ಉಲ್ಟಾ ಹೊಡೆದ ಟ್ರಂಪ್: 90 ದಿನ ತೆರಿಗೆ ಹೊಡೆತಕ್ಕೆ ತಡೆ

KannadaprabhaNewsNetwork |  
Published : Apr 10, 2025, 01:01 AM IST
ಟ್ರಂಪ್‌ | Kannada Prabha

ಸಾರಾಂಶ

ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್‌ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ತಡರಾತ್ರಿ ಉಲ್ಟಾ ಹೊಡೆದಿದ್ದು, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ.

75 ದೇಶಗಳ ಮೇಲಿನ ತೆರಿಗೆಗೆ ತಡೆ

ಆದರೆ ಚೀನಾ ಮೇಲಿನ ತೆರಿಗೆ ಶೇ.104ರಿಂದ 125ಕ್ಕೆ ಹೆಚ್ಚಳವಾಷಿಂಗ್ಟನ್: ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್‌ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ತಡರಾತ್ರಿ ಉಲ್ಟಾ ಹೊಡೆದಿದ್ದು, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ.

‘ಅಮೆರಿಕ ತೆರಿಗೆ ಹೇರಿದ ಬಳಿಕ ಸುಮಾರು 75 ದೇಶಗಳು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಅಮೆರಿಕದ ಜತೆ ಸಂಧಾನಕ್ಕೆ ಆಗಮಿಸಿವೆ. ಹೀಗಾಗಿ ನಾನು ಅವುಗಳ ಮೇಲೆ 90 ದಿನ ತೆರಿಗೆ ಹೇರಿಕೆ ಮುಂದೂಡಲು ನಿರ್ಧರಿಸಿದ್ದೇನೆ. ಅವುಗಳ ಮೇಲೆ ಶೇ.10 ಮೂಲ ಆಮದು ತೆರಿಗೆ ಮುಂದುವರಿಯಲಿದೆ. ಆದರೆ ಚೀನಾ ಮಾತ್ರ ಸುಮ್ಮನಿರದೇ ನಮ್ಮ ಮೇಲೆ ಪ್ರತಿತೆರಿಗೆ ಹೇರಿದೆ. ಹೀಗಾಗಿ ಚೀನಾ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಶೇ.125ಕ್ಕೆ ಹೆಚ್ಚಿಸಿದ್ದೇನೆ’ ಎಂದು ತಮ್ಮ ಟ್ರುತ್‌ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ.

==

ತೆರಿಗೆ ಒಪ್ಪಂದಕ್ಕಾಗಿ ನನ್ನ ಪೃಷ್ಠ ನೆಕ್ಕುತ್ತಿರುವ ದೇಶಗಳು: ಟ್ರಂಪ್‌

ಒಪ್ಪಂದಕ್ಕಾಗಿ ಹಲವು ದೇಶಗಳು ದಂಬಾಲು ಬೀಳುತ್ತಿವೆ

ಒಪ್ಪಂದಕ್ಕಾಗಿ ದೇಶಗಳು ಹತಾಶಗೊಂಡಿವೆ

ಒಪ್ಪಂದಕ್ಕಾಗಿ ಏನು ಮಾಡಲೂ ಸಿದ್ಧ ಎನ್ನುತ್ತಿವೆ: ಕೀಳು ನುಡಿ

ವಾಷಿಂಗ್ಟನ್‌: ‘ಅಮೆರಿಕ ಹಾಕಿರುವ ಆಮದು ತೆರಿಗೆಗೆ ಥರಗುಟ್ಟಿರುವ ಹಲವು ದೇಶಗಳು ನಮ್ಮ ಜತೆಗೆ ತೆರಿಗೆ ಒಪ್ಪಂದ ಮಾಡಿಕೊಳ್ಳಿ ಎಂದು ನನಗೆ ದಂಬಾಲು ಬೀಳುತ್ತಿವೆ. ತೆರಿಗೆ ಒಪ್ಪಂದಕ್ಕಾಗಿ ಅವರ ನನ್ನ ಪೃಷ್ಠವನ್ನು ನೆಕ್ಕುತ್ತಿದ್ದಾರೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೀಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಪ್ರತಿ ತೆರಿಗೆ ಹೇರಿರುವ ದೇಶಗಳು ಯಾವ ರೀತಿ ಹತಾಶಗೊಂಡಿವೆ ಎಂಬುದರ ಕುರಿತು ವ್ಯಂಗ್ಯವಾಡಿದ್ದಾರೆ.

ನ್ಯಾಷನಲ್‌ ರಿಪಬ್ಲಿಕನ್‌ ಕಾಂಗ್ರೆಸ್ಸೆಷನಲ್‌ ಕಮಿಟಿ ಜತೆಗಿನ ಸಭೆಯಲ್ಲಿ ಮಾತನಾಡಿದ ಅವರು, ‘ನಾವು ಪ್ರತಿ ತೆರಿಗೆ ಹೇರಿರುವ ದೇಶಗಳಿಂದ ನನಗೆ ಕರೆಗಳು ಬರುತ್ತಿವೆ. ತೆರಿಗೆ ಒಪ್ಪಂದ ಮಾಡಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಅ‍ವರು ನನ್ನ ಪಷ್ಠ ನೆಕ್ಕುತ್ತಿದ್ದಾರೆ’ ಎಂದು ಹೇಳಿದ್ದಾರೆ.ನಾನು ಒಳ್ಳೆಯ ಸಂಧಾನಕಾರ:

ತೆರಿಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಸಂಸತ್ತಿಗೆ (ಕಾಂಗ್ರೆಸ್‌ಗೆ) ಅವಕಾಶ ನೀಡುವಂತೆ ಕೆಲ ಬಂಡಾಯ ರಿಪಬ್ಲಿಕನ್ನರು ಕೋರುತ್ತಿದ್ದಾರೆ. ಆದರೆ, ನಾನು ಸಂಧಾನ ಮಾಡುವ ರೀತಿಯಲ್ಲಿ ಅವರಿಗೆ ಸಂಧಾನ ಮಾಡಲು ಸಾಧ್ಯವಿಲ್ಲ. ಅಮರಿಕದ ಕಾಂಗ್ರೆಸ್‌ಗಿಂತ ನಾನು ಒಳ್ಳೆಯ ಸಂಧಾನಕಾರ. ಒಂದು ವೇಳೆ ಅಮೆರಿಕದ ಕಾಂಗ್ರೆಸ್‌ಗೆ ಅವಕಾಶ ನೀಡುತ್ತಿದ್ದರೆ ಚೀನಾ ಮೇಲೆ ಶೇ.104ರಷ್ಟು ತೆರಿಗೆ ವಿಧಿಸುವುದು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್‌ಗೆ ಸಂಧಾನದ ಅಧಿಕಾರ ನೀಡಿದರೆ ಚೀನಾಗೆ ಖುಷಿಯಾಗುತ್ತದೆ. ಯಾಕೆಂದರೆ ಚೀನಾ ಬದಲು ನಾವೇ ಅವರಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಕಾಂಗ್ರೆಸ್‌ನ ಸಂಧಾನ ಅಮೆರಿಕವನ್ನೇ ಮಾರಾಟ ಮಾಡುತ್ತದೆ ಎಂದು ಕಾಲೆಳೆದಿದ್ದಾರೆ.

==

ಫಾರ್ಮಾ ಕ್ಷೇತ್ರದ ಮೇಲೂ ಶೀಘ್ರ ತೆರಿಗೆ: ಟ್ರಂಪ್‌

ಭಾರತದ ಫಾರ್ಮಾ ಕಂಪನಿಗಳಲ್ಲಿ ಆತಂಕ

ಅಮೆರಿಕಕ್ಕೆ 75,450 ಕೋಟಿ ರು. ಔಷಧ ರಫ್ತು

ನಮ್ಮ ಔಷಧದ ರಫ್ತಿನ ಶೇ.31 ಭಾಗ ಅಮೆರಿಕಕ್ಕೆ

ವಾಷಿಂಗ್ಟನ್‌: ಅಮೆರಿಕದ ಪ್ರತಿ ತೆರಿಗೆ ಬಿಸಿಯು ಇದೀಗ ಭಾರತದ ಫಾರ್ಮಾ (ಔಷಧ) ಕ್ಷೇತ್ರದ ಮೇಲೂ ಬೀಳುವುದು ಸ್ಪಷ್ಟವಾಗಿದೆ. ಈವರೆಗೆ ಫಾರ್ಮಾ ಕ್ಷೇತ್ರವನ್ನು ಪ್ರತಿ ತೆರಿಗೆಯಿಂದ ಹೊರಗಿಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ಆ ಕ್ಷೇತ್ರದ ಮೇಲೂ ಶೀಘ್ರದಲ್ಲಿ ತೆರಿಗೆ ಹೇರಲಿದ್ದೇನೆ ಎಂದಿದ್ದಾರೆ.

ಭಾರತದ ಫಾರ್ಮಾ ಉದ್ಯಮವು ಅಮೆರಿಕದ ಮೇಲೆ ಹೆಚ್ಚು ಅವಲಂಬವಿತವಾಗಿದೆ. ಒಂದು ವೇಳೆ ಈ ಕ್ಷೇತ್ರದ ಮೇಲೆ ತೆರಿಗೆ ಹೇರಿದರೆ ಅದು ಈ ಕಂಪನಿಗಳ ಮೇಲೆ ಭಾರೀ ಹೊಡೆತ ನೀಡಲಿದೆ ಎಂಬ ಆತಂಕ ಶುರುವಾಗಿದೆ. ಏಕೆಂದರೆ ಭಾರತದಿಂದ 2,41,731 ಲಕ್ಷ ಕೋಟಿ ರು. ಔಷಧ ರಫ್ತು ಆಗುತ್ತಿದ್ದು, ಇದರಲ್ಲಿ ಅಮೆರಿಕದ ಶೇ.31 (75 ಸಾವಿರ ಕೋಟಿ ರು.) ಆಗಿದೆ ಎಂದು ಫಾರ್ಮಾಸ್ಯುಟಿಕಲ್ಸ್‌ ಎಕ್ಸ್‌ಪೋರ್ಟ್‌ ಪ್ರೊಮೋಷನ್‌ ಕೌನ್ಸಿಲ್‌ ಆಫ್‌ ಇಂಡಿಯಾ ಹೇಳಿದೆ.ವರದಿ ಪ್ರಕಾರ ಭಾರತವು ಶೇ.45ರಷ್ಟು ಜನರಿಕ್‌ ಮತ್ತು ಶೇ.15ರಷ್ಟು ಬಯೋಸಿಮಿಲರ್‌ ಡ್ರಗ್ಸ್‌ಗಳನ್ನು ಅಮೆರಿಕಕ್ಕೆ ಪೂರೈಸುತ್ತದೆ. ಡಾ.ರೆಡ್ಡಿ, ಅರಬಿಂದೋ ಫಾರ್ಮಾ, ಜೈಡಸ್‌ ಲೈಫ್‌ಸೈನ್ಸ್‌, ಸನ್‌ ಫಾರ್ಮಾ ಮತ್ತು ಗ್ಲ್ಯಾಂಡ್‌ ಫಾರ್ಮಾದಂಥ ಕಂಪನಿಗಳ ಒಟ್ಟಾರೆ ಶೇ.30ರಿಂದ 50ರಷ್ಟು ಆದಾಯ ಅಮೆರಿಕದ ಮಾರುಕಟ್ಟೆಯಿಂದಲೇ ಬರುತ್ತದೆ.

ಒಂದು ವೇಳೆ ಅಮೆರಿಕವು ಭಾರತದ ಫಾರ್ಮಾ ಆಮದಿನ ಮೇಲೆ ತೆರಿಗೆ ವಿಧಿಸಿದರೆ ಭಾರತ ಮಾತ್ರವಲ್ಲದೆ ಅಮೆರಿಕದ ಮೇಲೂ ಇದರ ಪರಿಣಾಮ ಬೀರಲಿದೆ. ಆಗ ಔಷಧಗಳ ಬೆಲೆ ಅನಿವಾರ್ಯವಾಗಿ ಹೆಚ್ಚಿಸಬೇಕಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ಔಷಧಗಳು ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ