ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.28ರಿಂದ 3 ದಿನ ಬ್ಯಾಂಕ್‌ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಶನಿವಾರ-ಭಾನುವಾರದ 2 ರಜಾ ದಿನ ಸೇರಿ ಬ್ಯಾಂಕ್‌ಗಳು 5 ದಿನ ಸ್ತಬ್ಧವಾಗುವ ಆತಂಕವಿತ್ತು.

ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.28ರಿಂದ 3 ದಿನ ಬ್ಯಾಂಕ್‌ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಶನಿವಾರ-ಭಾನುವಾರದ 2 ರಜಾ ದಿನ ಸೇರಿ ಬ್ಯಾಂಕ್‌ಗಳು 5 ದಿನ ಸ್ತಬ್ಧವಾಗುವ ಆತಂಕವಿತ್ತು. ಇದಕ್ಕೆ ಆಸ್ಪದ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಸಾರ್ವಜನಿಕ ವಲಯದ ಬ್ಯಾಂಕ್‌ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳು ಭಾನುವಾರ ಕಾರ್ಯನಿರ್ವಹಿಸಲಿವೆ ಎಂದು ಘೋಷಿಸಿದೆ.

ಗ್ರಾಹಕರ ಅನುಕೂಲಕ್ಕೆಂದು ಈ ನಿರ್ಧಾರ

ಗ್ರಾಹಕರ ಅನುಕೂಲಕ್ಕೆಂದು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ ಈಗಾಗಲೇ ಆರ್‌ಬಿಐ ಕೂಡ ಒಪ್ಪಿಗೆ ನೀಡಿದೆ ಎಂದು ವಿತ್ತ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಂಕ್‌ಗಳು ಆರ್ಥಿಕ ವರ್ಷದ ಮಧ್ಯಂತರದಲ್ಲಿ ಹಣಕಾಸಿನ ಲೆಕ್ಕಪತ್ರಗಳನ್ನು ಮುಕ್ತಾಯಗೊಳಿಸುವ (ಸೆ.30) ಸಮಯದಲ್ಲೇ ಮುಷ್ಕರ ನಡೆಯಲಿರುವ ಕಾರಣ, ಆ ಪ್ರಕ್ರಿಯೆಗೆ ಅನನುಕೂಲ ಆಗದೇ ಇರಲಿ ಎಂಬ ಉದ್ದೇಶವೂ ಇದೆ. ಈ ರೀತಿ ಭಾನುವಾರ ಬ್ಯಾಂಕ್‌ ತೆರೆಯುವುದು ಅಪರೂಪದಲ್ಲೇ ಅಪರೂಪವಾಗಿದೆ.

ಮುಷ್ಕರ ಏಕೆ?:

ವಾರದಲ್ಲಿ 5 ದಿನ ಮಾತ್ರ ಕೆಲಸ, ಪಿಂಚಣಿಯ ಪರಿಷ್ಕರಣೆ ಮತ್ತು ಸುಧಾರಣೆ, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್‌) ವ್ಯಾಪ್ತಿಗೆ ಒಳಪಡುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್‌) ಬದಲಾಯಿಸಿಕೊಳ್ಳುವ ಆಯ್ಕೆಯನ್ನು ಒದಗಿಸುವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ಯುಎಫ್‌ಬಿಯು ಮುಷ್ಕರ ನಡೆಸಲಿದೆ.