ಬ್ರಿಟನ್‌ನಲ್ಲಿ ದಿವಾಳಿ ಪ್ರಕ್ರಿಯೆ ಪ್ರಶ್ನಿಸಿದ್ದ ಮಲ್ಯ ಅರ್ಜಿ ವಜಾ

KannadaprabhaNewsNetwork | Published : Apr 10, 2025 1:01 AM

ಸಾರಾಂಶ

ಬ್ರಿಟನ್‌ ಕೋರ್ಟ್‌ನಲ್ಲಿ ದಿವಾಳಿ ಪ್ರಕ್ರಿಯೆ ಪ್ರಶ್ನಿಸಿದ್ದ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ಅವರಿಗೆ ಹಿನ್ನಡೆಯಾಗಿದೆ. ಅವರ ವಿರುದ್ಧ ದಿವಾಳಿ ಪ್ರಕ್ರಿಯೆ ಕೋರಿ ಮೇಲ್ಮನವಿ ಸಲ್ಲಿಸಿದ್ದ ಭಾರತದ ಬ್ಯಾಂಕ್‌ಗಳ ಅರ್ಜಿಯನ್ನು ಮನ್ನಿಸಿರುವ ಬ್ರಿಟನ್ ಹೈಕೋರ್ಟ್‌, ಫೆಬ್ರವರಿಯಲ್ಲಿ ವಿಚಾರಣೆ ಮಾಡುವುದಾಗಿ ಹೇಳಿದೆ.

ಲಂಡನ್: ಬ್ರಿಟನ್‌ ಕೋರ್ಟ್‌ನಲ್ಲಿ ದಿವಾಳಿ ಪ್ರಕ್ರಿಯೆ ಪ್ರಶ್ನಿಸಿದ್ದ ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ಅವರಿಗೆ ಹಿನ್ನಡೆಯಾಗಿದೆ. ಅವರ ವಿರುದ್ಧ ದಿವಾಳಿ ಪ್ರಕ್ರಿಯೆ ಕೋರಿ ಮೇಲ್ಮನವಿ ಸಲ್ಲಿಸಿದ್ದ ಭಾರತದ ಬ್ಯಾಂಕ್‌ಗಳ ಅರ್ಜಿಯನ್ನು ಮನ್ನಿಸಿರುವ ಬ್ರಿಟನ್ ಹೈಕೋರ್ಟ್‌, ಫೆಬ್ರವರಿಯಲ್ಲಿ ವಿಚಾರಣೆ ಮಾಡುವುದಾಗಿ ಹೇಳಿದೆ.

ಮಲ್ಯ ಭಾರತದಲ್ಲಿ 6 ಸಾವಿರ ಕೋಟಿ ರು. ಸಾಲ ಮಾಡಿ ಪರಾರಿಯಾದ ಆರೋಪ ಎದುರಿಸುತ್ತಿದ್ದಾರೆ. ಆದರೆ ತಮ್ಮ ಸಾಲಕ್ಕಿಂತ ದುಪ್ಪಟ್ಟು, ಎಂದರೆ 14 ಸಾವಿರ ಕೋಟಿ ರು.ಗಳನ್ನು ವಸೂಲಿ ಮಾಡಲಾಗಿದೆ ಎಂದು ವಾದಿಸಿ ದಿವಾಳಿ ಪ್ರಕ್ರಿಯೆ ಪ್ರಶ್ನಿಸಿದ್ದರು.

==

2024ರಲ್ಲಿ ನಿರುದ್ಯೋಗ ಪ್ರಮಾಣ ಶೇ.4.9ಕ್ಕೆ ಇಳಿಕೆ

ನವದೆಹಲಿ: ‘ದೇಶದಲ್ಲಿ 15 ವರ್ಷ ಅಥವಾ ಅದಕ್ಕಿಂತ ದೊಡ್ಡವರ ನಿರುದ್ಯೋಗ ಪ್ರಮಾಣವು ಶೇ.4.9ಕ್ಕೆ ಇಳಿದಿದೆ. ಇದು ಉದ್ಯೋಗಾವಕಾಶಗಳ ಸ್ವಲ್ಪ ಮಟ್ಟಿಗಿನ ಸುಧಾರಣೆಯನ್ನು ಸೂಚಿಸುತ್ತದೆ’ ಎಂದು ಬುಧವಾರ ಬಿಡುಗಡೆಯಾದ ಆವರ್ತಕರ ಕಾರ್ಮಿರ ಬಲ ಸಮೀಕ್ಷೆ (ಪಿಎಲ್‌ಎಫ್‌ಎಸ್‌) ವರದಿ ಹೇಳಿದೆ.ವರದಿ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ನಿರುದ್ಯೋಗದ ಪ್ರಮಾಣ ಕೊಂಚ ಇಳಿಕೆಯಾಗಿದ್ದು, ಶೇ.4.3ರಿಂದ 4.2ಕ್ಕೆ ಕುಸಿದಿದೆ. ನಗರ ಪ್ರದೇಶದಲ್ಲಿ ಒಟ್ಟಾರೆ ಶೇ.6.7ರಷ್ಟು ನಿರುದ್ಯೋಗವಿದೆ. ಅದರಲ್ಲಿ ಕಳೆದ ಬಾರಿಗಿಂತ ಈ ಸಲ ಪುರುಷರ ಪ್ರಮಾಣ ಶೇ.6 ರಿಂದ ಶೇ.6.1ಕ್ಕೆ ಏರಿಕೆಯಾಗಿದ್ದರೆ, ಮಹಿಳೆಯರ ಪ್ರಮಾಣ ಶೇ.8.9ರಿಂದ ಶೇ.8.2ಕ್ಕೆ ಕುಸಿದಿದೆ.

==

₹64,000 ಕೋಟಿ ವೆಚ್ಚದ 26 ರಫೇಲ್ ಖರೀದಿಗೆ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ, ಫ್ರಾನ್ಸ್‌ನಿಂದ ಸುಮಾರು 64,000 ಕೋಟಿ ರು. ವೆಚ್ಚದಲ್ಲಿ 26 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಿದೆ.ಭಾರತ ಮತ್ತು ಫ್ರಾನ್ಸ್‌ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಿದ 5 ವರ್ಷಗಳ ನಂತರ ಯುದ್ಧವಿಮಾನ ಹಂಚಿಕೆ ಪ್ರಾರಂಭವಾಗುತ್ತದೆ. ಈ ಫೈಟರ್‌ ಜೆಟ್‌ಗಳನ್ನು ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಬಳಸಲಾಗುತ್ತದೆ. ಈ ಒಪ್ಪಂದದ ಅಡಿಯಲ್ಲಿ ಭಾರತೀಯ ನೌಕಾಪಡೆಯ ರಫೇಲ್‌ ಸಾಗರ ಜೆಟ್‌ಗಳ ತಯಾರಕರಾದ ಡಸಾಲ್ಟ್‌ ಏವಿಯೇಷನ್‌ನಿಂದ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಬಿಡಿಭಾಗಗಳು ಸೇರಿದಂತೆ ಸಂಬಂಧಿತ ಪೂರಕ ಉಪಕರಣಗಳನ್ನು ಪಡೆಯಲಿದೆ.

==

ಅಮೆರಿಕ ವರ್ಕ್‌ ವೀಸಾ ರದ್ದು ಸಂಭವ: 3 ಲಕ್ಷ ಭಾರತೀಯರಿಗೆ ಕುತ್ತು?

ವಾಷಿಂಗ್ಟನ್: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಪದವಿ ಪಡೆದ ವಿದ್ಯಾರ್ಥಿಗಳು ಅಮೆರಿಕದ ಕಂಪನಿಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ನೀಡುವ ವರ್ಕ್‌ ವೀಸಾ ಅನ್ನು ಅಮೆರಿಕ ಸಂಸತ್ತು ರದ್ದು ಮಾಡುವ ಸಂಭವವಿದೆ. ಇದರಿಂದ ಅಲ್ಲಿರುವ 3 ಲಕ್ಷ ಭಾರತೀಯ ವಿದ್ಯಾರ್ಥಿಗಳಿಗೆವಾತಂಕ ಶುರುವಾಗಿದೆ.ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದ್ದು ವರ್ಕ್‌ ವೀಸಾಗೆ ಎಡೆ ಮಾಡಿಕೊಡುವ ಐಚ್ಛಿಕ ಪ್ರಾಯೋಗಿಕ ತರಬೇತಿ (ಒಪಿಟಿ) ಕಾರ್ಯಕ್ರಮವನ್ನು ರದ್ದುಗೊಳಿಸುವ ಪ್ರಸ್ತಾಪ ಇರಿಸಲಾಗಿದೆ. 2024 ಒಂದರಲ್ಲೇ 97,556 ಭಾರತೀಯ ವಿದ್ಯಾರ್ಥಿಗಳು ಈ ವೀಸಾ ಮೇಲೆ ಅಮೆರಿಕಕ್ಕೆ ತೆರಳಿದ್ದರು.

==

ಭಾರತದ ಮೂಲಕ ಬಾಂಗ್ಲಾ ವಸ್ತು ಸಾಗಣೆಗೆ ನಿರ್ಬಂಧ

ನವದೆಹಲಿ: ಭಾರತದ ನೆಲ ಬಳಸಿಕೊಂಡು ನೇಪಾಳ, ಭೂತಾನ್‌ ಹಾಗೂ ಮ್ಯಾನ್ಮಾರ್‌ಗೆ ತನ್ನ ವಸ್ತುಗಳನ್ನು ಸಾಗಿಸುತ್ತಿದ್ದ ಬಾಂಗ್ಲಾದೇಶದ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಚೀನಾ ಪರ ಮಾತನಾಡುತ್ತಿದ್ದ ಬಾಂಗ್ಲಾ ಆಡಳಿತ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ಗೆ ದಿಟ್ಟ ಎದಿರೇಟು ನೀಡಿದೆ.2020ರಿಂದ ಭಾರತದ ನೆಲದ ಮೂಲಕ ಈ 3 ದೇಶಗಳಿಗೆ ತನ್ನ ಉತ್ಪನ್ನಗಳನ್ನು ಬಾಂಗ್ಲಾದೇಶ ಸಾಗಿಸುತ್ತಿತ್ತು. ಆದರೆ ಇತ್ತೀಚೆಗೆ ಭಾರತ ವಿರೋಧಿ ನಿಲುವು ತಳೆದ ಕಾರಣ ಬಾಂಗ್ಲಾ ಮೇಲೆ ನಿರ್ಬಂಧಕ್ಕೆ ಭಾರತೀಯ ವ್ಯಾಪಾರಿಗಳು ಆಗ್ರಹಿಸಿದ್ದರು. ಹೊಸ ನಿರ್ಬಂಧದಿಂದ ಬಾಂಗ್ಲಾ ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ.

Share this article