;Resize=(412,232))
ಎಂ.ಎಲ್. ಲಕ್ಷ್ಮೀಕಾಂತ್
ಬೇತೂಲ್ (ದಕ್ಷಿಣ ಗೋವಾ) : ಇಂಧನ ಭದ್ರತೆಯಿಂದ ಭಾರತ ಈಗ ಇಂಧನ ಸ್ವಾತಂತ್ರ್ಯದತ್ತ ದಾಪುಗಾಲು ಹಾಕುತ್ತಿದೆ. ಭಾರತದಲ್ಲಿರುವ ಬೃಹತ್ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಆರ್ಥಿಕ ಪ್ರಗತಿಯಿಂದಾಗಿ ಪೆಟ್ರೋ ಕೆಮಿಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ಹೀಗಾಗಿ ದೇಶದ ಇಂಧನ ಕ್ಷೇತ್ರದಲ್ಲಿ ಅಗಾಧ ಅವಕಾಶಗಳಿದ್ದು, ಹೂಡಿಕೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ತೈಲೋದ್ಯಮಿಗಳಿಗೆ ಕರೆ ನೀಡಿದ್ದಾರೆ.
ಗೋವಾದ ಬೇತೂಲ್‌ನ ಒಎನ್‌ಜಿಸಿ ಕ್ಯಾಂಪಸ್‌ನಲ್ಲಿ ಆಯೋಜನೆಗೊಂಡಿರುವ ನಾಲ್ಕು ದಿನಗಳ ‘ಇಂಡಿಯಾ ಎನರ್ಜಿ ವೀಕ್’ನ ಮೊದಲ ದಿನವಾದ ಮಂಗಳವಾರ ವರ್ಚುವಲ್ ಆಗಿ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಸದ್ಯ ಭಾರತ ಟಾಪ್ 5 ತೈಲ ರಫ್ತು ದೇಶವಾಗಿದ್ದು, 150 ದೇಶಗಳಿಗೆ ಭಾರತದಿಂದ ತೈಲ ರಫ್ತಾಗುತ್ತಿದೆ. ತೈಲ ಸಂಸ್ಕರಣೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದ್ದು, ಸದ್ಯದಲ್ಲೇ ಮೊದಲ ಸ್ಥಾನಕ್ಕೇರಲಿದೆ ಎಂದು ಹೇಳಿದರು.
ದೇಶದ ಇಂಧನ ವಲಯದಲ್ಲಿ 500 ಬಿಲಿಯನ್ ಡಾಲರ್ (45 ಲಕ್ಷ ಕೋಟಿ ರು.) ಹೂಡಿಕೆಗೆ ಅವಕಾಶಗಳು ಇವೆ. ತೈಲ ಹಾಗೂ ನೈಸರ್ಗಿಕ ಅನಿಲ ವಲಯದಲ್ಲಿನ ಹೂಡಿಕೆ ಮೊತ್ತವನ್ನು 2030ರೊಳಗೆ 100 ಬಿಲಿಯನ್ ಡಾಲರ್ (9 ಲಕ್ಷ ಕೋಟಿ ರು.)ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ತೈಲ ಸಂಸ್ಕರಣೆ, ಎಲ್‌ಎನ್‌ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಮೂಲಸೌಕರ್ಯ, ನಗರ ಅನಿಲ ವಿತರಣೆ ಹಾಗೂ ತೈಲ ಮತ್ತು ಅನಿಲ ಸಂಶೋಧನಾ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಿ. ಕಳೆದ ವರ್ಷ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಬಂದಿದ್ದ ಸಲಹೆ ಆಧರಿಸಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ತೈಲ ನಿಕ್ಷೇಪ ಶೋಧ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಕಂಪನಿಯ ಲಾಭವೂ ಹೆಚ್ಚಲಿದೆ ಎಂದು ಹುರಿದುಂಬಿಸಿದರು.
ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಯುಎಜಿ ಕೈಗಾರಿಕಾ ಸಚಿವ ಸುಲ್ತಾನ್ ಅಹಮದ್ ಅಲ್ ಜಾಬೇರ್ ಇದ್ದರು.2023ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಇಂಡಿಯಾ ಎನರ್ಜಿ ವೀಕ್ ಈಗ ಭಾರತದ ಪ್ರತಿಷ್ಠಿತ ಜಾಗತಿಕ ಇಂಧನ ವಸ್ತು ಪ್ರದರ್ಶನ ಹಾಗೂ ಸಮ್ಮೇಳನವಾಗಿದೆ. 2ನೇ ಆವೃತ್ತಿ ಗೋವಾ, 3ನೇ ಆವೃತ್ತಿ ದೆಹಲಿ ಹಾಗೂ 4ನೇ ಆವೃತ್ತಿ ಗೋವಾದಲ್ಲಿ ಆಯೋಜನೆಯಾಗಿದೆ. 120 ದೇಶಗಳ, ಇಂಧನ ಕ್ಷೇತ್ರದ 75000 ವೃತ್ತಿಪರರು 4ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಾರೆ.