ಅಮೆರಿಕಕ್ಕೆ ಭಾರತೀಯ ಸೇನೆ ನೇರಾನೇರ ತಿರುಗೇಟು!

KannadaprabhaNewsNetwork |  
Published : Aug 05, 2025, 11:45 PM IST
ಸೇನೆಯ ಟ್ವೀಟ್‌ | Kannada Prabha

ಸಾರಾಂಶ

‘ರಷ್ಯಾದಿಂದ ತೈಲ ಆಮದು ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಬೆಂಬಲ ನೀಡುತ್ತಿದೆ’ ಎಂದು ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ, 1971ರ ಭಾರತ- ಪಾಕ್‌ ಯುದ್ಧದ ಘಟನೆ ನೆನಪಿಸುವ ಮೂಲಕ ಭಾರತೀಯ ಸೇನೆ ಭರ್ಜರಿ ತಿರುಗೇಟು ನೀಡಿದೆ.

- 71ರ ಸಮರದಲ್ಲಿ ಪಾಕ್‌ಗೆ ಅಮೆರಿಕ ನೆರವು

- ವರದಿ ಪ್ರದರ್ಶಿಸಿ ಟ್ರಂಪ್‌ಗೆ ದಿಟ್ಟ ಉತ್ತರ

=

- ಭಾರತ ಸೇನೆ ಹೇಳಿದ್ದೇನು?

- ರಷ್ಯಾಗೆ ಭಾರತದ ಬೆಂಬಲ ಎಂಬ ಟ್ರಂಪ್‌ ಹೇಳಿಕೆಗೆ ಭಾರತ ಸೇನೆ ತಿರುಗೇಟು

- 1971ರ ಭಾರತ- ಪಾಕ್‌ ಯುದ್ಧದಲ್ಲಿ ಪಾಕ್‌ಗೆ ಅಮೆರಿಕ ಸಹಾಯ ಮಾಡಿತ್ತು

- 1954-71ರ ಅವಧಿಯಲ್ಲಿ ಪಾಕ್‌ಗೆ ಅಮೆರಿಕದಿಂದ ₹17500 ಕೋಟಿ ಶಸ್ತ್ರಾಸ್ತ್ರ

- 1971ರಲ್ಲಿ ಈ ಬಗ್ಗೆ ಪ್ರಕಟವಾಗಿದ್ದ ವರದಿ ಪ್ರದರ್ಶಿಸಿದ ಭಾರತೀಯ ಸೇನೆ

- ಭಾರತ ಸೇನೆ ಈ ರೀತಿ ಅಮೆರಿಕಕ್ಕೆ ನೇರಾನೇರ ಎದಿರೇಟು ನೀಡಿದ್ದು ಅಪರೂಪ

===ನವದೆಹಲಿ: ‘ರಷ್ಯಾದಿಂದ ತೈಲ ಆಮದು ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಬೆಂಬಲ ನೀಡುತ್ತಿದೆ’ ಎಂದು ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ, 1971ರ ಭಾರತ- ಪಾಕ್‌ ಯುದ್ಧದ ಘಟನೆ ನೆನಪಿಸುವ ಮೂಲಕ ಭಾರತೀಯ ಸೇನೆ ಭರ್ಜರಿ ತಿರುಗೇಟು ನೀಡಿದೆ. 1971ರ ಯುದ್ಧದಲ್ಲಿ ಅಮೆರಿಕ ನೇರವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಮತ್ತು 1954-71ರ ಅವಧಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕವು 17500 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ನೀಡಿದ ಅಂಶಗಳನ್ನು ಉದಾಹರಿಸಿ ಸೇನೆ ಟ್ರಂಪ್‌ಗೆ ನೀತಿ ಪಾಠ ಮಾಡಿದೆ.

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮರದ ವೇಳೆ ವಿದೇಶಾಂಗ ಸಚಿವಾಲಯ ಅಥವಾ ಸಚಿವರು ಪ್ರತಿಕ್ರಿಯೆ ನೀಡುವುದು ಸಾಮಾನ್ಯವಾದರೂ ಅಪರೂಪದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆ ನೇರವಾಗಿ ಟ್ರಂಪ್‌ಗೆ ಕನ್ನಡಿ ಹಿಡಿಯುವ ಯತ್ನ ಮಾಡಿದೆ.

ಭಾರತೀಯ ಸೇನೆಯ ಎಕ್ಸ್‌ ಹ್ಯಾಂಡಲ್‌ನಲ್ಲಿ ಮಂಗಳವಾರ ಹಳೆಯ ವರದಿಯೊಂದನ್ನು ಪ್ರಕಟಿಸಲಾಗಿದೆ. 1971ರ ಆಗಸ್ಟ್‌ ತಿಂಗಳ ಈ ನ್ಯೂಸ್‌ಕ್ಲಿಪ್‌ನಲ್ಲಿ ಅಮೆರಿಕವು 1954ರಿಂದ ಪಾಕಿಸ್ತಾನಕ್ಕೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪೂರೈಸಿದ್ದ ವಿಚಾರ ಉಲ್ಲೇಖವಾಗಿದೆ. ಸೇನೆಯ ಈಸ್ಟರ್ನ್‌ ಕಮಾಂಡ್‌ ವಿಭಾಗವು, ‘#ಇಂಡಿಯನ್‌ ಆರ್ಮಿ #ಈಸ್ಟರ್ನ್‌ ಕಮಾಂಡ್‌ # ವಿಜಯ್‌ ವರ್ಷ #ಲಿಬರೇಷನ್‌ ಆಫ್‌ ಬಾಂಗ್ಲಾದೇಶ್‌ # ಮೀಡಿಯಾ ಹೈಲೈಟ್ಸ್‌’ ಹ್ಯಾಷ್‌ ಟ್ಯಾಗ್‌ನೊಂದಿಗೆ ಈ ನ್ಯೂಸ್‌ ಕ್ಲಿಪ್‌ ಹಂಚಿಕೊಂಡಿದೆ.

ಅಮೆರಿಕವು 1954ರಿಂದ 17,500 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಪೂರೈಸಿದೆ ಎಂಬ ತಲೆಬರೆಹದ ಈ ಸುದ್ದಿ, 1971ರ ಭಾರತ-ಪಾಕ್‌ ಯುದ್ಧದ ಕೆಲ ತಿಂಗಳುಗಳ ಮೊದಲು ಪ್ರಕಟವಾಗಿತ್ತು. ಈ ವರದಿ 2 ದಶಕದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಅಮೆರಿಕದ ಪಾತ್ರ ವಿವರಿಸಲಾಗಿತ್ತು. ಆಗಿನ ರಕ್ಷಣಾ ಉತ್ಪಾದನಾ ಸಚಿವ ವಿ.ಸಿ.ಶುಕ್ಲಾ ಅವರು ರಾಜ್ಯಸಭೆಗೆ ನೀಡಿದ ಹೇಳಿಕೆಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿತ್ತು.

PREV

Recommended Stories

ಧರಾಲಿ ಪ್ರವಾಹಕ್ಕೆ ಮೇಘಸ್ಫೋಟ ಅಲ್ಲ, ಹಿಮಕೊಳ ಸ್ಫೋಟ ಕಾರಣ?
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?