ಉದ್ಯಮ ಸಂಘಟನೆಗಳು ಘೋಷಿಸಿವೆ. ಇದರ ಜೊತೆಗೆ, ಎರಡೂ ದೇಶಗಳಲ್ಲಿ ಯಾವುದೇ ಚಲನಚಿತ್ರಗಳ ಚಿತ್ರೀಕರಣಕ್ಕೆ ಮುಂದಾಗಬಾರದು ಎಂದು ಭಾರತೀಯ ಚಲನಚಿತ್ರ ಕಲಾವಿದರ ಸಂಘಟನೆ, ಚಿತ್ರ ನಿರ್ಮಾಪಕರಿಗೆ ಮನವಿ ಮಾಡಿದೆ.
ಅಂತೆಯೇ, ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಮತ್ತು ಉದ್ಧವ್ ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿಯವರು, ‘ಟರ್ಕಿಯಲ್ಲಿ ಡೆಸ್ಟಿನೇಷನ್ ಮದುವೆ ಏರ್ಪಡಿಸಬೇಡಿ’ ಎಂದು ಕರೆ ನೀಡಿದ್ದಾರೆ.
ಟರ್ಕಿಗೆ ಏನು ಹೊಡೆತ?:
ಒಂದು ವೇಳೆ ಭಾರತೀಯರು ಟರ್ಕಿ, ಅಜರ್‌ಬೈಜಾನ್ ಪ್ರವಾಸೋದ್ಯಮಕ್ಕೆ ಹೊಡೆತ ನೀಡಲು ನಿರ್ಧರಿಸಿದರೆ ಎರಡೂ ದೇಶಗಳು ವಾರ್ಷಿಕ ಅಂದಾಜು 4500 ಕೋಟಿ ರು. ನಷ್ಟ ಅನುಭವಿಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ಭಾರತ, ಟರ್ಕಿ ಮತ್ತು ಅಜರ್‌ಬೈಜಾನ್ ನಡುವೆ ವಾರ್ಷಿಕ 67000 ಕೋಟಿ ರು. ವಹಿವಾಟು ನಡೆಯುತ್ತಿದ್ದು, ಸರ್ಕಾರ ಇದರಲ್ಲೂ ಹೊಡೆತ ನೀಡಲು ಮುಂದಾದರೆ, ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಎರಡು ದೇಶಗಳು ಪರಿತಪಿಸಬೇಕಾಗಿ ಬರಲಿದೆ ಎಂದು ಅಂದಾಜಿಸಲಾಗಿದೆ.
ಮಾಲ್ಡೀವ್ಸ್‌ಗೂ ನೀಡಿತ್ತು ಏಟು:
ಈ ಹಿಂದೆ ಭಾರತ ಸರ್ಕಾರ, ಮೋದಿ ವಿರುದ್ಧ ಪ್ರವಾಸೋದ್ಯಮನ್ನೇ ನಂಬಿದ್ದ ಮಾಲ್ಡೀವ್ಸ್ ಸರ್ಕಾರ ಮತ್ತು ಅಲ್ಲಿನ ಸಚಿವರೊಬ್ಬರು ಟೀಕೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಮಾಲ್ಡೀವ್ಸ್ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳ ಮೂಲಕ ಪೆಟ್ಟು ನೀಡಿತ್ತು. ಜೊತೆಗೆ ಭಾರತೀಯರು ಪ್ರವಾಸ ರದ್ದು ಮೂಲಕ ಆ ದೇಶಕ್ಕೆ ಭಾರೀ ಪೆಟ್ಟು ನೀಡಿದ್ದರು. ಅದಾದ ಬಳಿಕ ಪಾಠ ಕಲಿತ ಮಾಲ್ಡೀವ್ಸ್ ಭಾರತದ ಕ್ಷಮೆ ಕೋರಿ ತೆಪ್ಪಗಾಗಿತ್ತು.
ಟರ್ಕಿ ಮೆಲೆ ಯಾವ ನಿರ್ಬಂಧ
- ಮಿತ್ರದ್ರೋಹಿ ಟರ್ಕಿ, ಅಜರ್‌ಬೈಜಾನ್‌ಗೆ ಪಾಠ ಕಲಿಸಲು ಹೆಚ್ಚಿದ ಒತ್ತಡ
- ಭಾರತೀಯರಿಂದ ಪ್ರವಾಸ ರದ್ದು, ಟರ್ಕಿ ಉತ್ಪನ್ನಗಳ ಮೇಲೆ ಬಹಿಷ್ಕಾರ
- ಸೇಬು, ಒಣಹಣ್ಣು, ಮಾರ್ಬಲ್ಸ್ ಆಮದು ಸ್ಥಗಿತಕ್ಕೆ ವ್ಯಾಪಾರಿಗಳ ನಿರ್ಧಾರ
- ಟರ್ಕಿಯಲ್ಲಿ ಡೆಸ್ಟಿನೇಷನ್ ಮದುವೆ ಏರ್ಪಡಿಸಬೇಡಿ ಎಂದು ಕೂಗು
- ಟರ್ಕಿಯಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕೂ ಭಾರತೀಯರ ಹಿಂದೇಟು
- ಇನ್ನೊಂದೆಡೆ ಟರ್ಕಿ ಸರ್ಕಾರದ ಮಾಧ್ಯಮಗಳ ಮೇಲೆ ಭಾರತದ ನಿರ್ಬಂಧ
- ಭಾರತೀಯರ ನಡೆಯಿಂದ ಆ ದೇಶಗಳಿಗೆ 4500 ಕೋಟಿ ರು. ನಷ್ಟ