ಸುದರ್ಶನ ಚಕ್ರ ಎಂದೇ ಖ್ಯಾತಿ ಪಡೆದ ಭಾರತದ ‘ಎಸ್‌-400’ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯು ಶತ್ರು ಕ್ಷಿಪಣಿಯನ್ನು 300 ಕಿ.ಮೀ. ದೂರದಿಂದಲೇ ಪತ್ತೆಹಚ್ಚಿ, ನಾಶ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ.  

ನವದೆಹಲಿ: ಸುದರ್ಶನ ಚಕ್ರ ಎಂದೇ ಖ್ಯಾತಿ ಪಡೆದ ಭಾರತದ ‘ಎಸ್‌-400’ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯು ಶತ್ರು ಕ್ಷಿಪಣಿಯನ್ನು 300 ಕಿ.ಮೀ. ದೂರದಿಂದಲೇ ಪತ್ತೆಹಚ್ಚಿ, ನಾಶ ಮಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆ ಇದೀಗ ಬಿಡುಗಡೆ ಮಾಡಿದೆ. ಇಷ್ಟೊಂದು ದೂರದ ಗುರಿ ಭೇದಿಸುವ ವಿಡಿಯೋ ರೆಕಾರ್ಡ್‌ ಮಾಡಿದ್ದು ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಆಕಾಶದಲ್ಲಿ ಬಹುದೂರದಿಂದ ಹಾರಿ ಬರುವ ಟಾರ್ಗೆಟ್‌ ಅನ್ನು ಗುರುತಿಸುತ್ತದೆ

ಈ ವಿಡಿಯೋದಲ್ಲಿ ಆಕಾಶದಲ್ಲಿ ಬಹುದೂರದಿಂದ ಹಾರಿ ಬರುವ ಟಾರ್ಗೆಟ್‌ ಅನ್ನು ವಾಯುರಕ್ಷಣಾ ವ್ಯವಸ್ಥೆ ಗುರುತಿಸುತ್ತದೆ. ನಂತರ ಕ್ಷಿಪಣಿಯನ್ನು ಹಾರಿಸಿ ಆ ಟಾರ್ಗೆಟ್‌ ಅನ್ನು ನಾಶ ಮಾಡುತ್ತದೆ. ಇದು ಆಪರೇಷನ್‌ ಸಿಂದೂರ ವೇಳೆ ಮಹತ್ವದ ಪಾತ್ರ ವಹಿಸಿತ್ತು.

ರಾಜಸ್ಥಾನದ ಪೋಖ್ರಣ್‌ನಲ್ಲಿ ನಡೆಯುವ ವಾಯು ಶಕ್ತಿ -2026 ಸಮರಾಭ್ಯಾಸ

ರಾಜಸ್ಥಾನದ ಪೋಖ್ರಣ್‌ನಲ್ಲಿ ನಡೆಯುವ ವಾಯು ಶಕ್ತಿ -2026 ಸಮರಾಭ್ಯಾಸದ ಭಾಗವಾಗಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಶತ್ರುಗಳು ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು, ಆದರೆ ತಲುಪಲಾರದಷ್ಟು ದೂರದಲ್ಲಿಲ್ಲ ಎಂಬ ಅರ್ಥದ ಟಿಪ್ಪಣಿಯನ್ನೂ ಈ ವಿಡಿಯೋಗೆ ನೀಡಲಾಗಿದೆ.

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಭಾರತವು ಪಾಕಿಸ್ತಾನದ ವಿಮಾನಗಳು, ಕ್ಷಿಪಣಿಗಳನ್ನು 300 ಕಿ.ಮೀ. ದೂರದಿಂದಲೇ ಎಸ್‌-400 ಬಳಸಿ ಹೊಡೆದುರುಳಿಸಿದೆ ಎಂಬ ವಾದವನ್ನು ಪುಷ್ಟೀಕರಿಸುವಂತೆ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.